ಕರ್ನಾಟಕದಲ್ಲಿ ಮುಂದುವರೆದ ಮಳೆ ಆರ್ಭಟ: ಮುಂಜಾಗ್ರತವಾಗಿ ಈ ಜಿಲ್ಲೆಗಳಲ್ಲಿ ನಾಳೆ ಶಾಲಾ, ಕಾಲೇಜಿಗೆ ರಜೆ
ಕರ್ನಾಟಕದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಅದರಲ್ಲೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸುತ್ತಿದೆ. ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ, ಜುಲೈ 17: ಜಿಲ್ಲೆಯಾದ್ಯಂತ ಮಳೆಯ (Rain) ಆರ್ಭಟ ಮುಂದುವರೆದಿದೆ. ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಳ್ಳಿ ಹಳ್ಳಿಗಳೇ ಜಲದಿಗ್ಬಂಧನಕ್ಕೆ ಸಿಲುಕಿವೆ. ನಿಂತ ನೆಲವೇ ಕುಸಿಯುತ್ತಿದೆ. ಮನೆಗಳು ಸರ್ವನಾಶ ಆಗುತ್ತಿವೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕಿನ ಶಾಲಾ, ಕಾಲೇಜಿಗೆ ನಾಳೆ ರಜೆ (holiday) ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.
ಮುಂಡಗೋಡ ಮತ್ತು ಹಲಿಯಾಳ ತಾಲೂಕು ಹೊರತುಪಡಿಸಿ ಕಾರವಾರ, ಕುಮಟಾ, ಅಂಕೋಲ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ, ಯಲ್ಲಾಪುರ ತಾಲೂಕಿನ ಶಾಲಾ-ಕಾಲೇಜಿಗೆ ರಜೆ ನೀಡಲಾಗಿದೆ.
ಮಲೆನಾಡು ಭಾಗದ 5 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ ಒಟ್ಟು 5 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡದಂತೆ ಪೊಲೀಸ್ ಇಲಾಖೆ ಮನವಿ
ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಧಾರಾಕಾರ ಮಳೆಯ ಸೂಚನೆ ಹಿನ್ನಲೆ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಮಲೆನಾಡು ಭಾಗದಲ್ಲಿ ಮಳೆ ಆರ್ಭಟ: ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ನಾಳೆ ರಜೆ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಸಕಲೇಶಪುರ, ಆಲೂರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಡಿಡಿಪಿಐ ಹೆಚ್.ಕೆ.ಪಾಂಡು ಸೂಚನೆಯಂತೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಕೊಡಗು: ಮಳೆ ಆರ್ಭಟಕ್ಕೆ ಜಲ ದಿಗ್ಬಂಧನವಾದ ಕುಟುಂಬ; ಅಸಹಾಯಕರಾಗಿ ನಿಂತಿರೋ ದಂಪತಿ
ಶಿವಮೊಗ್ಗ ಜಿಲ್ಲೆಯಲ್ಲಿ ಕೂಡ ವರುಣ ದೇವ ಅಬ್ಬರಿಸಿದ್ದು, ಜಿಲ್ಲೆಯ ತೀರ್ಥಹಳ್ಳಿ, ಸೊರಬ, ಸಾಗರ, ಹೊಸನಗರ ಒಟ್ಟು 4 ತಾಲೂಕುಗಳ ಪ್ರಾಥಮಿಕ, ಪ್ರೌಢಶಾಲೆಗೆ ರಜೆ ನೀಡಿ ಡಿಡಿಪಿಐ ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ.
Published On - 9:49 pm, Wed, 17 July 24