ಹಾವೇರಿಯಲ್ಲಿ ‘ರಾಕ್ಷಸ’ನ ಹುಟ್ಟುಹಬ್ಬ ಭರ್ಜರಿಯಾಗಿ ಆಚರಣೆ! 40 ಅಭಿಮಾನಿಗಳಿಂದ ರಕ್ತದಾನ

TV9 Digital Desk

| Edited By: shruti hegde

Updated on: Oct 08, 2021 | 9:37 AM

ಹೋರಿ ಅಖಾಡದ ಹೊರಗೆ ಇದ್ದಾಗ ಎಂಥಾ ಸಣ್ಣಪುಟ್ಟ ಮಕ್ಕಳು ಮುಟ್ಟಿದರೂ ಯಾರಿಗೂ ಏನೂ ಮಾಡುವುದಿಲ್ಲ. ಧೂಳೆಬ್ಬಿಸಿಕೊಂಡು ಅಖಾಡಕ್ಕೆ ಇಳಿದರೆ ಮಾತ್ರ ಯಾರನ್ನೂ ಮುಟ್ಟಿಸಿಕೊಳ್ಳೋದಿಲ್ಲವಂತೆ. ಅಕ್ಷರಶಃ ರಾಕ್ಷಸನ ಅವತಾರ ತಾಳಿಬಿಡುತ್ತಂತೆ. ಹೀಗಾಗಿ ಈ ಹೋರಿಗೆ ಅಭಿಮಾನಿಗಳು ರಾಕ್ಷಸ ಎಂಬ ಹೆಸರಿಟ್ಟಿದ್ದಾರೆ.

ಹಾವೇರಿಯಲ್ಲಿ ‘ರಾಕ್ಷಸ’ನ ಹುಟ್ಟುಹಬ್ಬ ಭರ್ಜರಿಯಾಗಿ ಆಚರಣೆ! 40 ಅಭಿಮಾನಿಗಳಿಂದ ರಕ್ತದಾನ
ರಾಕ್ಷಸ ಹೆಸರಿನ ಹೋರಿ
Follow us

ಹಾವೇರಿ: ಅಲ್ಲಿ ‘ರಾಕ್ಷಸ’ನಿಗೆ ಅದ್ಧೂರಿ ಹುಟ್ಟುಹಬ್ಬ ಆಚರಿಸಲಾಯಿತು. ಬರೋಬ್ಬರಿ ಹತ್ತು ಕೆಜಿ ತೂಕದ ಕೇಕ್ ತಯಾರಿಸಿ ರಾಕ್ಷಸನಿಗೆ ಕೇಕ್ ತಿನ್ನಿಸಿ, ಪಟಾಕಿ ಸಿಡಿಸಿ ಸೆಲೆಬ್ರೇಟ್ ಮಾಡಲಾಯಿತು. ನಂತರ ರಾಕ್ಷಸನ ಫೋಟೋಗಳನ್ನು ಸೆರೆ ಹಿಡಿಯಲಾಯಿತು. ಬೇರೆ ಬೇರೆ ಊರುಗಳಿಂದ ಬಂದಿದ್ದ ರಾಕ್ಷಸನ ಅಭಿಮಾನಿಗಳು ಕೇಕ್‌ ತಂದು ಕತ್ತರಿಸಿ, ತಿನ್ನಿಸಿ ಬರ್ತ್ ಡೇ ವಿಶ್ ಮಾಡಿದರು. ಅರೆ! ಇದೇನಿದು? ಈತ ಯಾವ ರಾಕ್ಷಸ?ಎಂಬ ಕುತೂಹಲವೇ? ಇಲ್ಲಿದೆ ಓದಿ.

ಹೀಗೆ ಅಭಿಮಾನಿಗಳಿಂದ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಈ ಹೋರಿಯ ಹೆಸರು ರಾಕ್ಷಸ. ಕಳೆದ‌ 6 ವರ್ಷಗಳ ಹಿಂದೆ ಗ್ರಾಮದ ಕೆಲವು ಹೋರಿ ಅಭಿಮಾನಿಗಳು ಸೇರಿಕೊಂಡು ತಮಿಳುನಾಡಿನಿಂದ ಹೋರಿಯನ್ನು ಖರೀದಿಸಿ ತಂದಿದ್ದರು. ನಂತರ ಹೋರಿಗೆ ಕೊಬ್ಬರಿ ಕಟ್ಟಿ, ಜೂಲಾ ಹಾಕಿ ಅಲಂಕಾರ ಮಾಡಿ ಹೋರಿಯನ್ನು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಗಳಿಗೆ ತಯಾರು ಮಾಡಿದ್ದರು. ಅಂದಿನಿಂದ ಈ ಹೋರಿ ಕಾಲಿಟ್ಟ ಅಖಾಡಗಳಲ್ಲೆಲ್ಲ‌ ಧೂಳೆಬ್ಬಿಸಿಕೊಂಡು ಓಡಿ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದೆ. 6 ವರ್ಷಗಳ ಹಿಂದೆ ಅಕ್ಟೋಬರ್ 6ರಂದು ಈ ಹೋರಿಯನ್ನು ಗ್ರಾಮಕ್ಕೆ ತಂದ ದಿನ. ಹೀಗಾಗಿ ಇಂದು ಅಕ್ಟೋಬರ್ 6ರಂದೇ ರಾಕ್ಷಸ ಹೆಸರಿನ ಹೋರಿಯ ಬರ್ತ್ ಡೇ ಆಚರಿಸಲಾಯಿತು. 10 ಕೆಜಿ ತೂಕದ ಕೇಕ್ ಮಾಡಿಸಿ, ಕೇಕ್‌ ತರಿಸಿ ಕತ್ತರಿಸಿ ಹೋರಿಗೆ ಕೇಕ್‌ ತಿನ್ನಿಸಿ ಹೋರಿ ಅಭಿಮಾನಿಗಳು ರಾಕ್ಷಸ ಹೋರಿಯ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಈ ಹೋರಿ ಅಖಾಡದ ಹೊರಗೆ ಇದ್ದಾಗ ಎಂಥಾ ಸಣ್ಣಪುಟ್ಟ ಮಕ್ಕಳು ಮುಟ್ಟಿದರೂ ಯಾರಿಗೂ ಏನೂ ಮಾಡುವುದಿಲ್ಲ. ಧೂಳೆಬ್ಬಿಸಿಕೊಂಡು ಅಖಾಡಕ್ಕೆ ಇಳಿದರೆ ಮಾತ್ರ ಯಾರನ್ನೂ ಮುಟ್ಟಿಸಿಕೊಳ್ಳೋದಿಲ್ಲವಂತೆ. ಅಕ್ಷರಶಃ ರಾಕ್ಷಸನ ಅವತಾರ ತಾಳಿಬಿಡುತ್ತಂತೆ. ಹೀಗಾಗಿ ಈ ಹೋರಿಗೆ ಅಭಿಮಾನಿಗಳು ರಾಕ್ಷಸ ಎಂಬ ಹೆಸರಿಟ್ಟಿದ್ದಾರೆ. ರಾಕ್ಷಸ ಹೆಸರಿನ ಜೊತೆಗೆ ‘ಅಭಿಮಾನಿಗಳ ಜೀವ’ ಸೇರಿದಂತೆ ಹೋರಿಗೆ ಅನೇಕ ಹೆಸರುಗಳಿವೆ. ರಾಕ್ಷಸ ಹೆಸರಿನ ಹೋರಿಯ ಮೂಲಕ ಗ್ರಾಮದ ಹೆಸರು ರಾಜ್ಯದಲ್ಲಿ ಫೇಮಸ್ ಆಗಿದೆಯಂತೆ. ಹೀಗಾಗಿ ಹೋರಿ ತಂದಾಗಿನಿಂದ ಪ್ರತಿವರ್ಷ ಹೋರಿಗೆ ಬರ್ತ್ ಡೇ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ರಾಕ್ಷಸನ ಬರ್ತ್ ಡೇ ಜತೆಗೆ ಜನರ ಜೀವ ಉಳಿಸುವ ಮಹತ್ವದ ಕೆಲಸಕ್ಕೂ ಹೋರಿ ಅಭಿಮಾನಿಗಳು ಕೈ ಹಾಕಿದ್ದಾರೆ. ಜಿಲ್ಲಾ ರಕ್ತನಿಧಿಗೆ ರಾಕ್ಷಸನ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಮಾಡಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹೋರಿ ಹುಟ್ಟುಹಬ್ಬಕ್ಕೆ ಬಂದ ಹೋರಿ ಅಭಿಮಾನಿಗಳಲ್ಲಿ 40 ಜನರು ರಕ್ತದಾನ ಮಾಡಿದ್ದಾರೆ. ರಾಕ್ಷಸನ ಬರ್ತ್ ಡೇಗೆ ಬಂದ ಅಭಿಮಾನಿಗಳಿಗೆ ಬೂಂದಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರು ಊಟದ ವ್ಯವಸ್ಥೆ ಮಾಡಲಾಗಿತ್ತು. ಹೋರಿ ಹುಟ್ಟುಹಬ್ಬಕ್ಕೆ ಬೇರೆ ಬೇರೆ ಊರುಗಳಿಂದ ಬಂದ ಅಭಿಮಾನಿಗಳು ತಾವೂ ಸಹಿತ ಕೇಕ್ ಗಳನ್ನು ತಯಾರಿಸಿ ಕೇಕ್ ಕತ್ತರಿಸಿ ರಾಕ್ಷಸನ ಜೊತೆ ಫೋಟೋ ತೆಗೆಸಿಕೊಂಡು ಬರ್ತ್ ಡೇ ಸಂಭ್ರಮ ಆಚರಿಸಿದರು.

ಸಾಮಾನ್ಯವಾಗಿ ಮನುಷ್ಯರ ಹುಟ್ಟುಹಬ್ಬ ಆಚರಿಸುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ತಮ್ಮ ನೆಚ್ಚಿನ ಹೋರಿಗೆ ಹೋರಿಯ ಅಭಿಮಾನಿಗಳು ಭರ್ಜರಿಯಾಗಿ ಬರ್ತ್ ಡೇ ಆಚರಿಸಿದ್ದಾರೆ. ಹೋರಿ ಬರ್ತ್ ಡೇ ಜೊತೆಗೆ ಹೋರಿಯ ಅಭಿಮಾನಿಗಳು ರಕ್ತದಾನ ಮಾಡಿ ಸಾಮಾಜಿಕ‌ ಕಳಕಳಿ ಮೆರೆದಿದ್ದಾರೆ. ಹೋರಿಗೆ ಹುಟ್ಟುಹಬ್ಬ ಆಚರಣೆ‌ ಮಾಡುವುದಲ್ಲದೇ ಹೋರಿ ಹುಟ್ಟುಹಬ್ಬಕ್ಕೆ ಬಂದ ಹೋರಿ ಅಭಿಮಾನಿಗಳು ರಕ್ತದಾನ ಮಾಡಿ ಜೀವ ಉಳಿಸೋ‌ ಕೆಲಸ ಮಾಡಿದ್ದು ವಿಶೇಷವೇ ಸರಿ.

ವಿಶೇಷ ವರದಿ: ಪ್ರಭುಗೌಡ‌.ಎನ್.ಪಾಟೀಲ ಟಿವಿ9 ಹಾವೇರಿ

ಇದನ್ನೂ ಓದಿ:

 17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು

ಹಾವೇರಿ: ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ಜೋಕುಮಾರಸ್ವಾಮಿ ಹಬ್ಬ ಆಚರಣೆ; ಸಡಗರ ಸಂಭ್ರಮ

ತಾಜಾ ಸುದ್ದಿ

Related Stories

Click on your DTH Provider to Add TV9 Kannada