ಬಡವರ ಡಾಕ್ಟರ್ ಆಗಿದ್ದ ಮಾಜಿ ಶಾಸಕ ಡಾ.ಚಿತ್ತರಂಜನ್ ಕಲಕೋಟಿ ನಿಧನ: ಸೋಮವಾರ ಹುಟ್ಟೂರಲ್ಲಿ ಅಂತ್ಯಕ್ರಿಯೆ

Chittaranjan Kalakoti Death: ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪನಿಗೆ ಗುಂಡು ಹಾರಿಸಿ ಸಾಯಿಸಿದರು. ಆ ನಂತರದಲ್ಲಿ ಮೈಲಾರ ಮಹಾದೇವಪ್ಪನವರು ವಾಸವಾಗಿದ್ದ ಗ್ರಾಮದಲ್ಲಿರುವ ಅವರ ಆಶ್ರಮ ಖಾಲಿ ಉಳಿದಿತ್ತು. ಗ್ರಾಮಸ್ಥರೆಲ್ಲ ಸೇರಿಕೊಂಡು ಅದನ್ನೆ ಚಿತ್ತರಂಜರಿಗೆ ಆಸ್ಪತ್ರೆ ನಡೆಸುವುದಕ್ಕೆ ನೀಡಿದರು.

ಬಡವರ ಡಾಕ್ಟರ್ ಆಗಿದ್ದ ಮಾಜಿ ಶಾಸಕ ಡಾ.ಚಿತ್ತರಂಜನ್ ಕಲಕೋಟಿ ನಿಧನ: ಸೋಮವಾರ ಹುಟ್ಟೂರಲ್ಲಿ ಅಂತ್ಯಕ್ರಿಯೆ
ಡಾ. ಚಿತ್ತರಂಜನ್ ಕಲಕೋಟಿ
Follow us
TV9 Web
| Updated By: ganapathi bhat

Updated on: Aug 15, 2021 | 9:37 PM

ಹಾವೇರಿ: ಬಡವರ ಡಾಕ್ಟರ್ ಎಂದು ಹೆಸರಾಗಿದ್ದ ಹಾವೇರಿ ತಾಲೂಕಿನ ಕೊರಡೂರು ಗ್ರಾಮದ ಮಾಜಿ ಶಾಸಕ ಡಾ.ಚಿತ್ತರಂಜನ್ ಕಲಕೋಟಿ ವಿಧಿವಶರಾಗಿದ್ದಾರೆ. ತೊಂಬತ್ತು ವರ್ಷ ವಯಸ್ಸಿನ ಡಾ.ಚಿತ್ತರಂಜನ್, ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಡಾ.ಚಿತ್ತರಂಜನ್ ಇವತ್ತು (ಆಗಸ್ಟ್ 15) ಮಧ್ಯಾಹ್ನ ನಾಲ್ಕು ಗಂಟೆಯ ವೇಳೆಗೆ ಮೃತಪಟ್ಟಿದ್ದಾರೆ. ಸೋಮವಾರ (ಆಗಸ್ಟ್ 16) ಮಧ್ಯಾಹ್ನ ಎರಡು ಗಂಟೆಗೆ ಮೃತರ ಅಂತ್ಯಕ್ರಿಯೆ ಕೊರಡೂರು ಗ್ರಾಮದಲ್ಲಿ ನಡೆಯಲಿದೆ.

ಡಾ.ಚಿತ್ತರಂಜನ ಕಲಕೋಟಿ ಹಾವೇರಿ ತಾಲೂಕಿನ ಕೊರಡೂರು ಗ್ರಾಮದವರು. ಜೂನ್ 11, 1931ರಲ್ಲಿ ಕೊರಡೂರು ಗ್ರಾಮದಲ್ಲಿ ಚನ್ನಬಸಪ್ಪ ಮತ್ತು ಬಸಮ್ಮ ದಂಪತಿಯ ಪುತ್ರರಾಗಿ ಜನಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದು ಕೊರಡೂರು ಗ್ರಾಮದಲ್ಲಿ. 1959ರಲ್ಲಿ ವೈದ್ಯಕೀಯ ಪದವಿ ಪಡೆದ ಚಿತ್ತರಂಜನರು ಅಣ್ಣನ ಆಸೆಯಂತೆ ಮರಳಿ ಹುಟ್ಟೂರು ಕೊರಡೂರರಿಗೆ ಬಂದರು. ನಂತರ 1961 ರಿಂದ ವೈದ್ಯಕೀಯ ಸೇವೆ ಆರಂಭಿಸಿದರು. ಆಗ ಗ್ರಾಮದಲ್ಲಿ ಆಸ್ಪತ್ರೆ ನಡೆಸುವುದಕ್ಕೆ ಚಿತ್ತರಂಜನರಿಗೆ ಒಂದು ಕಟ್ಟಡದ ಅವಶ್ಯಕತೆ ಇತ್ತು. 1943ರಲ್ಲಿ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವಪ್ಪನಿಗೆ ಗುಂಡು ಹಾರಿಸಿ ಸಾಯಿಸಿದರು. ಆ ನಂತರದಲ್ಲಿ ಮೈಲಾರ ಮಹಾದೇವಪ್ಪನವರು ವಾಸವಾಗಿದ್ದ ಗ್ರಾಮದಲ್ಲಿರುವ ಅವರ ಆಶ್ರಮ ಖಾಲಿ ಉಳಿದಿತ್ತು. ಗ್ರಾಮಸ್ಥರೆಲ್ಲ ಸೇರಿಕೊಂಡು ಅದನ್ನೆ ಚಿತ್ತರಂಜರಿಗೆ ಆಸ್ಪತ್ರೆ ನಡೆಸುವುದಕ್ಕೆ ನೀಡಿದರು. ಅಲ್ಲಿಂದ ಚಿತ್ತರಂಜನರು ಇದೇ ಕಟ್ಟಡದಲ್ಲಿ ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಿದರು. ಚಿತ್ತರಂಜನ ಕಲಕೋಟಿ ಅವರದ್ದು ಶ್ರೀಮಂತ ಮನೆತನ. ಅವರಿಗೆ ಪಿತ್ರಾರ್ಜಿತ ಆಸ್ತಿಯಿದೆ. ಹೀಗಾಗಿ ಅಣ್ಣನ ಬಯಕೆಯಂತೆ ಸಾಮಾಜಿಕ ಸೇವೆ ಮಾಡಲು ಮುಂದಾದರು. ತಾವು ಪಡೆದಿದ್ದ ವೈದ್ಯಕೀಯ ಪದವಿಯನ್ನೆ ಸಾಮಾಜಿಕ ಸೇವೆಗಾಗಿ ಮೀಸಲಿರಿಸಿದರು.

ಬಡವರಿಗಾಗಿ ಆರಂಭವಾಯ್ತು ಆಸ್ಪತ್ರೆ  ವೈದ್ಯಕೀಯ ಕೋರ್ಸ್ ಮುಗಿಸಿ ಸ್ವಾಗ್ರಾಮಕ್ಕೆ ಮರಳಿದ ಮೇಲೆ ಚಿತ್ತರಂಜನ ಕಲಕೋಟಿಯವರು ವೈದ್ಯಕೀಯ ವೃತ್ತಿ ಆರಂಭಿಸಿದರು. ಸಣ್ಣ ಪುಟ್ಟ ಯಾವುದೇ ಕಾಯಿಲೆ ಬಂದರೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಚಿತ್ತರಂಜನ ಡಾಕ್ಟರ್ ಹತ್ತಿರ ಬರಲಾರಂಭಿಸಿದರು. ಆದರೆ ಸಮಾಜ ಸೇವೆ ಮಾಡಬೇಕು ಎಂದು ವೃತ್ತಿ ಆರಂಭಿಸಿದ ಚಿತ್ತರಂಜನ,‌ ರೋಗಿಗಳಿಂದ ಹಣ ಕೀಳುವ ಕೆಲಸಕ್ಕೆ ಕೈ ಹಾಕಲಿಲ್ಲ.‌ ಹಣ ಇಲ್ಲ ಎಂದು ಬಂದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಆರಂಭಿಸಿದರು. ಪಿತ್ರಾರ್ಜಿತ ಆಸ್ತಿ ಸಾಕಷ್ಟು ಇರುವಾಗ ಹೆಚ್ಚಿನ ಹಣ ನಮಗ್ಯಾಕೆ ಎಂದು ಉಚಿತವಾಗಿ ವೈದ್ಯಕೀಯ ಸೇವೆ ಆರಂಭಿಸಿದರು. ಹೇಳಿ ಕೇಳಿ ಕೊರಡೂರು ಕುಗ್ರಾಮ ಆಗಿತ್ತು. ಸುತ್ತಮುತ್ತಲಿನ ಗ್ರಾಮಗಳೂ ಅಷ್ಟಾಗಿ ಅಭಿವೃದ್ದಿ ಕಂಡಿರಲಿಲ್ಲ. ಹೀಗಾಗಿ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಶುರು ಮಾಡಿದ ಕೆಲವೆ ವರ್ಷಗಳಲ್ಲಿ ಈಡಿ ತಾಲೂಕಿನಲ್ಲಿ ಪೇಮಸ್ ಡಾಕ್ಟರ್ ಆಗಿ ಹೆಸರು ಮಾಡಿದರು.

ರಾಜಕೀಯಕ್ಕೆ ಕ್ಷೇತ್ರಕ್ಕೆ ಬಂದ ಡಾಕ್ಟರ್  ಅದು 1983ರ ಸಮಯ. ಇಪ್ಪತ್ತು ವರ್ಷಗಳ ಕಾಲ ಕೊರಡೂರು ಮಾತ್ರವಲ್ಲ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲೂ ಖ್ಯಾತರಾಗಿದ್ದ ಆಗಿದ್ದ ಡಾಕ್ಟರ ಚಿತ್ತರಂಜನರಿಗೆ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಜನರು ಒತ್ತಾಯ ಮಾಡಿದರು. ಉಚಿತ ಸೇವೆ ಮೂಲಕ ಹೆಸರು ಮಾಡಿದ್ದ ಡಾಕ್ಟರ್ ಚಿತ್ತರಂಜನರು ಜನರ ಒತ್ತಾಸೆಯಂತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಮೊದಲ ಬಾರಿಗೆ 1983ರಲ್ಲಿ ರಾಮಕೃಷ್ಣ ಹೆಗಡೆ ಅವರ ಜನತಾಪಕ್ಷದಿಂದ ಸ್ಪರ್ಧಿಸಿ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅದಾದ ಮೇಲೆ ಮತ್ತೊಂದು ಬಾರಿ ಅಂದರೆ 1985ರಲ್ಲಿ ಸತತವಾಗಿ ಎರಡನೇ ಬಾರಿಗೆ ಚಿತ್ತರಂಜನರು ಶಾಸಕರಾಗಿ ಆಯ್ಕೆಯಾದರು. ಅದಕ್ಕೂ ಮೊದಲು ತಾಲೂಕಿನಲ್ಲಿ ಜನರ ಒತ್ತಾಯಕ್ಕೆ ಮಣಿದು ಸಣ್ಣಪುಟ್ಟ ರಾಜಕೀಯ ಮಾಡಿಕೊಂಡಿದ್ದ ವೈದ್ಯ ಚಿತ್ತರಂಜನ ಕಲಕೋಟಿ ಅದಾಗಲೇ ಟಿಡಿಪಿ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ ರಾಜಕೀಯ ಅನುಭವ ಪಡೆದಿದ್ದರು.

CC Kalakoti Haveri MLA (1)

ರಾಮಕೃಷ್ಣ ಹೆಗಡೆ ಜೊತೆಗೆ ಚಿತ್ತರಂಜನ್ ಕಲಕೋಟಿ

ಜನತಾಪಕ್ಷದಿಂದ ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದ ಶಾಸಕ ಚಿತ್ತರಂಜನ ಕಲಕೋಟಿ ದಿವಂಗತ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಪ್ತರಲ್ಲಿ ಗುರುತಿಸಿಕೊಂಡಿದ್ದರು. ತಾಲೂಕಿನಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದರು. ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದಲ್ಲಿ ಆರಂಭವಾಗಿದ್ದ ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮೊಲದ ಬಾರಿಗೆ ಕಬ್ಬು ನುರಿಯುವ ಕಾರ್ಯಕ್ಕೆ ಚಾಲನೆ ನೀಡಿದರು. ಜೊತೆಗೆ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಆರೇಳು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು.

CC Kalakoti Haveri MLA

ಚಿತ್ತರಂಜನ್ ಕಲಕೋಟಿ ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದರು

ಕಲಕೋಟಿ ಅವರು 1985ರ ನಂತರ ರಾಜಕೀಯದಿಂದ ಕೊಂಚ ವಿಶ್ರಾಂತಿ ಪಡೆದರು. ಮತ್ತೆ ಗ್ರಾಮದಲ್ಲಿ ವೈದ್ಯಕೀಯ ವೃತ್ತಿ ಶುರುವಿಟ್ಟುಕೊಂಡಿದ್ದರು. ಜನ ಸೇವೆಯೇ ಜನಾರ್ದನ ಸೇವೆ ಎಂದು ನಂಬಿದ್ದ ಡಾಕ್ಟರ್ ಚಿತ್ತರಂಜರಿಗೆ 1994ರಲ್ಲಿ ಮತ್ತೊಮ್ಮೆ ಚುನಾವಣೆಗೆ ನಿಲ್ಲುವಂತೆ ಜನರು ಒತ್ತಾಯ ಮಾಡಿದರು. 1994ರ ವೇಳೆಗೆ ಹಣವಿಲ್ಲದ ಚುನಾವಣೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಎರಡು ಬಾರಿ ಜನರು ಚುನಾವಣೆಯಲ್ಲಿ ಗೆಲ್ಲಿಸಿದ್ದರಿಂದ ಜನರ ಮೇಲೆ ವಿಶ್ವಾಸವಿಟ್ಟು ಮೂರನೇ ಬಾರಿಗೆ ಚಿತ್ತರಂಜನರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಮೂರನೇ ಬಾರಿಗೆ ಚಿತ್ತರಂಜನರಿಗೆ ಗೆಲುವು ಸಿಗಲಿಲ್ಲ.

CC Kalakoti Haveri MLA with Ramakrishna Hegade

ರಾಮಕೃಷ್ಣ ಹೆಗಡೆ ಜೊತೆಗೆ ಚಿತ್ತರಂಜನ್ ಕಲಕೋಟಿ

ಒಂದು ಬಾರಿ ಶಾಸಕರಾದರೆ ಸಾಕು ಅಲ್ಪನಿಗೆ ಐಶ್ವರ್ಯ ಬಂದಂತಾಗುತ್ತದೆ. ಆದರೆ ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿ,‌ ಬಡವರ್ಗದ ಜನರಿಗೆ ಉಚಿತೆ ಚಿಕಿತ್ಸೆ ನೀಡುತ್ತಾ ಸಮಾಜಮುಖಿ ಕೆಲಸ ಮಾಡಿದ್ದ ಮಾಜಿ ಶಾಸಕ ಡಾ.ಚಿತ್ತರಂಜನ್ ಕಲಕೋಟಿಯವರ ನಿಧನಕ್ಕೆ ಗ್ರಾಮದ ಜನರು ಕಂಬನಿ ಮಿಡಿದಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಮಾಜಿ ಶಾಸಕರಾದ ಡಾ.ಚಿತ್ತರಂಜನ್ ಕಲಕೋಟಿ ಅವರು ಇಂದು ನಿಧನರಾದ ವಿಷಯ ತಿಳಿದು ನನಗೆ ಅತ್ಯಂತ ದುಃಖವಾಯಿತು. 1983-85 ರ ಅವಧಿಯಲ್ಲಿ ಹಾವೇರಿ ವಿಧಾನಸಭಾ ಮತಕ್ಷೇತ್ರವನ್ನು ಜನತಾದಳ ಮತ್ತು ಜನತಾ ಪಕ್ಷದಿಂದ ಪ್ರತಿನಿಧಿಸಿದ್ದ ಅವರು, ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಮ್ಮ ತಂದೆಯವರಾದ ದಿವಂಗತ ಎಸ್.ಆರ್.ಬೊಮ್ಮಾಯಿ ಅವರೊಡನೆ ನಿಕಟವಾದ ಸಂಪರ್ಕವನ್ನು ಹೊಂದಿದವರಾಗಿದ್ದು, ಜನತಾದಳ ಮತ್ತು ಜನತಾಪಕ್ಷವನ್ನು ಕಟ್ಟುವಲ್ಲಿ ಶ್ರಮಿಸಿದವರಾಗಿದ್ದರು. ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ವೈದ್ಯಕೀಯರಂಗದಲ್ಲಿ ಸಹ ಬಡವರ ಕಣ್ಣೀರನ್ನು ಒರೆಸುವಂತಹ ಕೆಲಸವನ್ನು ಮಾಡಿದ್ದರು. ವೈದ್ಯರಾಗಿ ಹಾಗೂ ಸಮಾಜ ಸೇವಕರಾಗಿ ಸೇವೆ ಸಲ್ಲಿಸಿರುವ ಡಾ.ಚಿತ್ತರಂಜನ್ ಅವರ ನಿಧನದಿಂದ ಸಮಾಜಕ್ಕೆ ಹಾಗೂ ನಮ್ಮ ಹಾವೇರಿ ಜಿಲ್ಲೆಗೆ ನಷ್ಟವಾಗಿದೆ. ಇಂತಹ ಈ ದುಃಖದ ಸಂದರ್ಭದಲ್ಲಿ ಅವರ ಆತ್ಮಕ್ಕೆ ಆ ದೇವರು ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ವರದಿ: ಪ್ರಭುಗೌಡ ಎನ್. ಪಾಟೀಲ, ಟಿವಿ9 ಹಾವೇರಿ

ಇದನ್ನೂ ಓದಿ: ಹಾವೇರಿ: ಕ್ರಿಕೆಟ್ ಆಡುತ್ತಿದ್ದ ಹುಡುಗರಿಂದ ಬದುಕಿತು ಬಡಜೀವ, ನಾಯಿಗಳ ದಾಳಿಯಿಂದ ಜಿಂಕೆಯ ರಕ್ಷಣೆ

ಅಭಿನವ ವಾಲ್ಮೀಕಿ ಖ್ಯಾತಿಯ, ಯಕ್ಷಗಾನ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ನಿಧನ