
ಬೆಂಗಳೂರು, ಜೂನ್ 1: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon Rain) ಮತ್ತಷ್ಟು ಬಿರುಸುಗೊಂಡಿದ್ದು, ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣಕನ್ನಡಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಕೊಡಗು, ಚಿಕ್ಕಮಗಳೂರು ಸೇರಿ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತರ ಜಿಲ್ಲೆಗಳಾದ ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ಹಾಸನದಲ್ಲಿ ಯಲ್ಲೋ ಅಲರ್ಟ್, ಹಾಗೆಯೇ ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಡಿಕೇರಿ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಗೆ ಜೀವ ಕಳೆ ಬಂದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ. ಒಂದೇ ವಾರದಲ್ಲಿ 103 ಅಡಿಗೆ ಏರಿಕೆಯಾಗಿದೆ.
ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು ಕವಿದ ವಾತಾವರಣವಿದೆ. ಪಶ್ಚಿಮ ಘಟ್ಟದಲ್ಲಿ ಮಳೆ ಕೊಂಚ ಬಿಡುವು ನೀಡಿದ್ದು, ಪ್ರವಾಸಿಗರು ಜಲಪಾತಗಳ ಬಳಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ಮಳೆಯಿಂದ ರಸ್ತೆ ಹಾಳಾಗಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಿದ್ದಾರೆ.
ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮನೆಗಳ ಬಳಿಯೇ ಕಾಳಿಂಗ ಸರ್ಪಗಳು ಕಾಣಿಸಿಕೊಳ್ಳುತ್ತಿವೆ. ಶೃಂಗೇರಿ ತಾಲೂಕಿನ ಹುಲಗಾರು ಬೈಲು ಗ್ರಾಮದಲ್ಲಿ ಮನೆಯ ಛಾವಣೆಯಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಸ್ನೇಕ್ ಅರ್ಜುನ್ ಸೆರೆ ಹಿಡಿದಿದ್ದಾರೆ.
ಹಾಸನದಲ್ಲಿ ಮಳೆಯಾರ್ಭಟಕ್ಕೆ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಜಮೀನಿನಲ್ಲಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ನಂಜಯ್ಯ ಎಂಬ 56 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಮೇ 26ರಂದು ಜಮೀನಿಗೆ ಹೋಗಿ ಬರುವುದಾಗಿ ಹೇಳಿದ್ದ ನಂಜಯ್ಯ, ನಂತರ ಕಾಣೆಯಾಗಿದ್ದರು. ಹುಡುಕಾಟ ನಡೆಸಿದಾಗ ಸಕಲೇಶಪುರ ತಾಲೂಕಿನ ತಿನಗನಹಳ್ಳಿಯಲ್ಲಿ ಶವ ಪತ್ತೆಯಾಗಿದೆ. ಕಾಣೆಯಾಗಿದ್ದ ನಂಜಯ್ಯ ಹುಡುಕಾಟದ ವೇಳೆ ಮತ್ತೊಬ್ಬನ ಶವವೂ ಪತ್ತೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಲ್ಲು ದೊಡ್ಡಿಯಲ್ಲಿ ಕಾರ್ಮಿಕನಾಗಿದ್ದ ಮುರುಗೇಶ್ ಎಂಬಾಂತ ಮೃತಪಟ್ಟಿದ್ದಾನೆ.
ಮಂಗಳೂರಿನ ಮೊಂಟೆಪದವು ಎಂಬಲ್ಲಿ ಗುಡ್ಡ ಕುಸಿತ ಪ್ರಕರಣ ಸ್ಥಳೀಯರನ್ನು ಆತಂಕಕ್ಕೆ ದೂಡಿದೆ. ಯಾವಾಗ ಏನಾಗುತ್ತದೆಯೋ ಎಂಬ ಆತಂಕದಲ್ಲೇ ಜನರು ದಿನ ದೂಡುವಂತಾಗಿದೆ. ಊರುಕೋಡಿ ಎಂಬಲ್ಲಿ ಗುಡ್ಡ ಕುಸಿದು ಅಜ್ಜಿ ಮೊಮ್ಮಕ್ಕಳು ಮೃತಪಟ್ಟ ಘಟನೆಯ ಕಹಿ ನೆನಪಿನಿಂದ ಗುಡ್ಡ ನೋಡಿದಾಗಲೆಲ್ಲ ಜನ ಬೆಚ್ಚಿ ಬೀಳುವಂತಾಗಿದೆ. ಮೊಂಟೆಪದವು ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಎರಡು ಮನೆ ಮತ್ತು ದೈವಸ್ಥಾನ ಅಪಾಯದಲ್ಲಿದ್ದು ಮನೆಯಲ್ಲಿದ್ದವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ.