ಕೊರೊನಾ ಕಾಟ: ಮುಂದಿನ ನಾಲ್ಕು ವಾರ ಜಾಗೃತರಾಗಿರಿ- ಭಾರತೀಯ ವಿಜ್ಞಾನ ಸಂಸ್ಥೆ ಸೂಚನೆ
ಕರ್ನಾಟಕದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿದ್ದು ಮುಂದಿನ ನಾಲ್ಕು ವಾರದವರೆಗೆ ಜಾಗರೂಕರಾಗಿರಿ ಎಂದು ಸೂಚನೆ ನೀಡಿದೆ. ಈ ಕುರಿತಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್ ಬಾಬು ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ನಗರದಲ್ಲಿ ದಿನ ಸಾಗುತ್ತಿದ್ದಂತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ನಗರದಲ್ಲಿ 198 ವಾರ್ಡ್ಗಳ ಪೈಕಿ 150 ವಾರ್ಡ್ಗಳಲ್ಲಿ ತಲಾ 50 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇನ್ನಿತರ ವಾರ್ಡ್ಗಳಲ್ಲಿ 50ಕ್ಕಿಂತ ಕಡಿಮೆ ಸೋಂಕಿತರು ಇದ್ದಾರೆ. ನಗರದಲ್ಲಿ ಒಟ್ಟು 28,098 ಸಕ್ರಿಯ ಪ್ರಕರಣಗಳಿದ್ದು, ಇದೆ ರೀತಿ ಮುಂದುವರೆದರೆ ಮುಂದಿನ ಐದಾರು ದಿನದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಅಂದಾಜಿಸಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ಪ್ರಕರಣ ಸಂಖ್ಯೆ ದಿನ ಸಾಗುತ್ತಿದ್ದಂತೆ ಹೆಚ್ಚುತ್ತಲೇ ಇದೆ. ಕರ್ನಾಟಕ ಎರಡನೇ ಮಹಾಷ್ಟ್ರ ಆಗುತ್ತಾ? ಎಂಬ ಪ್ರಶ್ನೆ ಈಗಾಗಲೇ ಎದುರಾಗಿದೆ. ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಗಿರಿಧರ್ ಬಾಬು ಟಿವಿ9ಗೆ ಮಾಹಿತಿ ನೀಡಿದ್ದಾರೆ.
ಅಧ್ಯಯನದ ಪ್ರಕಾರ, ಮುಂಬರುವ ದಿನಗಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೇ ಪ್ರತಿ ದಿನ ಆರು ಸಾವಿರಕ್ಕೂ ಹೆಚ್ಚು ಕೊವಿಡ್ ಕೇಸ್ ದಾಖಲಾಗಲಿವೆ. ಕಳೆದ ಎರಡು ವಾರಗಳಿಂದ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇಪ್ಪತ್ತು ದಿನದಲ್ಲಿ ಸೋಂಕಿತರ ಸಂಖ್ಯೆ ಗರಿಷ್ಟ ಮಟ್ಟಕ್ಕೆ ತಲುಪಲಿದೆ. ಮುಂದಿನ ನಾಲ್ಕು ವಾರ ಎಚ್ಚರವಹಿಸಿ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಸೂಚನೆ ನೀಡಿದೆ.
ನಾಲ್ಕು ಗೋಡೆ ಮಧ್ಯೆ ಹೆಚ್ಚು ಜನ ಸೇರುವುದನ್ನು ನಿಯಂತ್ರಿಸಬೇಕು. ಮದುವೆ, ಶುಭ ಸಮಾರಂಭ, ಜಿಮ್, ಸ್ವಿಮಿಂಗ್ ಪೂಲ್, ಮಾರ್ಕೆಟ್, ಚಿತ್ರಮಂದಿರ ಇಂತಹ ಸ್ಥಳದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ. ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಬೆಡ್ಗಳ ಸಮಸ್ಯೆ ಉಂಟಾಗುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದಿನ ನಾಲ್ಕು ವಾರ ಜಾಗೃತರಾಗಿಬೇಕು. ಆರು ಸಾವಿರ ಕೇಸ್ ಬರೋವಾಗ ಶೇ 10 ಮಂದಿ ಗಂಭೀರ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. ಶೇ 10 ರಷ್ಟು ಜನರಿಗೆ ಸೋಂಕು ಬಹಿರಂಗವಾಗಿ ಗೋಚರಿಸಲಿದೆ. ಹೀಗಾಗಿ ಸರ್ಕಾರ ಕೂಡಲೇ ಆಸ್ಪತ್ರೆಗಳಲ್ಲಿ ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದು, ಕೊರೊನಾ ನಿಯಂತ್ರಣ ಕ್ರಮಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Ramesh Jarkiholi Corona Positive: ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್; ಗೋಕಾಕ್ ಆರೋಗ್ಯಾಧಿಕಾರಿ ಸ್ಪಷ್ಟನೆ