ರೈಲ್ವೆ ಇಲಾಖೆಯು 10 ವರ್ಷಗಳಲ್ಲಿ 5 ಲಕ್ಷಕ್ಕೂ ಅಧಿಕ ಯುವಕರಿಗೆ ಉದ್ಯೋಗ ನೀಡಿದೆ: ಸೋಮಣ್ಣ

ಭಾರತೀಯ ರೈಲ್ವೆ ಇಲಾಖೆಯು ತನ್ನ ಮಿಷನ್ ಮೋಡ್ ನೇಮಕಾತಿ ಅಭಿಯಾನದಡಿ 2014 ರಿಂದ 2024 ರವರೆಗೆ 5.02 ಲಕ್ಷಕ್ಕೂ ಹೆಚ್ಚು ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. 2024ರ ಜನವರಿಯಿಂದ 71,000 ಹುದ್ದೆಗಳ ಸೃಷ್ಟಿಯಾಗಿದ್ದು, ನೇಮಕಾತಿ ಪ್ರಕ್ರಿಯೆ ಮುಂದುವರಿಯುತ್ತಿದೆ. ಇದಲ್ಲದೆ, ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸರ್ಕಾರವು ಯುವಜನರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ತಿಳಿಸಿದರು.

ರೈಲ್ವೆ ಇಲಾಖೆಯು 10 ವರ್ಷಗಳಲ್ಲಿ 5 ಲಕ್ಷಕ್ಕೂ ಅಧಿಕ ಯುವಕರಿಗೆ ಉದ್ಯೋಗ ನೀಡಿದೆ: ಸೋಮಣ್ಣ
ವಿ ಸೋಮಣ್ಣ

Updated on: Apr 26, 2025 | 5:53 PM

ಬೆಂಗಳೂರು, ಏಪ್ರಿಲ್​ 26: ರೈಲ್ವೆ ಇಲಾಖೆಯು (Indian Railway) ಮಿಷನ್‌ ಮೋಡ್‌ ನೇಮಕಾತಿ (Mission Mode Recruitment) ಅಭಿಯಾನದಡಿಯಲ್ಲಿ 2014 ರಿಂದ 2024 ರವರೆಗೆ 5.02 ಲಕ್ಷ ಯುವಜನರಿಗೆ ಉದ್ಯೋಗಾವಕಾಶ ನೀಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರು ತಿಳಿಸಿದರು. ಬೆಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಶನಿವಾರ (ಏ.26) ಆಯೋಜಿಸಲಾದ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿಯವರ ಆಶಯದಂತೆ ಉದ್ಯೋಗ ಸೃಷ್ಟಿಯ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಲು ರೈಲ್ವೆ ಇಲಾಖೆಯು ವಾರ್ಷಿಕ ನೇಮಕಾತಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. 2024ರ ಜನವರಿಯಿಂದ ಇದುವರೆಗೆ ರೈಲ್ವೆ ಇಲಾಖೆಯಲ್ಲಿ ಸುಮಾರು 71,000 ಹುದ್ದೆಗಳನ್ನು ಸೃಷ್ಟಿಸಿದ್ದು ಇವುಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ಹೇಳಿದರು.

2047ರಲ್ಲಿ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅನೇಕ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಅದರಲ್ಲಿ ರಾಷ್ಟ್ರೀಯ ಉದ್ಯೋಗ ಮೇಳವೂ ಒಂದು, ಅದರ ಅಂಗವಾಗಿ 2022ರ ಅಕ್ಟೋಬರ್‌ ನಲ್ಲಿ ಪ್ರಧಾನಮಂತ್ರಿಯವರು 10 ಲಕ್ಷ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದರು ಎಂದು ಹೇಳಿದರು.

ಭಾರತವು 2025ರಲ್ಲಿ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಬೆಳೆಯುವ ಗುರಿ ಹೊಂದಿದ್ದು, 2030ರಲ್ಲಿ 7 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗುವ ಮಹತ್ವಾಕಾಂಕ್ಷೆ ಹೊಂದಿದೆ. ಈ ನಿಟ್ಟಿನಲ್ಲಿ ನಮ್ಮ ಯುವ ಜನತೆಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಉದ್ಯೋಗಸೃಷ್ಟಿಗೆ ಸರ್ಕಾರ ಆದ್ಯತೆ ನೀಡಿದೆ. ಪ್ರಸಕ್ತ ಬಜೆಟ್​ನಲ್ಲಿ ಪ್ರಧಾನಮಂತ್ರಿಯವರ ಪ್ಯಾಕೇಜ್‌ ಅಡಿಯಲ್ಲಿ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಇಂಟರ್ನ್​ಶಿಪ್ ಯೋಜನೆಗಳನ್ನು ಘೋಷಿಸಿದ್ದು, ಇದರಿಂದ ಸುಮಾರು 4.10 ಕೋಟಿ ಯುವಜನರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಕಲೆಕ್ಟರ್​ನಿಂದ ಹಲ್ಲೆ
ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬೀಳುತ್ತಿದ್ದ ಪ್ರಯಾಣಿಕ, ಮುಂದೇನಾಯ್ತು?
ಮೇ 25 ರಿಂದ ಬದಲಾಗಲಿದೆ ತತ್ಕಾಲ್‌ ಟಿಕೆಟ್‌ ವ್ಯವಸ್ಥೆ
ಬೆಂಗಳೂರು ಮೈಸೂರು ರೈಲು ಪ್ರಯಾಣಿಕರಿಗೆ ಸಂಕಷ್ಟ

ಭಾರತದ ಯುವ ಜನತೆಯನ್ನು ಸಬಲೀಕರಣಗೊಳಿಸಿ ಅವರ ಉದ್ಯಮಶೀಲತೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಪ್ರಧಾನಮಂತ್ರಿ ವಿಕಾಸ ಯೋಜನೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿದೆ. 2015 ರಲ್ಲಿ ಪ್ರಾರಂಭವಾದ ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಇದುವರೆಗೆ 32.61 ಲಕ್ಷ ಕೋಟಿ ರೂಪಾಯಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಈ ಪೈಕಿ ಕರ್ನಾಟಕದಲ್ಲಿ 3.02 ಲಕ್ಷ ಕೋಟಿ ರೂಪಾಯಿ ಸಾಲ ಒದಗಿಸಲಾಗಿದೆ. 2023 ರಲ್ಲಿ ಪ್ರಾರಂಭವಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕರ್ನಾಟಕದ ಸುಮಾರು 1.09 ಲಕ್ಷ ಕುಶಲಕರ್ಮಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಭಾನುವಾರದಂದು ನಮ್ಮ ಮೆಟ್ರೋ ನಸುಕಿನಿಂದಲೇ ಆರಂಭ

ಇಂದಿನ ಉದ್ಯೋಗ ಮೇಳದಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ 102 ಹಾಗೂ ಇತರ ಇಲಾಖೆಗಳಲ್ಲಿ 41 ಮಂದಿ ಸೇರಿ ಒಟ್ಟು 143 ಮಂದಿಗೆ ನೇಮಕಾತಿ ಪತ್ರ ನೀಡಲಾಯಿತು. ಸಂಸದ ಪಿ.ಸಿ. ಮೋಹನ್ ಮತ್ತು ಬೆಂಗಳೂರಿನ ಕರ್ನಾಟಕ ಮತ್ತು ಗೋವಾ ವಲಯದ ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರಾದ ಗಣಪತಿ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ