ಹೇಗೆ ನಿಗದಿಯಾಗುತ್ತೆ ನಮ್ಮ ಮೆಟ್ರೋ ಟಿಕೆಟ್ ದರ? ಯಾರು ಹೆಚ್ಚಳ ಮಾಡ್ತಾರೆ? ಇಲ್ಲಿದೆ ವಿವರ

ಬೆಂಗಳೂರು ನಮ್ಮ ಮೆಟ್ರೋ ದರ ಏರಿಕೆಗೆ ಬ್ರೇಕ್ ಬಿದ್ರೂ ಮಾತಿನ ಯುದ್ಧ ನಿಂತಿಲ್ಲ. ಮೆಟ್ರೋ ಟಿಕೆಟ್ ಬೆಲೆ ಯಥಾಸ್ಥಿತಿಯಲ್ಲಿದ್ರೂ ರಾಜಕೀಯ ಸಮರಕ್ಕೆ ಬ್ರೇಕ್ ಬಿದ್ದಿಲ್ಲ. ದರ ಸಮರಕ್ಕೆ ತಾತ್ಕಾಲಿಕ ತಡೆಯಾಗಿದ್ದರೂ ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರ ಮತ್ತೊಂದು ಮಗ್ಗಲಿಗೆ ಹೊರಳಿದೆ. ಇದರ ಮಧ್ಯೆ ಸದ್ಯ ಮೆಟ್ರೋ ಟಿಕೆಟ್ ಪ್ರಯಾಣ ದರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹಾಗಾದ್ರೆ ಮೆಟ್ರೋ ದರ ಹೆಚ್ಚಳ ಹೇಗೆ ಯಾರು ಮಾಡುತ್ತಾರೆ? ಓ & ಎಂ ಕಾಯ್ದೆ ಏನ್ ಹೇಳುತ್ತೆ? ಫೇರ್ ಫಿಕ್ಸೇಷನ್ ಕಮಿಟಿ ಹೇಗೆ ಕೆಲಸ ಮಾಡುತ್ತೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಹೇಗೆ ನಿಗದಿಯಾಗುತ್ತೆ ನಮ್ಮ ಮೆಟ್ರೋ ಟಿಕೆಟ್ ದರ? ಯಾರು ಹೆಚ್ಚಳ ಮಾಡ್ತಾರೆ? ಇಲ್ಲಿದೆ ವಿವರ
Namma Metro

Updated on: Feb 09, 2026 | 6:20 PM

ಬೆಂಗಳೂರು, (ಫೆಬ್ರವರಿ 09): ಶೇ.5ರಷ್ಟು ಬೆಂಗಳೂರು ನಮ್ಮ ಮೆಟ್ರೋ (Namma Metro) ಟಿಕೆಟ್​ ದರ ಹೆಚ್ಚಳಕ್ಕೆ ಬಿಎಂಆರ್​​ಸಿಎಲ್ (BMRCL) ಮುಂದಾಗಿತ್ತು. ಆದ್ರೆ, ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯನ್ನ ಬಿಎಂಆರ್​​ಸಿಎಲ್ ಕೈ ಬಿಟ್ಟಿದೆ. ಹೀಗಾಗಿ ಮೆಟ್ರೋ ದರ ಯಥಾಸ್ಥಿತಿ ಮುಂದುವರಿಯಲಿದೆ. ಆದ್ರೆ ಇಲ್ಲಿ ನಾವು ಗಮನಿಸಬೇಕಿರುವುದು ಏನು ಅಂದ್ರೆ ತಾತ್ಕಾಲಿಕವಾಗಿ ಅಷ್ಟೇ ತಡೆ ಹಿಡಿದಿರುವುದು. ಹೀಗಾಗಿ ಮುಂದೆ ಯಾವ ಕ್ಷಣದಲ್ಲಿ ಯಾವ ನಿರ್ಧಾರ ಆದ್ರೂ ಅಚ್ಚರಿ ಏನಿಲ್ಲ.ಇಲ್ಲಿ ನಾವು ಸ್ಪಷ್ಟವಾಗಿ ಗಮನಿಸಬೇಕಿರುವುದು ಏನು ಅಂದ್ರೆ, ಮೆಟ್ರೋ ದರ ಏರಿಕೆಯಲ್ಲಿ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾತ್ರ ಇರುವುದಿಲ್ಲ. ಪ್ರಸ್ತಾವನೆ ಸಲ್ಲಿಸಬಹುದು ಅಷ್ಟೇ, ಆದ್ರೆ ಎಲ್ಲವೂ ಫೇರ್ ಫಿಕ್ಸೇಷನ್ ಕಮಿಟಿ ಶಿಫಾರಸ್ಸಿನಂತೆ ದರ ನಿಗದಿ ಆಗುತ್ತೆ.

ಹೇಗೆ ಹೆಚ್ಚಳವಾಗುತ್ತೆ ಮೆಟ್ರೋ ಟಿಕೆಟ್ ದರ?

ಮೆಟ್ರೋ O ಮತ್ತು M ಕಾಯ್ದೆ 2002ರಂತೆ ದರ ನಿಗದಿ ಆಗುತ್ತೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದರ ನಿಗದಿ ಸಮತಿ ರಚನೆ ಮಾಡಲಾಗುತ್ತೆ. ಸಮಿತಿಯಲ್ಲಿ ಹೈಕೋರ್ಟ್​​ನ ನಿವೃತ್ತ ಅಥವಾ ಹಾಲಿ ಜಡ್ಜ್ ಇರುತ್ತಾರೆ. ಹಿರಿಯ ಪ್ರಧಾನ ಕಾರ್ಯದರ್ಶಿ ಅಥವಾ ಅಪರ ಮುಖ್ಯ ಕಾರ್ಯದರ್ಶಿ, ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಇರಲಿದ್ದಾರೆ. ಇನ್ನು ದರ ಏರಿಕೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಅಥವಾ ಮೆಟ್ರೋ ಸಂಸ್ಥೆ ಪ್ರಸ್ತಾಪ ಮಾಡಬಹುದು. ಆದ್ರೆ ನೇರವಾಗಿ ದರ ಹೆಚ್ಚಳ ಮಾಡುವ ಅಧಿಕಾರ ಯಾವ ಸರ್ಕಾರಕ್ಕೂ ಇರುವುದಿಲ್ಲ. ಸಮಿತಿಯ ನಿರ್ಧಾರವೇ ದರ ಪರಿಷ್ಕರಣೆ ಅಂತಿಮ ಆಗುತ್ತೆ.How Will BMRCL Implement Metro Fare Price Hike: ಹೇಗೆ ನಿಗದಿಯಾಗುತ್ತೆ ಮೆಟ್ರೋ ಟಿಕೆಟ್ ದರ ಹೆಚ್ಚಳ?
ಕಳೆದ ವರ್ಷ ಅಂದ್ರೆ 2025ರ ಫೆಬ್ರವರಿ 9ರಂದು ಶೇ.51ರಷ್ಟು ದರ ಏರಿಕೆ ಮಾಡಿ ಸಮಿತಿ ಆದೇಶ ಮಾಡಿತ್ತು. ದರ ಏರಿಕೆ ಆಗಿ ಇಂದಿಗೆ ಕರೆಕ್ಟ್​ ಒಂದು ವರ್ಷ ಆಗಲಿದೆ. 2017ರಿಂದ 2025ರ ವರೆಗೂ ದರ ನಿಗದಿಯಾಗದ ಹಿನ್ನೆಲೆ ಮುಂದಿನ ಪ್ರತಿವರ್ಷವೂ ಶೇ. 5 ರಷ್ಟು ದರ ಹೆಚ್ಚಳಕ್ಕೆ ಸಮಿತಿ ಅನುಮತಿನೂ ಕೊಟ್ಟಿತ್ತು. ಅದರಂತೆಯೇ ಇಂದು ಶೇ.5ರಷ್ಟು ದರ ಹೆಚ್ಚಳಕ್ಕೆ BMRCL ಮುಂದಾಗಿತ್ತು. ಆದ್ರೆ ಇದೀಗ ತಡೆ ಹಿಡಿಯಲಾಗಿದೆ. ಆದ್ರೆ ದರ ಏರಿಕೆ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಮಧ್ಯೆ ಗುದ್ದಾಟ ಮಾತ್ರ ಜೋರಾಗಿಯೇ ನಡೆಯುತ್ತಿದೆ.

ಇದನ್ನೂ ಓದಿ: ಗುಡ್​​ನ್ಯೂಸ್: ಕೇಂದ್ರದ ಒಂದೇ ಸೂಚನೆಗೆ ಮೆಟ್ರೋ ಟಿಕೆಟ್ ದರ ಏರಿಕೆ ಕೈಬಿಟ್ಟ BMRCL

ಆರ್​.ವಿ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ದೊಡ್ಡ ಹಂಗಾಮವನ್ನೇ ಮಾಡಿತು. ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಖಾಲಿ ಟ್ರಂಕ್​ ಹಿಡಿದು, ಮೆಟ್ರೋದಲ್ಲಿ ಪ್ರಯಾಣಕ್ಕೆ ಮುಂದಾಗಿದ್ದರು. ಆದ್ರೆ ಪೊಲೀಸರು ಮೆಟ್ರೋ ಒಳಗೆ ಬಿಡಲಿಲ್ಲ. ಈ ವೇಳೆ ಸಂಸದರು, ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಜನಾಕ್ರೋಶ ಹೆಚ್ಚಾಗ್ತಿದ್ದಂತೆಯೇ ತಾತ್ಕಾಲಿಕವಾಗಿ ದರ ಹೆಚ್ಚಳಕ್ಕೆ ತಡೆ ಕೊಡಲಾಗಿದೆ. ಆದ್ರೆ BMRCL ಸಿಪಿಆರ್​ಒ ಯಶವಂತ್​ ಚೌಹಾಣ್ ಮಾತು ಕೇಳಿದ್ರೆ ಜನರಿಗೆ ಬರೆ ಬೀಳೋದು ಪಕ್ಕಾನಾ? ಅನ್ನೋ ಅನುಮಾನವೂ ಮೂಡ್ತಿದೆ. ಯಾಕೆಂದ್ರೆ ತಾತ್ಕಾಲಿಕವಾಗಿ ತಡೆ ಹಿಡಿದ್ರೂ ಕೂಡ, ಅದಕ್ಕೆ ಇಂತಿಷ್ಟು ಅವಧಿ ಅಂತಾ ಇರೋದಿಲ್ಲ ಅಂದಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Mon, 9 February 26

Follow Us