
ಹಾವೇರಿ, ನವೆಂಬರ್ 01: ಪ್ರೀತಿಸಿದ ಯುವತಿಯನ್ನು ಕರೆದೊಯ್ದು ಮದುವೆಯಾಗಲು ಬಂದಿದ್ದ ಪ್ರಿಯತಮ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಹಿಡಿದು ಕಂಬಕ್ಕೆ ಕಟ್ಟಿ, ಅರೆಬೆತ್ತಲೆಗೊಳಿಸಿ ಭೀಕರವಾಗಿ ಥಳಿಸಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಳೆದ ಅಕ್ಟೋಬರ್ 27ರಂದು ನಡೆದಿದ್ದ ಈ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ರಟ್ಟಿಹಳ್ಳಿಯ ಪ್ರಮೋದ್ ಹಾಗೂ ಬತ್ತಿಕೊಪ್ಪ ಗ್ರಾಮದ ಭಾವನಾ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಇಬ್ಬರೂ ಮನೆ ಬಿಟ್ಟು ರಿಜಿಸ್ಟರ್ ಮದುವೆಯಾಗಲು ಹೊರಟಿದ್ದರು. ಆದರೆ ವಿಷಯ ತಿಳಿದ ಭಾವನಾ ಪೋಷಕರು, ಆಕೆಗೆ ಮನವೊಲಿಸಿ ಮನೆಗೆ ಕರೆತಂದಿದ್ದರು. ಮನೆಗೆ ಬಂದ ನಂತರ ಭಾವನಾ ತನ್ನ ಪ್ರಿಯಕರ ಪ್ರಮೋದ್‌ಗೆ ಪತ್ರ ಬರೆದು ಮದುವೆಯಾಗೋಣ ಎಂದು ಸಂದೇಶ ರವಾನಿಸಿದ್ದಳು.
ಪ್ರಿಯತಮೆಯ ಪತ್ರ ತಲುಪುತ್ತಿದ್ದಂತೆಯೇ ಪ್ರಮೋದ್ ತನ್ನ ಸ್ನೇಹಿತರಾದ ಪ್ರಕಾಶ್ ಹಾಗೂ ಪರಶುರಾಮ ಜೊತೆಗೂಡಿ ಬತ್ತಿಕೊಪ್ಪ ಗ್ರಾಮಕ್ಕೆ ಬಂದಿದ್ದ. ಭಾವನಾಳನ್ನು ಕರೆದೊಯ್ಯಲು ಯತ್ನಿಸಿದಾಗ ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಮೂವರನ್ನೂ ಹಿಡಿದು, ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರಾದರೂ, ಸ್ಥಳದಲ್ಲಿದ್ದ ಭಾರಿ ಗುಂಪು ಮತ್ತು ಗಲಾಟೆಯನ್ನು ಕಂಡು ಅಸಹಾಯಕರಾಗಿದ್ದರು ಎನ್ನಲಾಗಿದೆ. ಹಲ್ಲೆಗೊಳಗಾದ ಪ್ರಮೋದ್, ಪ್ರಕಾಶ್ ಹಾಗೂ ಪರಶುರಾಮ ಅವರಿಗೆ ತೀವ್ರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಭಾವನಾ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಲು ಹಲ್ಲೆಗೊಳಗಾದ ಯುವಕರ ಕುಟುಂಬಸ್ಥರು ಮುಂದಾಗಿದ್ದಾರೆ. ಈ ಪ್ರಸಂಗವು ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ