‘ಪೇ ಸಿಎಂ’ ಅಭಿಯಾನ ಮಾಡುತ್ತಿರುವ ಪ್ರತಿಪಕ್ಷದ ವಿರುದ್ಧ ಮಠಾಧೀಶರು ಅಸಮಾಧಾನ ; ಸಿಎಂ ಬೊಮ್ಮಾಯಿ ಪರ ಬ್ಯಾಟ್
ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ನಿಂದ ‘ಪೇ ಸಿಎಂ’ ಅಭಿಯಾನ ಪ್ರಾರಂಭವಾದ ಹಿನ್ನೆಲೆ ಹಾವೇರಿ ಜಿಲ್ಲಾ ಮಠಾಧೀಶರ ಒಕ್ಕೂಟ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದೆ.
ಹಾವೇರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ನಿಂದ ‘ಪೇ ಸಿಎಂ’ ಅಭಿಯಾನ ಪ್ರಾರಂಭವಾದ ಹಿನ್ನೆಲೆ ಹಾವೇರಿ ಜಿಲ್ಲಾ ಮಠಾಧೀಶರ ಒಕ್ಕೂಟ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದೆ. ‘ಪೇ ಸಿಎಂ’ ಅಭಿಯಾನ ಮೂಲಕ ಸಿಎಂ ಬೊಮ್ಮಾಯಿ ಅವರನ್ನು ಟಾರ್ಗೆಟ್ ಮಾಡುವ ಹುನ್ನಾರ ನಡೆದಿದೆ. ಇಂತಹ ಹುನ್ನಾರವನ್ನ ಈವರೆಗೆ ಯಾವ ರಾಜಕಾರಣಿಗಳು ಮಾಡಿಲ್ಲ ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದ ಸದಸ್ಯ ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ.
ತಪ್ಪುಗಳು ಆದಲ್ಲಿ ಕಾನೂನುಬದ್ಧವಾಗಿ ಏನು ಬೇಕಾಗಿತ್ತೋ ಅದನ್ನು ಮಾಡಿ ಅವರಿಗೆ ಬೇಕಾದ ಶಿಕ್ಷೆ ಕೊಟ್ಟು ಎಲ್ಲ ಜನರ ಹೃದಯ ಗೆಲ್ಲುವ ಕೆಲಸವನ್ನು ಎಲ್ಲ ಪಕ್ಷಗಳು ಮಾಡುತ್ತಿದ್ದವು. ಈಗ ದೊಡ್ಡ ದೊಡ್ಡ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಸಣ್ಣತನದ ವಿಚಾರಗಳನ್ನು ಇಟ್ಕೊಂಡು ರಾಜಕಾರಣ ಮಾಡೋದನ್ನು ನೋಡಿದರೆ ಜನರಿಗೆ ನಾವು ಕಳಿಸಿದ ಚುನಾಯಿತ ಪ್ರತಿನಿಧಿಗಳು ಏನು ಮಾಡ್ತಿದ್ದಾರಪ್ಪಾ ಅನ್ನೋ ವಿಚಾರ ಬರುತ್ತಿದೆ. ಮುತ್ಸದ್ದಿ ರಾಜಕಾರಣಿಗಳು ಸಣ್ಣತನಕ್ಕೆ ಇಳಿತಿರೋದನ್ನು ನೋಡಿ ಸಮಾಜ ಅವಹೇಳನ ಮಾಡೋ ಸ್ಥಿತಿ ಬರಬಾರದು ಎಂದು ಕಿವಿಮಾತು ಹೇಳಿದರು.
ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಲು ಬಂದಿಲ್ಲ. ಈಗಿನ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದು ಸ್ವಲ್ಪ ದಿನವಾಗಿದೆ ಅಷ್ಟೇ. ಸಿಎಂ ಸಮಾಜಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಅಂತಹ ಮುಖ್ಯಮಂತ್ರಿ ತೇಜೋವಧೆ ಯಾರೂ ಮಾಡಬಾರದು ಎಂದು ಸಿಎಂ ಬೊಮ್ಮಾಯಿ ಪರ ಬ್ಯಾಟ್ ಬೀಸಿದ್ದಾರೆ.
ಮೂರು ವರ್ಷದಿಂದ ಅನ್ನ ಕೊಡುವ ರೈತನಿಗೆ ಅನ್ನವಿಲ್ಲದ ಪರಿಸ್ಥಿತಿ ಬಂದಿದೆ. ಹೀಗಾಗಿ ಎಲ್ಲರೂ ಸೇರಿಕೊಂಡು ಅಂಥಾ ಸಮಸ್ಯೆಗಳನ್ನು ಬಗೆಹರಿಸಿ ಜನರ ಹೃದಯ ಕಮಲಗಳಲ್ಲಿ ನೆಲೆಸುವ ಕೆಲಸ ಮಾಡಬೇಕು ಎಂದು ಮಾತನಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Fri, 30 September 22