AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹದಾಯಿ ಹೋರಾಟಗಾರರಿಂದ ಪ್ರಹ್ಲಾದ್​ ಜೋಶಿ ಕಾರಿಗೆ ಮುತ್ತಿಗೆ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ

ಕಾಂಗ್ರೆಸ್ ಎಲ್ಲಾ ಸಂದರ್ಭದಲ್ಲಿ ಕಳಸಾ ಬಂಡೂರಿಗೆ ಅನ್ಯಾಯ ಮಾಡಿದೆ. ಡಿಪಿಆರ್ ಸಹ ಬಿಜೆಪಿ ಮಾಡಿದೆ. ಆದರೆ ಸೋನಿಯ ಗಾಂಧಿ ಗೋವಾಗೆ ಹೋಗಿ ಹನಿ‌ ನೀರು ಕೊಡಲ್ಲ ಅಂದರು. ಫಾರೆಸ್ಟ್ ಕ್ಲಿಯರ್ ಬೇಕಾಗಿದೆ ತಾಂತ್ರಿಕ ಸಮಸ್ಯೆಯಿದೆ. ಹುಲಿ‌ ರಕ್ಷಣೆ ಪ್ರಾಧಿಕಾರ ಅನುಮತಿ ಬೇಕಾಗಿದೆ ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಇವರಿಗೆ ಎಷ್ಟು ನಾಲಿಗೆ ಇದೆ ಅಂತ ಗೊತ್ತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ಮಹದಾಯಿ ಹೋರಾಟಗಾರರಿಂದ ಪ್ರಹ್ಲಾದ್​ ಜೋಶಿ ಕಾರಿಗೆ ಮುತ್ತಿಗೆ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
ಶಿವಕುಮಾರ್ ಪತ್ತಾರ್
| Updated By: ವಿವೇಕ ಬಿರಾದಾರ|

Updated on: Feb 26, 2024 | 3:00 PM

Share

ಹುಬ್ಬಳ್ಳಿ, ಫೆಬ್ರವರಿ 26: ನವಲಗುಂದ-ನರಗುಂದ ಮಹದಾಯಿ (Mahadayi) ಹೋರಾಟಗಾರರ ಆಕ್ರೋಶ ಮತ್ತೆ ಭುಗಿಲೆದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಕಾರಿಗೆ ಮುತ್ತಿಗೆ ಹಾಕಿ, ಚುನಾವಣೆಗೂ ಮುನ್ನ ಕಳಸಾ-ಬಂಡೂರಿ ಕಾಮಗಾರಿ (Kalasa-banduri work) ಆರಂಭಿಸುವಂತೆ ಒತ್ತಾಯಿಸಿದರು. ಕಳಸಾ-ಬಂಡೂರಿ ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ರೈತರು ಹುಬ್ಬಳ್ಳಿಯ ಸಚಿವ ಪ್ರಹ್ಲಾದ್​ ಜೋಶಿ ನಿವಾಸದ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾಮಗಾರಿ ಆರಂಭವಾಗದೆ, ಮತ ಕೇಳಲು ಬನ್ನಿ ಪಾಠ ಕಲಿಸುತ್ತೇವೆ ಎಂದು ಗುಡುಗಿದರು. ರೈತರ ಎಚ್ಚರಿಕೆಗೆ ತಬ್ಬಿಬ್ಬಾದ ಕೇಂದ್ರ ಸಚಿವ ಜೋಶಿ, ಆರಂಭ ಮಾಡುತ್ತೇವೆ ಮಾಡುತ್ತೇವೆ ಎನ್ನುತ್ತಲೇ ಸ್ಥಳದಿಂದ ಕಾಲ್ಕಿತ್ತರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲಾ ಸಂದರ್ಭದಲ್ಲಿ ಕಳಸಾ ಬಂಡೂರಿಗೆ ಅನ್ಯಾಯ ಮಾಡಿದೆ. ಡಿಪಿಆರ್ ಸಹ ಬಿಜೆಪಿ ಮಾಡಿದೆ. ಆದರೆ ಸೋನಿಯ ಗಾಂಧಿ ಗೋವಾಗೆ ಹೋಗಿ ಹನಿ‌ ನೀರು ಕೊಡಲ್ಲ ಅಂದರು. ಫಾರೆಸ್ಟ್ ಕ್ಲಿಯರ್ ಬೇಕಾಗಿದೆ ತಾಂತ್ರಿಕ ಸಮಸ್ಯೆಯಿದೆ. ಹುಲಿ‌ ರಕ್ಷಣೆ ಪ್ರಾಧಿಕಾರ ಅನುಮತಿ ಬೇಕಾಗಿದೆ ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಇವರಿಗೆ ಎಷ್ಟು ನಾಲಿಗೆ ಇದೆ ಅಂತ ಗೊತ್ತಾಗಿದೆ. ಹೀಗಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಕುಸಿದಿದೆ. ಮುಂದಿನ ದಿನಗಳಲ್ಲಿ ಈಗಿರುವ 52 ಸೀಟುಗಳು ಸಹ ಕಡಿಮೆ ಆಗಲಿವೆ ಎಂದರು.

ನಿಮಗೆ ಮಾನ ಮರ್ಯಾದೆ ಇಲ್ಲ ಅಂದ್ರೆ ನನಗೆ ಇಲ್ಲ ಅಂದುಕೊಂಡಿದ್ದಿರಾ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮ್ಮಷ್ಟು ನೀಚತನಕ್ಕೆ ನಾನು ಇಳಿಯುವುದಿಲ್ಲ. ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಿ ನೀವು ಏಕವಚನದಲ್ಲಿ ಮಾತನಾಡಿದ್ದಿರಿ. ನಿಮ್ಮ ಸಂಸ್ಕೃತಿಗೆ ನಾನು ಇಳಿಯುವದಿಲ್ಲ. ನೀವು ಹೇಗೆ ಪ್ರಮಾಣವಚನ ಸ್ವೀಕರಿಸಿದದ್ದಿರಿ ಹಾಗೆ ನಾನು ಕೂಡ ಪ್ರಮಾಣವಚನ ಸ್ವೀಕಾರ ಮಾಡಿರುವೆ. ಆಡಳಿತ ಅಧಿಕಾರ ನಿಮಗೆ ಜಾಸ್ತಿ ಇರಬಹುದು, ಕೇಂದ್ರ ಸರ್ಕಾರದ ಒಬ್ಬ ಮಂತ್ರಿ ರಾಜ್ಯದ ಮುಖ್ಯ ಮಂತ್ರಿ ಸಂವಿಧಾನದಲ್ಲಿ ಒಂದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದರು.

ನಾನು ಮಾನ ಮರ್ಯಾದೆ ಬಿಟ್ಟು ವರ್ತನೆ ಮಾಡುವುದಿಲ್ಲ. ಸಿದ್ದರಾಮಯ್ಯ ಫೈಲ್ ನೋಡದೆ ಉಡಾಫೆ ಹೊಡಿಯುತ್ತಾರೆ. ಸಿದ್ದರಾಮಯ್ಯ ಈ ರೀತಿ ವಿವೇಚನ ರಹಿತವಾಗಿ‌ ಮಾತನಾಡುತ್ತಿದ್ದಿರಿ. ಹೋಗಿ ಹೋಗಿ ತೃಣಮೂಲ ಕಾಂಗ್ರೆಸ್ ಬಳಿ‌ ಎರಡು ಸಿಟ್ ಕೊಡಿ ಮೂರು ಸಿಟ್ ಕೊಡಿ ಅಂತ ಭಿಕ್ಷೆ ಬೇಡುತ್ತಿದ್ದಿರಿ ಎಂದು ವ್ಯಂಗ್ಯವಾಡಿದರು.

ಸಿಟಿ ರವಿ ಮತ್ತು ಶೋಭಾ ಕರಂದ್ಲಾಜೆ ಗೋ ಬ್ಯಾಕ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸ್ವಂತ ಬಲ ಮತ್ತು ಅಭಿವೃದ್ಧಿದಿಂದ ಗೆಲ್ಲುವುದಿಲ್ಲ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಷಡ್ಯಂತರಕ್ಕೆ ಜನ ಬಲಿಯಾಗುವುದಿಲ್ಲ ಎಂದರು.

ಮಂಡ್ಯದಿಂದ ಸುಮಲತಾ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯ ವಿಚಾರದಲ್ಲಿ ಎಲ್ಲರಿಗೂ ಸಮಾಧಾನವಾಗುವ ಪರಿಹಾರ ಕಂಡುಹಿಡಿಯುವತ್ತೇವೆ. ಅಧಿವೇಶನದಲ್ಲಿ ಸುಮಲತಾ ಜೊತೆಗೆ ಮಾತನಾಡಿದ್ದೆ, ಒಂದು ಮನೆಯಿಂದ ಇನ್ನೊಂದು ಮನೆಗೆ ಮದುವೆ ಸಂಬಂಧ ಆದ ಕೂಡಲೇ ಎಲ್ಲ ಹೊಂದಾಣಿಕೆ ಆಗುವುದಿಲ್ಲ. ದೊಡ್ಡ ಪಾರ್ಟಿಗಳು, ದೊಡ್ಡ ವ್ಯವಸ್ಥೆ ಕೋಟ್ಯಾಂತರ ಜನ, ಲಕ್ಷಾಂತರ ಜನ ಹೊಂದಾಣಿಕೆಗೆ ಸಮಯಬೇಕು. ಕುಮಾರಸ್ವಾಮಿ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿಗೆ ಸೋನಿಯಾ ಗಾಂಧಿ ಪತ್ರ; ಖಡಕ್ ರಿಯಾಕ್ಷನ್ ಕೊಟ್ಟ ಸಚಿವ ಪ್ರಹ್ಲಾದ್​ ಜೋಶಿ, ಇಲ್ಲಿದೆ ವಿಡಿಯೋ

ಅನಂತಕುಮಾರ್ ಹೆಗಡೆ ಮೇಲೆ ಪ್ರಕರಣ ದಾಖಲಿಸಿರುವ ವಿಚಾರವಾಗಿ ಮಾತನಾಡಿದ ಅವರು, ಹಲವು ಸಂಗತಿಗಳನ್ನು ಸಿದ್ದರಾಮಯ್ಯ ಏಕವಚನದಲ್ಲಿ ಬಾಯಿಗೆ ಬಂದಹಾಗೆ ಬೈತಾರೆ. ಅವರ ಬಗ್ಗೆ ಏನು ಆಗಲ್ಲ ಆದರೆ ಅನಂತಕುಮಾರ್ ಬಗ್ಗೆ ಆಗುತ್ತೆ. ಯಾವ ರೀತಿ ಅಧಿಕಾರ ದುರುಪಯೋಗ ಆಗುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ವಾಗ್ದಾಳಿ ಮಾಡಿದರು.

ಇನ್ನು ನಿರ್ಮಲಾ ಸೀತಾರಾಮ್ ಲೋಕಸಭೆಗೆ ಸ್ಪರ್ಧೆ ಮಾಡುವುದು ನಿಶ್ಚಿತ. ಆದರೆ ಯಾವ ರಾಜ್ಯದಿಂದ ಸ್ಪರ್ಧೆ ಮಾಡತ್ತಾರೆ ಅನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದು ಜಾರಿಕೊಂಡರು. ರಾಜಾ ವೆಂಕಟಪ್ಪ ನಾಯಕ ಅವರ ಸಾವು ಸಮಾಜಕ್ಕೆ ಮತ್ತು ರಾಜಕೀಯ ವಲಯಕ್ಕೆ ಸಾಕಷ್ಟು ನೋವು ತಂದಿದೆ. 67 ವರ್ಷದಲ್ಲಿ ಮೊನ್ನೆ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ