ಆಸ್ತಿಗಾಗಿ ತಂದೆ ಕಥೆಯನ್ನೇ ಮುಗಿಸಿದ್ರಾ ಮಕ್ಕಳು?: ದೂರು, ಪ್ರತಿದೂರಿನ ಹಿನ್ನೆಲೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

Haveri News: ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಆಸ್ತಿ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ವೃದ್ಧನ ಸಾವು ಕೊಲೆಯೋ ಅಥವಾ ಅಸಹಜವೋ ಎಂಬ ಸತ್ಯಾಸತ್ಯತೆ ತಿಳಿಯಲು ತಹಶಿಲ್ದಾರ್ ಸಮ್ಮುಖದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಹೋದರ ಮತ್ತು ಸಹೋದರಿಯರು ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದು, ಈ ಸಂಬಂಧ ಪ್ರತ್ಯೇಕ ದೂರುಗಳು ದಾಖಲಾಗಿವೆ.

ಆಸ್ತಿಗಾಗಿ ತಂದೆ ಕಥೆಯನ್ನೇ ಮುಗಿಸಿದ್ರಾ ಮಕ್ಕಳು?: ದೂರು, ಪ್ರತಿದೂರಿನ ಹಿನ್ನೆಲೆ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ
ಮೃತ ಗುರುಬಸಪ್ಪ ಬಸಾಪುರ
Image Credit source: Tv9 Kannada

Updated on: Jun 24, 2026 | 4:10 PM

ಮುಖ್ಯಾಂಶಗಳು

  • ಆಸ್ತಿ ಕಲಹದ ನಡುವೆ ಅನುಮಾನಾಸ್ಪದವಾಗಿ ವೃದ್ಧ ಸಾವು
  • ಸವಣೂರು ತಾಲೂಕು ಶಿರಬಡಗಿ ಗ್ರಾಮದಲ್ಲಿ ನಡೆದ ಘಟನೆ
  • ಸಹೋದರ, ಸಹೋದರಿಯರಿಂದ ಆರೋಪ-ಪ್ರತ್ಯಾರೋಪ

ಹಾವೇರಿ, ಜೂನ್​​ 24: ಎಂತಹ ಕಷ್ಟ ಕಾಲದಲ್ಲೂ ಇವರು ತಮ್ಮ ಕೈಬಿಡಲ್ಲ ಎಂಬ ನಂಬಿಕೆ ಇಟ್ಟುಕೊಂಡು ಸರ್ವಸ್ವವನ್ನೂ ತ್ಯಾಗ ಮಾಡಿ ಮಕ್ಕಳನ್ನು ಹೆತ್ತವರು ಬೆಳೆಸುತ್ತಾರೆ. ಆದರೆ ಹೀಗೆ ಸಾಕಿ ಸಲಹಿದ ತಂದೆಯ ಜೀವವನ್ನು ಕೇವಲ ಆಸ್ತಿಗಾಗಿ ಮಕ್ಕಳೇ ತೆಗೆದಿರುವ ಆರೋಪ ಹಾವೇರಿ ಜಿಲ್ಲೆ ಸವಣೂರು ತಾಲೂಕು ಶಿರಬಡಗಿ ಗ್ರಾಮದಲ್ಲಿ ಕೇಳಿಬಂದಿದೆ. ಆಸ್ತಿಗಾಗಿ ಹೆತ್ತ ತಂದೆಯನ್ನೇ ಅಣ್ಣ ಬಲಿ ಪಡೆದಿದ್ದಾನೆ ಎಂದು ತಂಗಿಯರು ಹೇಳುತ್ತಿದ್ದರೆ, ಮತ್ತೊಂದೆಡೆ ಸಹೋದರಿಯರೇ ಅಪ್ಪನ ಸಾವಿಗೆ ಕಾರಣ ಎಂದು ಸಹೋದರ ಹೇಳುತ್ತಿದ್ದಾನೆ. ಈ ಸಂಬಂಧ ದೂರು-ಪ್ರತಿದೂರುಗಳು ದಾಖಲಾಗಿದ್ದು, ಪೊಲೀಸರು ಸತ್ಯದ ಹುಡುಕಾಟದಲ್ಲಿದ್ದಾರೆ.

ಕೋರ್ಟ್​​ ಮೆಟ್ಟಿಲೇರಿದ್ದ ಆಸ್ತಿ ವಿಚಾರ

ಶಿರಬಡಗಿ ಗ್ರಾಮದ 75 ವರ್ಷದ ಗುರುಬಸಪ್ಪ ಬಸಾಪುರ ಎಂಬವರಿಗೆ ಐವರು ಮಕ್ಕಳಿದ್ದು, ಆ ಪೈಕಿ ರವಿ ಬಸಾಪುರ ಎಂಬಾತ ಹಿರಿಯ ಮಗ. ಉಳಿದಂತೆ ರೇಖಾ, ಸುಜಾತಾ, ಗಿರಿಜಾ, ಪಾರ್ವತಿ ಸಹೋದರಿಯರು. 27 ಎಕರೆ ಜಮೀನು ಹೊಂದಿದ್ದ ಗುರಬಸಪ್ಪ, ಈ ಆಸ್ತಿಯನ್ನು ಇತ್ತೀಚೆಗೆ ತನ್ನ ಹೆಣ್ಣು ಮಕ್ಕಳಿಗೆ ಹಂಚಿಕೆ ಮಾಡಿದ್ದರು. ತಂದೆಯ ಈ ನಿರ್ಧಾರದಿಂದ ಮನನೊಂದಿದ್ದ ಹಿರಿಯ ಪುತ್ರ ರವಿ ಬಸಾಪುರ ಆಸ್ತಿ ವಿಚಾರ ಸಂಬಂಧ ಕೋರ್ಟ್​​ ಮೆಟ್ಟಿಲು ಕೂಡ ಏರಿದ್ದರು. ಆದರೆ ಈ ನಡುವೆ ಜೂನ್​​ 15ರಂದು ತಮ್ಮದೇ ತೋಟದಲ್ಲಿ ಗುರುಬಸಪ್ಪ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಇದೇ ವಿಚಾರವೀಗ ಕುಟುಂಬದ ನಡುವೆ ಜಟಾಪಟಿಗೆ ಕಾರಣವಾಗಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಚಿನ್ನ ನಿಕ್ಷೇಪಗಳು ಪತ್ತೆ; ಬಂಗಾರದಂತ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು

ಹೆಣ್ಣು ಮಕ್ಕಳಿಗೆ ಆಸ್ತಿ ಹಂಚಿದ ಎಂಬ ಕಾರಣಕ್ಕೆ ತಂದೆಯನ್ನು ಅಣ್ಣ ರವಿ ಕೊಲೆ ಮಾಡಿದ್ದಾನೆ ಎಂದು ಸಹೋದರಿಯರು ಆರೋಪಿಸಿದ್ದರೆ ಆಸ್ತಿಗಾಗಿ ತಂಗಿಯರೇ ನಮ್ಮ ತಂದೆಯನ್ನು ಕೊಲೆ ಮಾಡಿ ನನ್ನ ಮೇಲೆ ಆರೋಪ ಮಾಡ್ತಿದಾರೆ ಎಂದು ರವಿ ಬಸಾಪುರ ಹೇಳುತ್ತಿದ್ದಾರೆ. ಹೀಗಾಗಿ ಗುರುಬಸಪ್ಪ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ತಹಶಿಲ್ದಾರ ರವಿ ಕೊರವರ ಸಮ್ಮುಖದಲ್ಲಿ ಮೃತ ಗುರುಬಸಪ್ಪ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:07 pm, Wed, 24 June 26

Follow Us