ಮಹಾಮಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹುಬ್ಬಳ್ಳಿಯ 62 ರ ಕಲಾವಿದನಿಂದ ವಿಶೇಷ ರೀತಿಯಲ್ಲಿ ಜಾಗೃತಿ
ಬಸವರಾಜ ಜಿಗಜಿನ್ನಿ ಅಸ್ತಿಪಂಜರದ ಮಾದರಿಯೊಂದನ್ನು ತಯಾರು ಮಾಡಿದ್ದಾರೆ. ಆ ಮೂಲಕ ಕೊರೊನಾ ತಡೆಗಟ್ಟುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು ಜನರಲ್ಲಿ ಕೊವಿಡ್ 19 ಜಾಗೃತಿ ಮೂಡಿಸುತ್ತಿದ್ದಾರೆ.

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಕಳೆದ ಒಂದೂವರೆ ವರ್ಷದಿಂದ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಅಲ್ಲದೇ ಈ ಮಹಾಮಾರಿಯಿಂದ ಸಾವಿರಾರು ಜನ ತಮ್ಮಪ್ರಾಣವನ್ನೇ ತೆತ್ತಿದ್ದಾರೆ. ಇದೀಗ ಮತ್ತೆ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಈ ಹೆಮ್ಮಾರಿಯಿಂದ ದೂರವಿರುವ ನಿಟ್ಟಿನಲ್ಲಿ 62ರ ಇಳಿವಯಸ್ಸಿನ ಕಲಾವಿದರೊಬ್ಬರು ವಿಭಿನ್ನ ರೀತಿಯ ಜಾಗೃತಿ ಮೂಡಿಸುತ್ತಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಕಲಾವಿದ ಬಸವರಾಜ ಜಿಗಜಿನ್ನಿ ಅಸ್ತಿಪಂಜರದ ಮಾದರಿಯೊಂದನ್ನು ತಯಾರು ಮಾಡಿದ್ದಾರೆ. ಆ ಮೂಲಕ ಕೊರೊನಾ ತಡೆಗಟ್ಟುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹುಬ್ಬಳ್ಳಿಯ ಸಾಯಿನಗರದಲ್ಲಿರುವ ತಮ್ಮ ನಿವಾಸದಲ್ಲೆ ಕೋವಿಡ್ ಕುರಿತು ಜಾಗೃತಿ ಮೂಡಿಸುವ ವಿಶಿಷ್ಟ ಕಲಾಕೃತಿ ಸಿದ್ಧವಾಗಿದ್ದು, ಝಗಮಗಿಸುವ ಬೆಳಕಿನ ನಡುವೆ ಕಲಾಕೃತಿ ನೋಡುಗರನ್ನು ಸೆಳೆಯುತ್ತಿದೆ.
ಕಳೆದ ಹಲವು ವರ್ಷಗಳಿಂದಲೂ ವಿವಿಧ ರೀತಿಯ ಮಾದರಿಗಳನ್ನ ತಯಾರು ಮಾಡುವ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಬಸವರಾಜ ಅವರು ಕುಟುಂಬಸ್ಥರು ಇದರಿಂದ ಏನು ಲಾಭ ಎಂದು ಬೈಯಿಸಿಕೊಂಡಿದ್ದು ಉಂಟಂತೆ. ಆದರೆ ಇದೀಗ ಇವರ ಕಲೆ ನೋಡಿ ಕುಟುಂಬದವರು ಪ್ರೋತ್ಸಾಹ ನೀಡುತ್ತಿದ್ದು, ಇವರ ಕಲೆಗೆ ಬೆಲೆ ಸಿಗಲಿ ಎನ್ನುವ ಆಶಯ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ದೇಶದೆಲ್ಲಡೆ ಮತ್ತೆ ಕೊರೊನಾ ಎರಡನೇ ಅಲೆ ಜೋರಾಗಿದೆ. ಹೀಗಾಗಿ ಜನ ತಾವೇ ಸ್ವಯಂ ನಿಯಂತ್ರಣ ಹಾಕಿ ಕೊಳ್ಳಬೇಕು. ಅದಕ್ಕಾಗೇ ನಾನು ಈ ರೀತಿ ಕೊರೊನಾ ಆಕೃತಿಯನ್ನ ಮಾಡಿ ಜನ ಜಾಗೃತಿ ಮೂಡಿಸುತ್ತಿದ್ದೇನೆ. ಇಲ್ಲಿಗೆ ಬರುವ ಪ್ರತಿಯೊಬ್ಬರು ಇದನ್ನ ನೋಡಿ ಹೆದರುತ್ತಿದ್ದಾರೆ. ಹಾಗೇ ಕೊರೊನಾ ಕೂಡ ಹೊಗಲಾಡಿಸಲು ಎಲ್ಲರೂ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಕಲಾವಿದ ಬಸವರಾಜ ಜಿಗಜಿನ್ನಿ ಹೇಳಿದ್ದಾರೆ.

ಕಲಾವಿದ ಬಸವರಾಜ ಜಿಗಜಿನ್ನಿ
ಒಟ್ಟಾರೆ ಮಹಾಮಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವಷ್ಟೇ ಅಲ್ಲದೇ ಜನಸಾಮಾನ್ಯರು ಸರಿಯಾದ ನಿರ್ದೇಶನಗಳನ್ನ ಪಾಲಿಸುವ ಮೂಲಕ ಕೊರೊನಾ ಹೊಡೆದೋಡಿಸುವ ಕೆಲಸಕ್ಕೆ ಮುಂದಾಗಬೇಕು ಅಲ್ಲದೆ ಪ್ರತಿಯೊಬ್ಬರೂ ಕೊರೋನಾ ಲಸಿಕೆ ತೆಗೆದುಕೊಳ್ಳುವ ಮೂಲಕ ವೈರಸ್ನಿಂದ ದೂರ ಉಳಿಯುವ ಪ್ರಯತ್ನಕ್ಕೆ ಮುಂದಾಗಬೇಕು ಎಂಬ ಉತ್ತಮ ಜಾಗೃತಿ ಮೂಡಿಸುತ್ತಿರುವ ಈ ಇಳಿವಯಸ್ಸಿನ ಕಲಾವಿದ ನಿಜಕ್ಕೂ ಇತರರಿಗೆ ಮಾದರಿ.
ಇದನ್ನೂ ಓದಿ:
ಬೆಣ್ಣೆನಗರಿಯಲ್ಲಿ ಮಾರ್ಷಲ್ಗಳ ನೇಮಕ; ಕೊರೊನಾ ನಿಯಮ ಪಾಲಿಸದವರಿಗೆ ಮಹಾನಗರ ಪಾಲಿಕೆಯಿಂದ ಹೊಸ ನಿಯಮ
(Hubli old age man trying to control Covid-19 in a different way; here is the details)