ಬೆಂಗಳೂರು, ನವೆಂಬರ್ 12: ಕೆಎಸ್ಆರ್ಟಿಸಿ ಬಸ್ಗಳ ಅಪಘಾತದಿಂದಲೇ ಪ್ರತಿವರ್ಷ ನಿಗಮಕ್ಕೆ ನೂರು ಕೋಟಿ ರೂಪಾಯಿ ನಷ್ಟ ಆಗುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಹೀಗಾಗಿ ಅಪಘಾತಗಳನ್ನು ತಪ್ಪಿಸಲು ಮತ್ತು ಸುರಕ್ಷಿತ ಚಾಲನೆಗಾಗಿ ಸಂಸ್ಥೆಯ ಚಾಲಕರಿಗೆ ವಿಶೇಷ ತರಬೇತಿ ಕೊಡಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಹಿಂದೂಸ್ಥಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂನಿಂದ ಸ್ಪೆಷಲ್ ಟ್ರೈನಿಂಗ್ ಕೊಡಿಸಲು ಮುಂದಾಗಿರುವುದಾಗಿ ಸಂಸ್ಥೆ ತಿಳಿಸಿದೆ.
ಕೆಎಸ್ಆರ್ಟಿಸಿಯಲ್ಲಿ 8 ಸಾವಿರಕ್ಕೂ ಹೆಚ್ಚು ಬಸ್ಸುಗಳಿವೆ. ಪ್ರತಿದಿನ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಲೇ ಇರುತ್ತದೆ. ಪ್ರಯಾಣಿಕರು, ವಾಹನ ಸವಾರರು, ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ಇದರಿಂದಾಗಿ, ಪರಿಹಾರದ ರೂಪದಲ್ಲಿ ಪ್ರತಿವರ್ಷ ಬರೋಬ್ಬರಿ ನೂರು ಕೋಟಿ ರೂಪಾಯಿಯಷ್ಟು ವಿತರಣೆ ಮಾಡಲಾಗುತ್ತಿದೆ. ಇದನ್ನು ತಪ್ಪಿಸಲು ಈಗಾಗಲೇ ತಜ್ಞರ ಜೊತೆಗೆ ಒಂದು ಸುತ್ತಿನ ಮಾತುಕತೆ ಆಗಿದೆ. ಶೀಘ್ರದಲ್ಲೇ ತರಬೇತಿ ಆರಂಭವಾಗಲಿದೆ ಎಂದು ಸಂಸ್ಥೆಯ ಎಂಡಿ ಅನ್ಬು ಕುಮಾರ್ ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ಗಳ ಅಪಘಾತದಿಂದ ನಿಗಮಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ. ಇದನ್ನು ತಪ್ಪಿಸಲು ಹಿಂದೂಸ್ಥಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ರೀತಿಯಲ್ಲಿ ಕೆಲಸ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ಹೆಚ್ಪಿಸಿಎಲ್ ಮತ್ತು ಬಿಪಿಸಿಯಲ್ಲಿ 24 ಸಾವಿರ ಟ್ರಕ್ಗಳಿವೆ. ಆದರೆ ಅಪಘಾತಗಳ ಸಂಖ್ಯೆ ತೀರಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಚಾಲಕರಿಗೆ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂನ ತಜ್ಞರಿಂದ ವಿಶೇಷ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೆಎಸ್ಆರ್ಟಿಸಿಯ ಈ ಹೊಸ ನಡೆಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ತರಬೇತಿಯಿಂದ ಅಪಘಾತಗಳು ಕಡಿಮೆ ಆಆಗಬಹುದು. ನಮಗೂ ಪ್ರಯಾಣ ಮಾಡಲು ಭಯ ಇರುವುದಿಲ್ಲ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಡಿವೈಡರ್ ಹತ್ತಿ ನುಗ್ಗಿದ ಕೆಎಸ್ಆರ್ಟಿಸಿ ಬಸ್
ಒಟ್ಟಿನಲ್ಲಿ ಕೆಎಸ್ಆರ್ಟಿಸಿ ಬಸ್ ಆಕ್ಸಿಡೆಂಟ್ಗಳಿಂದ ಪ್ರತಿವರ್ಷ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದು, ನಿಗಮಕ್ಕೆ ಬರೋಬ್ಬರಿ ನೂರು ಕೋಟಿ ರೂಪಾಯಿ ನಷ್ಟವೂ ಆಗುತ್ತಿದೆ. ಇದೀಗ ವಿಶೇಷ ತರಬೇತಿಯಿಂದ ಸಮಸ್ಯೆ ಬಗೆಗರಿಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ