
ಹಾವೇರಿ, ಜೂನ್ 26: ಜಿಲ್ಲೆಯ ಹಾನಗಲ್ ತಾಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳಿಗೆ (Dalit Families) ಸಾಮಾಜಿಕ ಬಹಿಷ್ಕಾರ (Social Boycott) ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ತಿಪ್ಪೆ ಹಾಕುವ ಜಾಗದ ವಿವಾದ, ದಲಿತರು ಮತ್ತು ಸವರ್ಣೀಯರ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ದಲಿತ ಕುಟುಂಬಗಳು ಓಡಾಡುವ ರಸ್ತೆಗೆ ಬೇಲಿ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕಾಮನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮೂರು ದಲಿತ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಮುಪ್ಪಣ್ಣ ಹರಿಜನ, ಪ್ರಕಾಶ ಹರಿಜನ ಹಾಗೂ ಯಲಪ್ಪ ಹರಿಜನ ಅವರ ಕುಟುಂಬಗಳಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ತಮ್ಮ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ತಿಪ್ಪೆಯ ಕಸ ಹಾಗೂ ಮುಳ್ಳಿನ ಕಂಟೆಗಳನ್ನು ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ಓಡಾಟಕ್ಕೆ ತೊಂದರೆಯಾಗಿದ್ದು, ಶಾಲೆಗೆ ತೆರಳುವ ಮಕ್ಕಳು ಸಹ ಪರದಾಡುವಂತಾಗಿದೆ. ಕಳೆದ ಮೂರು ದಿನಗಳಿಂದ ಗ್ರಾಮಕ್ಕೆ ಹೋಗಲು ಹಾಗೂ ಹೊರಬರಲು ಕಷ್ಟವಾಗುತ್ತಿದೆ ಎಂದು ವಸಂತ ಹರಿಜನ ಹೇಳಿದ್ದಾರೆ.
ಇದನ್ನೂ ಓದಿ: ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ! ಸ್ಥಳೀಯಾಡಳಿತ, ಪೊಲೀಸರೂ ಮೌನ
ಈ ವಿವಾದದಕ್ಕೆ ಕಾರಣ ತಿಪ್ಪೆ ಹಾಕುವ ಜಾಗ. ಕಳೆದ 15 ವರ್ಷಗಳ ಹಿಂದೆ ಜಾಗವನ್ನು ತಿಪ್ಪೆ ಹಾಕಲು ಕೊಟ್ಟಿದ್ದವು. ಈಗ ನಮ್ಮದೆ ಜಾಗೆ ಅಂತಿದ್ದಾರೆ. ಇಡೀ ಗ್ರಾಮದ ಜನರು ಸೇರಿ ರಸ್ತೆ ಬಂದ್ ಮಾಡಿದ್ದಾರೆ. ಸರ್ಕಾರದಿಂದ ದಲಿತ ಕುಟುಂಬಗಳಿಗೆ ನೀಡಲಾಗಿದ್ದ ಜಾಗದಲ್ಲಿ ಸುಮಾರು ಒಂದು ಗುಂಟೆ ಪ್ರದೇಶವನ್ನು ಗ್ರಾಮದಲ್ಲಿನ ಸವರ್ಣೀಯರು ತಿಪ್ಪೆ ಹಾಕಲು ಬಳಸುತ್ತಿದ್ದರು. ಪಕ್ಕೀರೇಶ್ ಹಾವಳಿ ಎಂಬ ವ್ಯಕ್ತಿ ಹಾಗೂ ದಲಿತ ಕುಟುಂಬಗಳ ನಡುವೆ ಈ ವಿಚಾರವಾಗಿ ಮೊದಲಿನಿಂದಲೂ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿದೆ.
ಈಗ ತಿಪ್ಪೆ ಹಾಕುವ ಜಾಗ ತಮ್ಮದೇ ಎಂದು ಕೆಲವರು ಹೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಕಾರಣಕ್ಕೆ ತಮ್ಮನ್ನು ಊರಿನಿಂದಲೇ ಬಹಿಷ್ಕಾರ ಮಾಡಲಾಗಿದೆ ಎಂದು ದಲಿತ ಕುಟುಂಬಗಳು ಆರೋಪಿಸಿವೆ. ಇಡೀ ಗ್ರಾಮದ ಜನರು ಒಂದಾಗಿ ತಮ್ಮ ವಿರುದ್ಧ ನಿಂತಿದ್ದಾರೆ ಎಂದು ಕುಟುಂಬಗಳು ಅಸಮಾಧಾನ ವ್ಯಕ್ತಪಡಿಸಿವೆ. ಇನ್ನೊಂದೆಡೆ, ದಲಿತ ಕುಟುಂಬಗಳ ವಿರುದ್ಧ ಯಾವುದೇ ರೀತಿಯ ಸಾಮಾಜಿಕ ಬಹಿಷ್ಕಾರ ಹೇರಿಲ್ಲ ಎಂದು ಸವರ್ಣೀಯರ ಸ್ಪಷ್ಟಪಡಿಸಿದ್ದಾರೆ. ನಾವು ಬೇಲಿ ಹಾಕಿಲ್ಲ, ರಸ್ತೆ ಬಂದ್ ಮಾಡಿಲ್ಲ. ನಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಮಾಲತೇಶ ಆನವಟ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಜಾತ್ರೆಗೆ ಹಣ ಕೊಡದಿದ್ದಕ್ಕೆ 7 ಕುಟುಂಬಗಳಿಗೆ ಊರಿನಿಂದಲೇ ಬಹಿಷ್ಕಾರ: ಬಾಗಲಕೋಟೆಯಲ್ಲೊಂದು ಅಮಾನವೀಯ ಘಟನೆ
ತಿಪ್ಪೆ ಹಾಕುವ ಜಾಗದ ವಿವಾದ ಇದೀಗ ಸಾಮಾಜಿಕ ಬಹಿಷ್ಕಾರದ ಹಂತಕ್ಕೆ ತಲುಪಿದೆ. ಒಂದು ಕಡೆ ದಲಿತ ಕುಟುಂಬಗಳು ತಮ್ಮನ್ನು ಗ್ರಾಮದಿಂದಲೇ ದೂರ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಗ್ರಾಮಸ್ಥರು ಈ ಆರೋಪ ತಳ್ಳಿಹಾಕಿದ್ದಾರೆ. ಸತ್ಯಾಸತ್ಯತೆ ಏನು ಎಂಬುದು ಪೊಲೀಸ್ ತನಿಖೆಯ ನಂತರವೇ ಸ್ಪಷ್ಟವಾಗಬೇಕಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.