ರೆಡ್ಡಿ- ಶ್ರೀರಾಮುಲು ಮಧ್ಯೆ ಜಾಲ್ವಾಮುಖಿ ಸ್ಫೋಟ: ದೋಸ್ತಿಯಲ್ಲಿ ಏನಾಯ್ತು? ಇಲ್ಲಿದೆ ಇನ್ಸೈಡ್
ಹದಿಮೂರು ವರ್ಷಗಳ ನಂತರ ಗಣಿಧಣಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಪ್ರವೇಶಿಸಿದ್ದಾರೆ. ಆಪ್ತ ಸ್ನೇಹಿತರು, ಕುಚಿಕುಗಳು ಎಂದೇ ಕರೆಯಿಸಿಕೊಳ್ಳುತ್ತಿದ್ದ ರೆಡ್ಡಿ ಹಾಗೂ ಶ್ರೀರಾಮುಲು ಬಳ್ಳಾರಿಯಲ್ಲಿ ಕಾಂಗ್ರೆಸ್ಅನ್ನು ಧೂಳಿಪಟ ಮಾಡಿದ್ದರು. ಆದ್ರೆ, ಇದೀಗ ಗಣಿನಾಡಲ್ಲಿ ಕಮಲ ಬಾಡಿ ಹೋಗಿದೆ. ಅಲ್ಲದೇ ಆಪ್ತ ಗೆಳೆಯರ ನಡುವೆ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಅದನ್ನು ಶ್ರೀರಾಮುಲು ಬಹಿರಂಗವಾಗಿ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ದೋಸ್ತಿಗಳ ನಡುವಿನ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬೆಂಗಳೂರು, (ಜನವರಿ 22): ಕರ್ನಾಟಕ ಬಿಜೆಪಿಯಲ್ಲಿ ಬಣಬಡಿದಾಟ ಜೋರಾಗಿದೆ. ಇದರ ಮಧ್ಯೆ ಕೇಸರಿ ಮನೆಯಲ್ಲಿ ಮತ್ತೊಂದು ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಸಚಿವ ಶ್ರೀರಾಮುಲು ಆಕ್ರೋಶಗೊಂಡಿದ್ದು, ಬಿಜೆಪಿ ತೊರೆಯುವ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿರುವುದೇ ನಿನ್ನೆ(ಜನವರಿ 21) ನಡೆದ ಬಿಜೆಪಿ ಕೋರ್ ಕಮಿಟಿ ಸಭೆ. ಸಭೆಯಲ್ಲೇ ರಾಜ್ಯ ಉಸ್ತುವಾರಿ ವಿರುದ್ಧ ರಾಮುಲು ಅಸಮಾಧಾನ ಹೊರಹಾಕಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ. ಬಳ್ಳಾರಿಯಲ್ಲಿ ಸಾಲು ಸಾಲು ಚುನಾವಣೆಯಲ್ಲಿ ಸೋತಿರೋದಕ್ಕೆ ರಾಮುಲುರನ್ನ ಹೊಣೆ ಮಾಡಲಾಗಿತ್ತು. ಇದಕ್ಕೆ ಸಿಡಿದೆದ್ದ ರಾಮುಲು, ರೆಡ್ಡಿ ವಿರುದ್ಧವೂ ಬೆಂಕಿಯುಗುಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧವೇ ಸಮರ ಸಾರಿದ್ದಾರೆ. ನಾನು ಬೇಡವಾದ್ರೆ ಹೇಳಿ ಪಕ್ಷ ಬಿಡುವುದಕ್ಕೂ ಸಿದ್ಧನಿದ್ದೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಸಮರ
ಬಿಜೆಪಿಯಲ್ಲಿ ವಿಜಯೇಂದ್ರ ಹಾಗೂ ಯತ್ನಾಳ್ ಬಣದ ಮಧ್ಯೆ ಗದ್ದುಗೆ ಗುದ್ದಾಟದ ನಡುವೆ ಒಂದು ಕಾಲದ ತಮ್ಮ ಆಪ್ತ ಸ್ನೇಹಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧವೇ ಮಾಜಿ ಸಚಿವ ಬಿ. ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಹೇಳಿರುವ ಶ್ರೀರಾಮುಲು, ಉಪಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ: ಸಭೆಯಲ್ಲಿ ಶ್ರೀರಾಮುಲು ಬಿಜೆಪಿ ತೊರೆಯುವ ಮಾತು
ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀರಾಮುಲು, ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ತಾವು ಹೇಳಿದ್ದೇ ನಡೆಯಬೇಕು, ನಾನು ಹೇಳಿದವರೇ ಗೆಲ್ಲಬೇಕು ಎಂದು ಇಲ್ಲಿನಿಂದ ದೆಹಲಿವರೆಗೆ ಏನೇನೋ ಸುಳ್ಳು ಹೇಳಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ. ನಾನು ಜನಾರ್ದನ ರೆಡ್ಡಿ ವಿರುದ್ಧ ಯಾವತ್ತೂ ನಡೆದುಕೊಂಡಿಲ್ಲ. ಅವರು ಪಾರ್ಟಿಗೆ ಮತ್ತೆ ಬರುತ್ತೇನೆ ಎಂದಾಗ, ಅವರನ್ನು ಕರೆದುಕೊಳ್ಳಲು ನಾನೇ ಹೇಳಿದ್ದೆ. ಆದರೆ, ಈಗ ನನ್ನ ವಿರುದ್ಧವೇ ಅಪಪ್ರಚಾರ ಮಾಡಿಸುತ್ತಿದ್ದಾರೆ ಎಂದು ಎಂದು ಒಂದು ಕಾಲದ ತಮ್ಮ ಆಪ್ತ ಸ್ನೇಹಿತನ ವಿರುದ್ಧವೇ ಕಿಡಿಕಾರಿದ್ದಾರೆ.
ರೆಡ್ಡಿ-ರಾಮುಲು ದೋಸ್ತಿಯಲ್ಲಿ ಬಿರುಕಿಗೆ ಕಾರಣವೇನು?
ಹದಿಮೂರು ವರ್ಷಗಳ ನಂತರ ಗಣಿಧಣಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಪ್ರವೇಶಿಸಿದ್ದಾರೆ. ಆಪ್ತ ಸ್ನೇಹಿತರು, ಕುಚಿಕುಗಳು ಎಂದೇ ಕರೆಯಿಸಿಕೊಳ್ಳುತ್ತಿದ್ದ ರೆಡ್ಡಿ ಹಾಗೂ ಶ್ರೀರಾಮುಲು ಬಳ್ಳಾರಿಯಲ್ಲಿ ಕಾಂಗ್ರೆಸ್ಅನ್ನು ಧೂಳೀಪಟ ಮಾಡಿದ್ದರು. ಆದ್ರೆ, ಇದೀಗ ಗಣಿನಾಡಲ್ಲಿ ಕಮಲ ಬಾಡಿ ಹೋಗಿದೆ. ಅಲ್ಲದೇ ಆಪ್ತ ಗೆಳೆಯರ ನಡುವೆ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಅದನ್ನು ಶ್ರೀರಾಮುಲು ಬಹಿರಂಗವಾಗಿ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ದೋಸ್ತಿಗಳ ನಡುವಿನ ಕಿತ್ತಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನು ರೆಡ್ಡಿ ಹಾಗೂ ಶ್ರೀರಾಮುಲು ಮಧ್ಯೆ ಜಾಲ್ವಾಮುಖಿ ಸ್ಫೋಟಕ್ಕೆ ಕಾರಣ ಏನು ಎನ್ನುವ ಎಕ್ಸ್ಕ್ಲ್ಯೂಸಿವ್ ಇನ್ಸೈಡ್ ಸುದ್ದಿ ಇಲ್ಲಿದೆ.
ಮೊದಲಿನಿಂದಲೂ ಇಬ್ಬರು ಕುಚುಕುಗಳು ರೀತಿ ಇದ್ದರು. ರಾಜಕೀಯವಾಗಿ ರಾಮುಲುರನ್ನು ಬೆಳಸಿದ್ದೇ ಜನಾರ್ದನ ರೆಡ್ಡಿ, ಎಸ್ಟಿ ನಾಯಕ ಎಂದು ಬೆಳೆಸಿದ್ದಾರೆ. ಆದ್ರೆ ಯಾವಾಗ ರೆಡ್ಡಿ ಬೆಳಗಾವಿಗೆ ಎಂಟ್ರಿ ಕೊಟ್ಟರೋ ಆಗ ಅವರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ನಂತರ ರೆಡ್ಡಿ ಕೆಆರ್ಪಿಪಿ ಪಕ್ಷ ಕಟ್ಟುತ್ತಾರೆ. ರಾಮುಲುರನ್ನೂ ಕರೆಯುತ್ತಾರೆ. ಆದ್ರೆ ನಾನು ಬಿಜೆಪಿ ಬಿಟ್ಟು ಬರುವುದಿಲ್ಲ ಎಂದು ರಾಮುಲು ಖಡಕ್ ಆಗಿ ಹೇಳಿದ್ದಾರೆ. ಇಲ್ಲಿಂದಲೇ ಇಬ್ಬರ ಮಧ್ಯೆ ವೈಮನಸ್ಸು ಆರಂಭ ಆಗಿದೆ,
2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ರಾಮುಲು ಸ್ಪರ್ಧೆ ಮಾಡುತ್ತಾರೆ, ಒಳಏಟು ಕೊಟ್ಟ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರಗೆ ಸಪೋರ್ಟ್ ಮಾಡುತ್ತಾರೆ. ಇದರಿಂದ ರಾಮುಲು ಸೋಲಬೇಕಾಯ್ತು, ಇದಿಷ್ಟೇ ಅಲ್ಲ ಲೋಕಸಭೆ ಚುನಾವಣೆಯಲ್ಲೂ ರಾಮುಲು ಸೋಲಿಗೆ ರೆಡ್ಡಿಯೇ ಕಾರಣ ಎಂದು ಆರೋಪ ಇದೆ. ಇನ್ನು ಹಂತ ಹಂತವಾಗಿಯೇ ರಾಮುಲುರನ್ನ ಸೈಡ್ಲೈನ್ ಮಾಡುವ ಕೆಲಸವೂ ಆಗುತ್ತೆ. ಹೀಗಾಗಿ ಶ್ರೀರಾಮುಲು ಕಣ್ಣು ಕೆಂಪಾಗಿಸಿದೆ.
ವಿಜಯೇಂದ್ರ ಮದ್ದು ಹರಿದರೂ ಕಡಿಮೆಯಾಗದ ಗಾಯ
ಇನ್ನು ಇಷ್ಟೆಲ್ಲಾ ಬೆಳವಣಿಗೆ ನಂತರವೂ ಸಹ ಸಂಡೂರು ಉಪಚುನಾವಣೆ ವೇಳೆ ಖುದ್ದು ರಾಜ್ಯಾಧ್ಯಕ್ಷ ವಿಜಯೇಂದ್ರ, ಆಂತರಿಕ ಸಮಸ್ಯೆಯಿಂದ ಸರಿದಿದ್ದ ರಾಮುಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವೊಲಿಸಿದ್ದರು. ಆದ್ರೆ, ಇಬ್ಬರ ಗಾಯಕ್ಕೆ ವಿಜಯೇಂದ್ರ ಮದ್ದು ನೀಡಿದ್ದರೂ ಸಹ ಆ ಗಾಯ ವಾಸಿಯಾಗಿಲ್ಲ. ಬದಲಿಗೆ ಮೆಲ್ಲಗೆ ತೀವ್ರ ಸ್ವರೂಪದ್ದಾಗಿದ್ದು, ಇದೀಗ ಉಸ್ತುವಾರಿಗೆ ಶ್ರೀರಾಮುಲು ವಿರುದ್ಧ ದೂರು ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಶ್ರೀರಾಮುಲು ರೆಡ್ಡಿ ಮೇಲೆ ಕೊತ ಕೊತ ಕುದಿಯುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:38 pm, Wed, 22 January 25