ಬೆಂಗಳೂರು, (ಮೇ 20): ಪ್ರಜ್ವಲ್ ರೆವಣ್ಣ (Prajwal Revanna) ಮತ್ತು ಎಚ್‌ಡಿ ರೇವಣ್ಣ (HD Revanna) ಪ್ರಕರಣಗಳು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ (HD Dwevegowda) ಕುಟುಂಬವನ್ನು ಕಂಗೆಡಿಸಿದ್ದು, ಇಡೀ ದೊಡ್ಡಗೌಡರ ಕುಟುಂಬದಲ್ಲಿ ಆತಂಕ ಛಾಯೆ ಆವರಿಸಿದೆ. ಇದರಿಂದ ನೊಂದಿರುವ ಎಚ್‌ಡಿ ದೇವೇಗೌಡ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎನ್ನುವ ಸ್ಫೋಟಕ ಅಂಶವನ್ನು ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಉದ್ದೇಶ ಪೂರ್ವಕವಾಗಿ ನಮ್ಮ ಕುಟುಂಬ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮ ಕುಟುಂಬ ಮುಗಿಸಲು ಈ ರೀತಿ ಷಡ್ಯಂತ್ರ ಮಾಡುತ್ತಿದ್ದಾರೆ. ಈ ಪ್ರಕರಣದಿಂದನೊಂದು ಎಚ್‌ಡಿ ದೇವೇಗೌಡ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿದ್ದರು ಎಂದು ಸ್ಫೋಟಕ ಅಂಶವನ್ನು ಬಿಚ್ಚಿಟ್ಟರು.
ನಮ್ಮ ಕುಟುಂಬದ ಎಲ್ಲರ ಫೋನ್ ಕೂಡ ಟ್ಯಾಪ್ ಆಗುತ್ತಿದೆ. ನಾನು ಅಕ್ರಮದ ಬಗ್ಗೆ ಮಾತಾಡ್ತೇನೆಂದು ನನ್ನ ಮೇಲೆ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ಜೊತೆ ಇದ್ದವರ ಸುಮಾರು 45 ಜನರ ಫೋನ್ ಟ್ಯಾಪ್ ಮಾಡಿದ್ದಾರೆ. ಈ ಪ್ರಕರಣದಿಂದನೊಂದು ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿದ್ದರು. ಯಾರೋ ಮಾಡಿದ ತಪ್ಪಿಗೆ ನೀವು ರಾಜೀನಾಮೆ ಕೊಡಬೇಡಿ ಎಂದೆ. ಹೀಗಾಗಿ ಅವರು ಸಮ್ಮನಾದರು ಎಂದು ಹೇಳಿದರು.
ನಮ್ಮ ಕುಟುಂಬ ಮುಗಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಎಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನನ್ನ ಹೆಸರು ಪ್ರಸ್ತಾಪ ಮಾಡಿಲ್ಲ ಅಂದರೆ ಯಾರಿಗೂ ನಿದ್ದೆ ಬರಲ್ಲ. ಉತ್ತರ ಕೊಡುವ ಅವಶ್ಯಕತೆ ಇಲ್ಲ, ಅದಕ್ಕೂ ನನಗೂ ಸಂಬಂಧವಿಲ್ಲ. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಅವರೇ ಹೇಳಿದ್ದಾರೆ. ಕುಮಾರಸ್ವಾಮಿ ಮತ್ತೆ ಏನು ಬೇಕಾದ್ರೂ ಹೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಪ್ರಮುಖವಾಗಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರಿಗೆ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಬಹಳಷ್ಟು ಚಿಂತೆಯಾಗಿದೆ. ಅಶ್ಲೀಲ ವಿಡಿಯೋ ಹಾಗೂ ರೇವಣ್ಣ ಬಂಧನದಿಂದ ದೇವೇಗೌಡರ ಕುಟುಂಬಕ್ಕೆ ಮುಜುಗರು ಉಂಟುಮಾಡಿದೆ. ಒಂದು ಕಡೆ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರೆ, ಮತ್ತೊಂದು ಕಡೆ ರಾಜ್ಯದಲ್ಲಿ ಎಚ್‌ಡಿ ರೇವಣ್ಣ ಅವರ ಬಂಧನ ಮತ್ತು ಬಿಡುಗಡೆ ಎಚ್‌ಡಿ ದೇವೇಗೌಡರ ಕುಟುಂಬವನ್ನು ಕಂಗೆಡಿಸಿದ್ದು, ಇಡೀ ದೊಡ್ಡಗೌಡರ ಕುಟುಂಬದಲ್ಲಿ ಆತಂಕ ಛಾಯೆ ಆವರಿಸಿದೆ. ಹೀಗಾಗಿ ಜನ್ಮದಿನದ ಆಚರಣೆ ಮಾಡಿಕೊಂಡಿರಲಿಲ್ಲ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದು ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಇಲ್ಲಿಯವರೆಗೂ ಪ್ರಕರಣದ ಬಗ್ಗೆ ಒಂದೇ ಒಂದು ಮಾತನಾಡದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಮೊನ್ನೆ ಶನಿವಾರ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಯಾವುದೇ ತಕರಾರಿಲ್ಲ. ನಮ್ಮ ಕುಟುಂಬಕ್ಕೆ ಹಿನ್ನಡೆ ತರುವ ಪ್ರಯತ್ನ ನಡೆಯುತ್ತಿದೆ, ಇದೆಲ್ಲದರ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡುತ್ತಾರೆ ಎಂದು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ