ಉಪಚುನಾವಣೆಗೆ ಇನ್ನೊಂದೇ ದಿನ: ಯಾವ ಕ್ಷೇತ್ರದಲ್ಲಿ ಹೇಗಿದೆ ಸಿದ್ಧತೆ? ಇಲ್ಲಿದೆ ವಿವರ
ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮನೆ ಮನೆ ಪ್ರಚಾರ ಬಾಕಿ ಇದೆ. ಬುಧವಾರ ಇಷ್ಟೊತ್ತಿಗೆ ಮತದಾನ ಆರಂಭವಾಗಿರುತ್ತದೆ. ಚುನಾವಣಾ ಆಯೋಗ ಮುಕ್ತ, ನ್ಯಾಯ ಸಮ್ಮತ ಮತದಾನಕ್ಕೆ ಸಿದ್ಧವಾಗಿದೆ. ಮೂರೂ ಕ್ಷೇತ್ರಗಳಲ್ಲಿ ಸಿದ್ಧತೆ ಹೇಗಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ನವೆಂಬರ್ 12: ಕರ್ನಾಟಕದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಉಪ ಚುನಾವಣೆ ಕದನ ಕಣ ರಂಗೇರಿದೆ. ಮೂರು ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಇವತ್ತು ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ. ಕಳೆದ 15 ದಿನಗಳಿಂದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ. ಅಬ್ಬರದ ಪ್ರಚಾರ, ಬೃಹತ್ ಱಲಿ ನಡೆಸಿದ್ದಾರೆ. ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಮತದಾರರಲ್ಲದವರು ಆಯಾ ಕ್ಷೇತ್ರ ತೊರೆದಿದ್ದಾರೆ.
ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆ ವರೆಗೂ ವೋಟಿಂಗ್ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. 3ಕ್ಷೇತ್ರಗಳ ಗಡಿಯಲ್ಲಿ ಆಯೋಗ ನಿಗಾವಹಿಸಿದ್ದು, ಕ್ಷೇತ್ರದ ಸುತ್ತ 5 ಕಿ.ಮೀ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಸೋಮವಾರ ಸಂಜೆ 6 ಗಂಟೆಯಿಂದ ಗುರುವಾರ ಬೆಳಗ್ಗೆ 6 ಗಂಟೆವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಹೇಗಿದೆ ಮತದಾನಕ್ಕೆ ಸಿದ್ಧತೆ?
ಶಿಗ್ಗಾಂವಿ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳ ಸ್ಥಾಪಿಸಲಾಗಿದೆ. ಈಪೈಕಿ 92 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ 10 ಮಂದಿ ವೀಕ್ಷಕರನ್ನು ನೇಮಿಸಲಾಗಿದೆ. 121 ಮತಗಟ್ಟೆಗಳಿಗೂ ವೆಬ್ ಕಾಸ್ಟಿಂಗ್ ಸೌಲಭ್ಯ ಮಾಡಲಾಗಿದೆ. ಕ್ಷೇತ್ರದಲ್ಲಿ 20 ವಿಡಿಯೋ ಗ್ರಾಫರ್ಗಳನ್ನು ನಿಯೋಜಿಸಲಾಗಿದೆ. ಒಟ್ಟು 1,060 ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಭದ್ರತೆಗೆ ಪೊಲೀಸ್, ಸಿಆರ್ಪಿಎಫ್, ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ರ‍್ಯಾಂಪ್, ಕುಡಿಯುವ ನೀರು, ವ್ಹೀಲ್ಚೇರ್ ಸೌಲಭ್ಯ ವ್ಯವಸ್ಥೆ ಮಾಡಲಾಗಿದ್ದು, ಹಿರಿಯ ನಾಗರಿಕರ ಮತದಾನಕ್ಕೆ ಆದ್ಯತೆ ಮೇರೆಗೆ ಅನುಕೂಲ ನೀಡಲಾಗಿದೆ.
ಶಿಗ್ಗಾಂವಿ ಕ್ಷೇತ್ರದಲ್ಲಿ 2,37,525 ಮತದಾರರಿದ್ದಾರೆ. ಇದರಲ್ಲಿ 1.21,443 ಪುರುಷರು ಹಾಗೂ 1,16, 076 ಮಹಿಳೆಯರು ಇದ್ದಾರೆ. ಇತರೆ 6 ಇದೆ.
ಸಂಡೂರು ಕ್ಷೇತ್ರದಲ್ಲಿ ಹೇಗಿದೆ ಮತದಾನಕ್ಕೆ ಸಿದ್ಧತೆ?
ಸಂಡೂರು ಕ್ಷೇತ್ರದಲ್ಲಿ ಒಟ್ಟು 2,36,100 ಮತದಾರರಿದ್ದಾರೆ. ಇದ್ರಲ್ಲಿ 1,18,282 ಮಹಿಳೆಯರಿದ್ದರೆ, 1,17,789 ಪುರುಷರಿದ್ದಾರೆ. ಇನ್ನೂ ಇತರೆ ಮತದಾರರು 29 ಮಂದಿ ಇದ್ದಾರೆ. ಸಂಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ 253 ಮತಗಟ್ಟೆ ಸ್ಥಾಪಿಸಲಾಗಿದೆ. 253 ಪೈಕಿ 55 ಮತಗಟ್ಟೆಗಳು ಸೂಕ್ಷ್ಮ ಎಂದು ಗುರುತಿಸಲಾಗಿದೆ. 608 ಮತಗಟ್ಟೆ ಅಧಿಕಾರಿಗಳು ಸೇರಿ 1,215 ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾನ ಕರ್ತವ್ಯಕ್ಕಾಗಿ 304 ಪಿಆರ್ಒ, 304 ಎಪಿಆರ್ಒ ನಿಯೋಜಿಸಲಾಗಿದೆ. ಭದ್ರತೆಗಾಗಿ 344 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಕ್ಷೇತ್ರದಲ್ಲಿ 2 ಅಂತಾರಾಜ್ಯ ಸೇರಿದಂತೆ ಒಟ್ಟು 8 ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ.
ಚನ್ನಪಟ್ಟಣದಲ್ಲಿ ಹೇಗಿದೆ ಸಿದ್ಧತೆ?
ಚನ್ನಪಟ್ಟಣ ಕ್ಷೇತ್ರದಲ್ಲಿ 2,32,836 ಮತದಾರಿದ್ದಾರೆ. 1,12,271 ಪುರುಷರಿದ್ದಾರೆ. 1,20,557 ಮಹಿಳಾ ಮತದಾರರಿದ್ದಾರೆ. ಜೊತೆಗೆ ಇತರೆ 8 ಮತದಾರರು ಇದ್ದಾರೆ.
ಇದನ್ನೂ ಓದಿ: ಕರ್ನಾಟಕದ 3 ಕ್ಷೇತ್ರಗಳ ಬೈ ಎಲೆಕ್ಷನ್ ಬಹಿರಂಗ ಪ್ರಚಾರ ಅಂತ್ಯ: ಮದ್ಯ ಮಾರಾಟ ಬಂದ್
ಬುಧವಾರ ಮತದಾನ ನಡೆಯಲಿದ್ದು, ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಯಾರಿಗೆ ವಿಜಯಮಾಲೆ ಸಿಗಲಿದೆ ಎಂಬುದನ್ನು ತಿಳಿಯಲು ನವೆಂಬರ್ 23 ರವರೆಗೆ ಕಾಯಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ