
ಹಾವೇರಿ (ಜೂನ್ 30): ಕಾರಹುಣ್ಣಿಮೆ ಹಬ್ಬದ ಹಿನ್ನೆಲೆ ಹೋರಿಗಳನ್ನು ಓಡಿಸುವ ಸ್ಪರ್ಧೆ ವೇಳೆ ಪಟಾಕಿ ಸಿಡಿಸಿದ್ದಕ್ಕೆ ರೈತನ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿರುವ ಅಮಾನುಷ ಘಟನೆ ಹಾವೇರಿ(Haveri) ಜಿಲ್ಲೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ (Naregal village) ನಡೆದಿದೆ. ನಿನ್ನೆ (ಜೂನ್ 29) ಕಾರಹುಣ್ಣಿಮೆ ಹಬ್ಬದ ಹಿನ್ನೆಲೆ ಹೋರಿಗಳನ್ನು ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿಸಿದ ಕಾರಣಕ್ಕೆ ಎರಡು ಕೋಮಿನ ಜನರ ನಡುವೆ ಮಾರಾಮಾರಿ ನಡೆದಿದೆ. ಮಸೀದಿ ಬಳಿ ಪಟಾಕಿ ಸಿಡಿಸಿದ ಎಂಬ ಕಾರಣಕ್ಕೆ ರೈತ ಕೈ ಕತ್ತರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಬೂದಿಮುಚ್ಚಿದ ಕೆಂಡದಂತಿರುವ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಕಾರಹುಣ್ಣಿಮೆ ಅಂಗವಾಗಿ ನರೇಗಲ್ಲ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೋರಿ ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗೇ ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಪಟಾಕಿ ಸಿಡಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಾಷಾಸಾಬ ಗೌಂಡಿ ಎಂಬುವರು ನಮ್ಮ ಮಸೀದಿ ಬಳಿ ಏಕೆ ಪಟಾಕಿ ಸಿಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.
ಪಟಾಕಿ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಎರಡು ಕೋಮಿನವರ ನಡುವೆ ಘರ್ಷಣೆಯಾಗಿ ಮಾರ್ಪಟ್ಟಿದೆ. ಹೋರಿ ಹಿಂದೆ ಬರುತ್ತಿದ್ದ ಲೋಹಿತ್ ಜಯಪ್ಪ ಎಂಬುವರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಇದರಿಂದ ಉದ್ವಿಗ್ನಗೊಂಡ ಮತ್ತೊಂದು ಗುಂಪು ಕುಡುಗೋಲು ಸೇರಿದಂತೆ ವಿವಿಧ ಆಯುಧಗಳಿಂದ ಪ್ರತಿದಾಳಿ ನಡೆಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಗಲಾಟೆಯಲ್ಲಿ ಓರ್ವ ರೈತನ ಕೈ ಕತ್ತರಿಸಿರುವ ಆರೋಪವೂ ಕೇಳಿಬಂದಿದ್ದು, ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಿಗೆ ಕೈಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಡೂರು ಪೊಲೀಸ್ ಠಾಣೆಯಲ್ಲಿ 26 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹರೀಶ್ ತಂದೆ ರಾಮಪ್ಪ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಖ್ವಾಜಾ, ಭಾಷಾಸಾಬ, ಮೆಹಬೂಬ್ ಅಲಿ, ಮಹಬೂಬಸಾಬ ಸೇರಿದಂತೆ ಒಟ್ಟು 26 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.ಪ್ರಕರಣ ಸಂಖ್ಯೆ 109/2026 ಅಡಿ BNS ಸೆಕ್ಷನ್ 189(2), 191(2) ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಘಟನೆ ಬಳಿಕ ನರೇಗಲ್ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದೆ. ಇನ್ನು ಪೊಲೀಸರು ಘಟನೆಯ ನಿಖರ ಕಾರಣ, ಘರ್ಷಣೆಗೆ ಕಾರಣವಾದ ಬೆಳವಣಿಗೆಗಳು ಹಾಗೂ ಹಲ್ಲೆಯಲ್ಲಿ ಭಾಗಿಯಾಗಿದ್ದವರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಂತಿ ಕಾಪಾಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಘಟನೆ ಬಳಿಕ ಎಚ್ಚೆತ್ತ ಆಡೂರು ಠಾಣೆ ಪೊಲೀಸರು, ನರೇಗಲ್ ಗ್ರಾಮದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಗ್ರಾಮದಲ್ಲಿ 20ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಶಾಂತಗೊಂಡಿದೆ. ಇನ್ನು ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಇನ್ನು ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಇಂದು (ಜೂನ್ 30) ಮಧ್ಯಾಹ್ನ 3-30 ಕ್ಕೆ ನರೇಗಲ್ ಗ್ರಾಮಕ್ಕೆ ಆಗಮಿಸಲಿರುವ ವಿಜಯೇಂದ್ರ ಅವರು ಗಲಾಟೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ನಂತರ ಹಾವೇರಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಗಾಯಾಳು ಆರೋಗ್ಯ ವಿಚಾರಿಸಲಿದ್ದಾರೆ.
Published On - 3:32 pm, Tue, 30 June 26