ಶಿಗ್ಗಾಂವಿಯಲ್ಲಿ ನಾಳೆ ವಿಧಾನಸಭಾ ಉಪಚುನಾವಣೆ; ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಬುಧವಾರ (ನ. 13) ವಿಧಾನಸಭಾ ಉಪಚುನಾವಣೆ ನಡೆಯಲಿದೆ. ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾಸಿರ್ ಅಹ್ಮದ್ ಖಾನ್ ಪಠಾಣ್​ಗೆ ಟಿಕೆಟ್ ನೀಡಿದೆ. ಬಿಜೆಪಿ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿದೆ.

ಶಿಗ್ಗಾಂವಿಯಲ್ಲಿ ನಾಳೆ ವಿಧಾನಸಭಾ ಉಪಚುನಾವಣೆ; ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ
ಭರತ್ ಬೊಮ್ಮಾಯಿ - ಯಾಸಿರ್ ಅಹ್ಮದ್ ಖಾನ್ ಪಠಾಣ್
Edited By:

Updated on: Nov 12, 2024 | 9:34 PM

ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಾಳೆ (ಬುಧವಾರ) ಉಪಚುನಾವಣೆ ನಡೆಯಲಿದೆ. ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿ ಬಿಜೆಪಿಯಿಂದ ಕಣಕ್ಕಿಳಿದಿದ್ದು, ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಯಾದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಕಣಕ್ಕೆ ಇಳಿಸಿದೆ. ನವೆಂಬರ್ 13ರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ- 2,37,525. ಇವರಲ್ಲಿ 1,21,443 ಪುರುಷ ಮತದಾರರು, 1,16,076 ಮಹಿಳಾ ಮತದಾರರು, 6 ಇತರೇ ಮತದಾರರು ಇದ್ದಾರೆ. ಈ ಕ್ಷೇತ್ರದ ಒಟ್ಟು ಮತಗಟ್ಟೆಗಳ ಸಂಖ್ಯೆ 241. ಅವುಗಳಲ್ಲಿ 92 ಸೂಕ್ಷ್ಮ ಮತಗಟ್ಟೆಗಳಿದ್ದು, 141 ಸಾಮಾನ್ಯ ಮತಟ್ಟೆಗಳಿವೆ.

ಇದನ್ನೂ ಓದಿ: ಶಿಗ್ಗಾವಿಯಲ್ಲಿ ಕಾಂಗ್ರೆಸ್ ಮುಖಂಡರು ಮಾತ್ರ ಬೊಮ್ಮಾಯಿ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ: ಬಸನಗೌಡ ಯತ್ನಾಳ್

ಶಿಗ್ಗಾಂವಿ ಉಪಚುನಾವಣೆಗೆ ಭದ್ರತೆಗಾಗಿ 1 ಎಸ್ ಪಿ , 1 ಎ.ಎಸ್‌.ಪಿ, 4 ಡಿವೈಎಸ್​ಪಿ, 12 ಸಿ‌.ಪಿ.ಐ, 24 ಪಿ.ಎಸ್.ವೈ, 68 ಎ‌.ಎಸ್.ಐ, 177 ಹೆಡ್ ಕಾನ್ಸಟೇಬಲ್, 378 ಕಾನ್ಸಟೇಬಲ್, 52 ಹೋಂ ಗಾರ್ಡ್ಸ್, ಒಟ್ಟು 716 ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ. 4 ಕೆ.ಎಸ್ ಆರ್ ಪಿ‌ , 4 ಡಿ.ಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ.

ಜಾತಿವಾರು ಲೆಕ್ಕಾಚಾರ:

ಲಿಂಗಾಯತ- 85,000, ಮುಸ್ಲಿಂ-58,000, ಕುರುಬ-27,000, ಎಸ್ ಸಿ 30,000, ಎಸ್ ಟಿ-22,000, ಬ್ರಾಹ್ಮಣ- 2000, ಮರಾಠ- 3000, ಇತರೆ 10,000 ಮತದಾರರಿದ್ದಾರೆ.

ಇದನ್ನೂ ಓದಿ: ಉಪಚುನಾವಣೆಗೆ ಇನ್ನೊಂದೇ ದಿನ: ಯಾವ ಕ್ಷೇತ್ರದಲ್ಲಿ ಹೇಗಿದೆ ಸಿದ್ಧತೆ? ಇಲ್ಲಿದೆ ವಿವರ

ಶಿಗ್ಗಾಂವಿ ಕ್ಷೇತ್ರದ ಇತಿಹಾಸ:

ಸಂತ ಶಿಶುನಾಳ ಷರೀಫ ಮತ್ತು ಕನಕದಾಸರು ಜನ್ಮವೆತ್ತಿದ ಭೂಮಿಯಿದು. ರಾಜಕೀಯ ಮುತ್ಸದ್ಧಿ-ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಾಜಕೀಯ ಮರುಹುಟ್ಟು ಕೊಟ್ಟ ಕ್ಷೇತ್ರ. ಬಸವರಾಜ ಬೊಮ್ಮಾಯಿ 2008ರಲ್ಲಿ ಬಿಜೆಪಿ ಸೇರಿ ಅಂದಿನಿಂದ 4 ಬಾರಿ ಶಾಸಕರಾಗಿ ಗೆದ್ದ ಕ್ಷೇತ್ರ. 2024ರ ಲೋಕಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಸ್ಪರ್ದಿಸಿ ಸಂಸದರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿದೆ. ಸದ್ಯ ತಮ್ಮ ಪುತ್ರನಿಗೂ ಶಿಗ್ಗಾಂವಿಯಲ್ಲಿಯೇ ರಾಜಕೀಯ ಭವಿಷ್ಯ ರೂಪಿಸಲು ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ