Bangalore Rains: ಬೆಂಗಳೂರಿನಲ್ಲಿ ಮಳೆ: ರಸ್ತೆಯಲ್ಲಿ ನೀರು ನಿಂತು ಸವಾರರ ಪರದಾಟ
Bangalore Heavy Rains Effect: ರಾಜಧಾನಿ ಬೆಂಗಳೂರಿನಲ್ಲಿ ವರುಣ ಅಬ್ಬರಿಸಿದ್ದಾನೆ. ಏಕಾಏಕಿ ಸುರಿದ ಧಾರಾಕಾರ ಮಳೆಗೆ ಕೆಲವೆಡೆ ರಸ್ತೆಗಳು ಜಲಾವೃತವಾಗಿದ್ದು, ವಾಹನಸವಾರರು ಪರದಾಡಿದ ಪ್ರಸಂಗ ನಡೆದಿದೆ. ಸಂಜೆ ವೇಳೆಗೆ ಬೆಂಗಳೂರಲ್ಲಿ ಹೆಚ್ಚಿನ ಮಳೆಯ ನಿರೀಕ್ಷೆಯಿದ್ದು, ನಾಳೆಯೂ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು, ಅಕ್ಟೋಬರ್ 08: ರಾಜಧಾನಿ ಬೆಂಗಳೂರಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ನಗರದ ಬಹುತೇಕ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ ಇನ್ನು ಕೆಲವು ಏರಿಯಾಗಳಲ್ಲಿ ತುಂತುರು ಮಳೆಯಾಗಿದೆ. ಯಲಹಂಕ ಆಸುಪಾಸು ಧಾರಾಕಾರ ಮಳೆ (Bangalore Rains) ಸುರಿದಿದ್ದು, ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದ ವೇಳೆ ಸುರಿದ ಮಳೆಯಿಂದ ವಾಜನ ಸವಾರರಿಗೆ ತೊಂದರೆಯಾಗಿದೆ.
ರಸ್ತೆಯಲ್ಲಿ ನಿಂತ ಮಳೆ ನೀರು
ಯಲಹಂಕ ವ್ಯಾಪ್ತಿಯಲ್ಲಿ ವರುಣ ಅಬ್ಬರಿಸಿದ ಕಾರಣ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದ್ದಾರೆ. ಕಾಫಿ ಡೇ ಬಳಿ ಮಳೆ ನೀರು ನಿಂತಿರುವುದರಿಂದ ಏರ್‌ಪೋರ್ಟ್ ರಸ್ತೆಯ ಕಡೆಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ. ಯಲಹಂಕ ರೈಲ್ವೇ ಅಂಡರ್‌ಪಾಸ್ ಬಳಿಯೂ ನೀರು ನಿಂತಿರುವುದರಿಂದ ನಗರದ ಕಡೆಗೆ ತೆರಳುವ ವಾಹನಗಳಿಗೆ ತೊಂದರೆಯಾಗಿದೆ. ಹಾಗೆಯೇ ವೀರಸಂದ್ರ ಜಂಕ್ಷನ್ ಬಳಿ ನೀರು ನಿಂತಿರುವುದರಿಂದ ಹೊಸೂರು ಕಡೆಗೆ ನಿಧಾನಗತಿಯ ಸಂಚಾರ ಕಂಡುಬಂತು.
ಬೆಂಗಳೂರು ಸಂಚಾರಿ ಪೊಲೀಸರಿಂದ ಟ್ವೀಟ್
“ಸಂಚಾರ ಸಲಹೆ” ಯಲಹಂಕ ಕಾಫಿ ಡೇ ಬಳಿ ಮಳೆ ನೀರು ನಿಂತಿರುವುದರಿಂದ ಏರ್‌ಪೋರ್ಟ್ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
“Traffic advisory” Due to waterlogging at Yelahanka Coffee day towards Airport Road is having slow-moving traffic. pic.twitter.com/QxBHE5VEKR
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) October 8, 2025
ಬೆಂಗಳೂರಲ್ಲಿ ನಾಳೆಯೂ ಮಳೆ
ಇನ್ನು ಇವತ್ತು ಬೆಳಗ್ಗೆಯಿಂದಲೇ ಬೆಂಗಳೂರಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿತ್ತು. ಸಂಜೆ ವೇಳೆಗೆ ಬೆಂಗಳೂರಲ್ಲಿ ಹೆಚ್ಚಿನ ಮಳೆಯ ನಿರೀಕ್ಷೆಯಿದ್ದು, ನಾಳೆಯೂ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಮುಂದಿನ ಎರಡು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಅಥವಾ ಸಣ್ಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:28 pm, Wed, 8 October 25




