ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

2025-26ನೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ ವಿತರಣೆ ಈಗಾಗಲೇ ಆರಂಭಿಸಿದೆ. ಹಾಗಿದ್ದರೆ ಬಸ್​ ಪಾಸ್​ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸುವ ವೆಬ್​ ಸೈಟ್​ ಯಾವುದು? ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ? ಪಾಸ್ ದರ ಎಷ್ಟು? ಇಲ್ಲಿದೆ ವಿವರ

ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ

Updated on: May 31, 2025 | 9:26 PM

ಬೆಂಗಳೂರು, ಮೇ 31: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳು ಪ್ರಾರಂಭವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ವಿದ್ಯಾರ್ಥಿ ಬಸ್​ ಪಾಸ್ (Student Bus Pass) ಪಡೆಯಲು ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಸರ್ಕಾರದ ಆದೇಶದಂತೆ ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಬಸ್ ಪಾಸ್​ಗಳನ್ನು ವಿತರಿಸಲಾಗುತ್ತಿದ್ದು, ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳು ಮೇ 31 ರಿಂದ ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in/buspassservices/ ನಲ್ಲಿ ಆನ್‍ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಂದಿದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಆನ್​ಲೈನ್ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಇದಲ್ಲದೆ, ವಿದ್ಯಾರ್ಥಿಗಳು, ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ ರೂ.30/- ಸೇವಾ ಶುಲ್ಕವನ್ನು ಸದರಿ ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದೆ.
  • ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್​ ಪಾಸ್​ಗಾಗಿ ಅರ್ಜಿ ಸಲ್ಲಿಸಲು Declaration Form ಅನ್ನು ಸೇವಾಸಿಂಧು ತಂತ್ರಾಂಶದಲ್ಲಿ ಅಥವಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವೆಬ್​ಸೈಟ್​ನಲ್ಲಿ https://ksrtc.karnataka.gov.in/studentpass ಡೌನ್ ಲೋಡ್ ಮಾಡಿಕೊಳ್ಳುವುದು ಹಾಗೂ ಅದನ್ನು ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪಾಸ್ ಕೌಂಟರ್ ಆಯ್ಕೆ ಮಾಡಿ ಸಲ್ಲಿಸುವುದು.
  • ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್​ನ ವಿಳಾಸದ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್ಎಮ್​ಎಸ್​ ಮುಖಾಂತರ ಕಳುಹಿಸಲಾಗುವುದು. ವಿದ್ಯಾರ್ಥಿ ಪಾಸುಗಳನ್ನು 2025 ನೇ ಜೂನ್ 2 ರಿಂದ ನಿಗದಿತ ಪಾಸ್ ಕೌಂಟರ್​ಗಳಲ್ಲಿ ವಿತರಿಸಲಾಗುವುದು.
  • ತದನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್​​ಗೆ ತೆರಳಿ, ನಿಗದಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಯುಪಿಐ ಮುಖಾಂತರ ಪಾವತಿಸಿ ಪಾಸನ್ನು ಪಡೆಯಬಹುದಾಗಿದೆ.
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ 129 ಪಾಸ್ ವಿತರಣಾ ಕೌಂಟರ್ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‍ ಸೈಟ್ https://ksrtc.karnataka.gov.in/student pass ನಲ್ಲಿ ಒದಗಿಸಲಾಗಿದೆ.

ವಿದ್ಯಾರ್ಥಿ ಪಾಸಿನ ದರಗಳು

  • ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ರೂ.150/- ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 150.
  • ಪ್ರೌಢಶಾಲೆ ವಿದ್ಯಾರ್ಥಿಗಳು: ಸಾಮಾನ್ಯ ವರ್ಗದ ಬಾಲಕ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಪಾಸಿದ ದರ ರೂ. 750 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 150. ಸಾಮಾನ್ಯ ವರ್ಗದ ಬಾಲಕಿಯ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಪಾಸಿದ ದರ ರೂ. 550, ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 150.
  • ಕಾಲೇಜು/ ಡಿಪ್ಲೋಮಾ ವಿದ್ಯಾರ್ಥಿಗಳು: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ಪಾಸಿದ ದರ ರೂ.1050/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 150.
  • ಐಟಿಐ ವಿದ್ಯಾರ್ಥಿಗಳು: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 12 ತಿಂಗಳ ಅವಧಿಗೆ ಪಾಸಿದ ದರ ರೂ. ರೂ.1310/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 160.
  • ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ರೂ.1550/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 150.
  • ಸಂಜೆ ಕಾಲೇಜು / ಪಿಹೆಚ್‍ ಡಿ ವಿದ್ಯಾರ್ಥಿಗಳು: ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 10 ತಿಂಗಳ ಅವಧಿಗೆ ರೂ.1350/- ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ. 150 ನಿಗಧಿಪಡಿಸಲಾಗಿದೆ.

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದೆ.

ಇದನ್ನೂ ಓದಿ
ಕೊರೊನಾ ಅಬ್ಬರ...ಆರೋಗ್ಯ ಇಲಾಖೆಯಿಂದ ಶಾಲೆಗಳಿಗೆ ಗೈಡ್​​ಲೈನ್ಸ್
ವಿದೇಶದಲ್ಲಿ ಓದುವವರೇ ಈ ವಿಷ್ಯ ಗೊತ್ತಿಲ್ಲದಿದ್ದರೆ ಮೋಸ ಹೋಗುವುದು ಖಂಡಿತಾ
ಅತ್ಯಂತ ಕಡಿಮೆ ಸಮಯದಲ್ಲಿ ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ?
ಮರಳಿ ಶಾಲೆಗೆ: ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನಾರಂಭ, ಇಲ್ಲಿವೆ ಫೋಟೋಸ್

ಈ ಯೋಜನೆಯ ಸೌಲಭ್ಯವನ್ನು ವಿದ್ಯಾರ್ಥಿನಿಯರು ಸಹ ಪಡೆಯಬಹುದಾಗಿದೆ. ನೆರೆರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯುವ ಅಗತ್ಯವಿದೆ. ಈ ಕ್ರಮಗಳನ್ನು ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದಾಗಿರುತ್ತದೆ.

ಇದನ್ನೂ ಓದಿ: SSLCಯಲ್ಲಿ‌ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಗಳ DDPIಗಳಿಗೆ ಸಿಎಂ ಶಾಕ್

ವಿದ್ಯಾರ್ಥಿ ಪಾಸುಗಳಿಗೆ ಅರ್ಜಿ ಸಲ್ಲಿಕೆ/ ಪಾಸು ಮುದ್ರಣ ಸಂಬಂಧ ದೂರುಗಳಿದ್ದಲ್ಲಿ, ಸೇವಾಸಿಂಧು ಪೋರ್ಟಲ್ ಮುಖೇನ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳಿಗೆ ಸಹಾಯವಾಣಿ ಸಂಖ್ಯೆ – 080-24410574 ಅಥವಾ ಇ-ಮೇಲ್ ವಿಳಾಸ: sevasindhu@karnataka.gov.in, ಪಾಸ್ ವಿತರಣಾ ಕೇಂದ್ರಗಳಲ್ಲಿ ಪಾಸ್ ಕಾರ್ಡಿನ ಮುದ್ರಣ ಮತ್ತು ವಿತರಣೆಗೆ ಸಂಬಂಧಿಸಿದ ವಿಷಯಗಳಿಗೆ ಸಹಾಯವಾಣಿ ಸಂಖ್ಯೆ 8904085030/ 080-49203888 ಅಥವಾ ಇ-ಮೇಲ್ onehlepdesk@karnataka.gov.in ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾಲ್‍ ಸೆಂಟರ್ ಸಹಾಯವಾಣಿ ಸಂಖ್ಯೆ 080-26252625 ಅಥವಾ ಇ-ಮೇಲ್ ವಿಳಾಸ callcenter@ksrtc.org ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Sat, 31 May 25

Loading...
Unable to load recommendations.
Follow Us