ಸ್ವಾತಂತ್ರ್ಯೋತ್ಸವ ಬಂದರೂ ಹುಬ್ಬಳ್ಳಿಯ ಖಾದಿ ತ್ರಿವರ್ಣ ಧ್ವಜ ತಯಾರಿಕಾ ಘಟಕದ ಲಾಭದಲ್ಲಿ ಭಾರೀ ಕುಸಿತ! ಕಾರಣ ಇಲ್ಲಿದೆ
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಬಿಐಎಸ್ ಪ್ರಮಾಣೀಕೃತ ಖಾದಿ ತ್ರಿವರ್ಣ ಧ್ವಜ ತಯಾರಿಕಾ ಕೇಂದ್ರವು ಈ ವರ್ಷ ಶೇ 75 ರಷ್ಟು ಲಾಭ ಕುಸಿತ ದಾಖಲಿಸಿದೆ. ಪಾಲಿಸ್ಟರ್ ಧ್ವಜಗಳಿಗೆ ಅನುಮತಿ ನೀಡಿದ್ದರಿಂದ ಖಾದಿ ಧ್ವಜಗಳ ಬೇಡಿಕೆ ಕುಸಿದಿದೆ. ಇದರಿಂದ ಕಾರ್ಮಿಕರ ಉದ್ಯೋಗಕ್ಕೂ ಕುತ್ತು ಬಂದಿದೆ. ಕರ್ನಾಟಕ ಖಾದಿ ಸಂಘವು ಸರ್ಕಾರದಿಂದ ಸಹಾಯ ಕೋರಿದೆ.

ಹುಬ್ಬಳ್ಳಿ, ಆಗಸ್ಟ್ 12: ಸ್ವಾತಂತ್ರ್ಯೋತ್ಸವ (Independence Day) ಬಂತೆಂದರೆ ಸಾಕು. ಹುಬ್ಬಳ್ಳಿಯ (Hubballi) ಬೆಂಗೇರಿಯಲ್ಲಿರುವ ದೇಶದ ಏಕೈಕ ಬಿಐಎಸ್ ಪ್ರಮಾಣೀಕೃತ ಖಾದಿ ತ್ರಿವರ್ಣ ಧ್ವಜ ತಯಾರಿಕಾ ಕೇಂದ್ರ (Tricolour Flag Unit) ಸದಾ ಗಜಿಬಿಜಿಯಿಂದ ಕೂಡಿರುತ್ತದೆ. ಮಹಿಳಾ ಉದ್ಯೋಗಿಗಳು ರಾಷ್ಟ್ರಧ್ವಜ ಹೊಲಿಯುವ ಕೆಲಸದಲ್ಲಿ ವ್ಯಸ್ತರಾಗಿರುತ್ತಾರೆ. ಆದರೆ, ಈ ವರ್ಷ ಸ್ವಾತಂತ್ರ್ಯೋತ್ಸವಕ್ಕೆ ಇನ್ನು ಬೆರಳೆಣಿಕೆ ದಿನ ಇದ್ದರೂ ಎಂದಿನ ಉತ್ಸಾಹ ಕಾಣಿಸುತ್ತಿಲ್ಲ. ಕಾರ್ಮಿಕರ ಸಂಖ್ಯೆಯೂ ಕಡಿಮೆಯಾಗಿದೆ. ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಲಾಭದಲ್ಲಿ ಈ ವರ್ಷ ಶೇ 75 ರಷ್ಟು ಕುಸಿತವಾಗಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಸಂಘವು ಸುಮಾರು 2.7 ಕೋಟಿ ರೂ. ಗಳಿಸುತ್ತಿತ್ತು. ಆದರೆ ಈ ವರ್ಷ ಕೇವಲ 49 ಲಕ್ಷ ರೂ. ಮೌಲ್ಯದ ಆರ್ಡರ್‌ಗಳನ್ನು ಪಡೆದುಕೊಂಡಿದೆ.
ಖಾದಿ ತ್ರಿವರ್ಣ ಧ್ವಜ ಬೇಡಿಕೆ ಕುಸಿತಕ್ಕೆ ಕಾರಣವೇನು?
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಪಾಲಿಸ್ಟರ್ ಧ್ವಜಗಳನ್ನು ಹಾರಿಸಲು ಅನುಮತಿ ನೀಡಿತ್ತು. ಅದರ ನಂತರ ಸಂಘವು ನಷ್ಟವನ್ನು ಎದುರಿಸುತ್ತಿದೆ. ಕೇಂದ್ರದ ಕ್ರಮದಿಂದ ಗುಜರಾತ್‌ನ ಪಾಲಿಸ್ಟರ್ ಕಂಪನಿಗಳಿಗೆ ಅಪಾರ ಲಾಭವಾಗುತ್ತಿದೆ. ಅವುಗಳು ಕಳೆದ ಎರಡು ವರ್ಷಗಳಿಂದ ಮಾರುಕಟ್ಟೆಯನ್ನು ವಶಪಡಿಸಿಕೊಂಡು ದೊಡ್ಡ ಲಾಭ ಗಳಿಸುತ್ತಿವೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಧ್ವಜ ಸಂಹಿತೆಗೆ ತಿದ್ದುಪಡಿ ತಂದ ಬಳಿಕ ಅನೇಕ ಸರ್ಕಾರಿ ಕಟ್ಟಡಗಳು ಮತ್ತು ಸಂಸ್ಥೆಗಳು ಸಹ ಪಾಲಿಸ್ಟರ್ ಧ್ವಜಗಳನ್ನು ಹಾರಿಸಲು ಪ್ರಾರಂಭಿಸಿವೆ. ಮತ್ತೊಂದೆಡೆ, ಖಾದಿ ಧ್ವಜಗಳ ಬೆಲೆ ಹೆಚ್ಚಾಗಿದ್ದು, ಇದೂ ಸಹ ಅವುಗಳನ್ನು ಜನ ದೂರವಿಡಲು ಕಾರಣವಾಗಿದೆ. ಖಾದಿ ಧ್ವಜಗಳು ದೀರ್ಘಾವಧಿ ಬಾಳಿಕೆ ಬರುವಂಥದ್ದಾಗಿದ್ದರೂ, ಅವು ಬೇಡಿಕೆಯನ್ನು ಶೀಘ್ರವಾಗಿ ಕಳೆದುಕೊಳ್ಳುತ್ತಿವೆ.
ಕರ್ನಾಟಕ ಸರ್ಕಾರದ ನೆರವು ಕೋರಿದ ಸಂಘ
ಏತನ್ಮಧ್ಯೆ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಕರ್ನಾಟಕ ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿದ್ದು, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಸರ್ಕಾರಿ ಸಂಸ್ಥೆಗಳು ಖಾದಿ ತ್ರಿವರ್ಣ ಧ್ವಜಗಳನ್ನು ಹಾರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದೆ.
ನೀತಿಯಲ್ಲಿನ ಬದಲಾವಣೆಯು ಸಂಘ ಮತ್ತು ಅದರ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹುಬ್ಬಳ್ಳಿಯ ಖಾದಿ ಫೆಡರೇಶನ್ ಕಾರ್ಯದರ್ಶಿ ಶಿವಾನಂದ್ ಮಠಪತಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಮಹಿಳಾ ಕಾರ್ಮಿಕರ ಉದ್ಯೋಗಕ್ಕೂ ಕುತ್ತು
“ನಮಗೆ ಕಡಿಮೆ ಆರ್ಡರ್‌ಗಳಿರುವುದರಿಂದ, ಈ ವರ್ಷ ಅನೇಕರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಬೆಂಗೇರಿಯ ರಾಷ್ಟ್ರೀಯ ಧ್ವಜ ತಯಾರಿಕಾ ಘಟಕವು ಮಹಿಳಾ ಕಾರ್ಮಿಕರನ್ನು ಮಾತ್ರ ನೇಮಿಸಿಕೊಳ್ಳುತ್ತದೆ ಮತ್ತು ಈ ಋತುವಿನಲ್ಲಿ ಹಲವರಿಗೆ ಕೆಲಸವಿಲ್ಲದಾಗಿದೆ’’ ಎಂದು ಶಿವಾನಂದ್ ಮಠಪತಿ ತಿಳಿಸಿದ್ದಾರೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಖಾದಿಯನ್ನು ಜನಪ್ರಿಯಗೊಳಿಸುವ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಗಸ್ಟ್ನಲ್ಲಿ ಗಣೇಶ ಹಬ್ಬ, ಸ್ವಾತಂತ್ರ್ಯ ದಿನಾಚರಣೆ; 16 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ
ಖಾದಿ ಧ್ವಜಗಳನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರಿ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸುವಂತೆ ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರಧ್ವಜಗಳ ಜೊತೆಗೆ ಬೆಂಗೇರಿ ಘಟಕವು ಚೀಲಗಳು, ಉಡುಪುಗಳು ಮತ್ತು ಬೆಡ್‌ಸ್ಪ್ರೆಡ್‌ಗಳಂತಹ ಖಾದಿ ವಸ್ತುಗಳನ್ನು ಸಹ ತಯಾರಿಸುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Tue, 12 August 25








