ಕೊಡಗಿನಲ್ಲಿ ಪ್ರವಾಹದಿಂದ ಸೂರು ಕಳೆದುಕೊಂಡವರಿಗಾಗಿ ಮನೆ ನಿರ್ಮಿಸುತ್ತಿದೆ ಇನ್ಫೋಸಿಸ್ ಫೌಂಡೇಶನ್
ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಈ ಮನೆಗಳು ನಿರ್ಮಾಣವಾಗುತ್ತಿವೆ. ಸುಮಾರು 70 ಮನೆಗಳು ಸಂಪೂರ್ಣವಾಗಿದ್ದು, ಸಂತ್ರಸ್ತರಿಗೆ ಹಂಚಿಕೆಯಾಗಲು ಸಿದ್ಧವಾಗಿವೆ. ಒಂದೊಂದು ಮನೆಗೆ ತಲಾ 10 ಲಕ್ಷ ರೂಪಾಯಿ ವೆಚ್ಚಮಾಡಲಾಗಿದ್ದು, ಅತ್ಯಾಧುನಿಕವಾಗಿ ಕಟ್ಟಲಾಗಿದೆ ಎಂದು ಈ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ರಾಜು ಡಿ ಆಗುಂಬೆ ತಿಳಿಸಿದ್ದಾರೆ.
ಕೊಡಗು: ಇನ್ಫೋಸಿಸ್ ಫೌಂಡೇಷನ್ನ ಅಧ್ಯಕ್ಷೆ ಸುಧಾ ಮೂರ್ತಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಸದಾ ಕಾಲ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಒಂದಿಲ್ಲಾ ಒಂದು ವಿಷಯದಲ್ಲಿ ಸುದ್ಧಿಯಲ್ಲಿರುತ್ತಾರೆ. ಲೋಕ ಕಲ್ಯಾಣ ಕಾರ್ಯದಲ್ಲಿ ಸದಾ ಮುಂದೆ ಇರುವ ಸುಧಾ ಮೂರ್ತಿ ಕೊರೊನಾ ಕಾಲಘಟ್ಟದಲ್ಲಿಯೂ ಅನೇಕ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಸುಧಾ ಮೂರ್ತಿಯವರು ಕೊಡಗು ಜಿಲ್ಲೆಯಲ್ಲಿ 2018 ಮತ್ತು 2019ರಲ್ಲಿ ಸಂಭವಿಸಿದ ಪ್ರವಾಹದಿಂದ ಮನೆ ಕಳೆದುಕೊಂಡ ಜನರ ಜೀವನಕ್ಕೆ ಆಧಾರವಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 2018 ಮತ್ತು 2019ರಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ನೂರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಇವರಲ್ಲಿ ಎಷ್ಟೋ ಮಂದಿಗೆ ಇನ್ನೂ ಕೂಡ ವಾಸ ಮಾಡಲು ಮನೆಗಳಿಲ್ಲ. ಜೋಪಡಿಗಳಲ್ಲಿ ಅಥವಾ ಯಾರದ್ದೋ ಮನೆಗಳಲ್ಲಿ ಬಾಡಿಗೆಗೆ ಆಶ್ರಯ ಪಡೆದಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ದುರಂತವಾಗಿದ್ದಾಗ ಸಂತ್ರಸ್ತರ ನೆರವಿಗೆ ನೂರಾರು ಮಂದಿ ಮುಂದೆ ಬಂದಿದ್ದಾರೆ. ಅವರಲ್ಲಿ ಇನ್ಪೋಸಿಸ್ ಫೌಂಡೇಷನ್ನ ಅಧ್ಯಕ್ಷೆ ಸುಧಾ ಮೂರ್ತಿ ಕೂಡ ಒಬ್ಬರು. ಆದರೆ ಇವರು ಕೈಗೊಂಡ ಸೇವೆ ಸಾಮಾನ್ಯದಾಗಿಲ್ಲ. ಬರೋಬ್ಬರಿ 25 ಕೋಟಿ ರೂಪಾಯಿ ಮೊತ್ತದ 200 ಮನೆಗಳನ್ನು ಉಚಿತವಾಗಿ ನಿರ್ಮಿಸಿ ಪ್ರವಾಹ ಸಂತ್ರಸ್ತರಿಗೆ ನೀಡಲು ಮುಂದಾಗಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಜಂಬೂರು ಗ್ರಾಮದಲ್ಲಿ ಈ ಮನೆಗಳು ನಿರ್ಮಾಣವಾಗುತ್ತಿವೆ. ಸುಮಾರು 70 ಮನೆಗಳು ಸಂಪೂರ್ಣವಾಗಿದ್ದು, ಸಂತ್ರಸ್ತರಿಗೆ ಹಂಚಿಕೆಯಾಗಲು ಸಿದ್ಧವಾಗಿವೆ. ಒಂದೊಂದು ಮನೆಗೆ ತಲಾ 10 ಲಕ್ಷ ರೂಪಾಯಿ ವೆಚ್ಚಮಾಡಲಾಗಿದ್ದು, ಅತ್ಯಾಧುನಿಕವಾಗಿ ಕಟ್ಟಲಾಗಿದೆ ಎಂದು ಈ ಯೋಜನೆಯ ಪ್ರಾಜೆಕ್ಟ್ ಮ್ಯಾನೇಜರ್ ರಾಜು ಡಿ ಆಗುಂಬೆ ತಿಳಿಸಿದ್ದಾರೆ.
ಈ ಮನೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ಗಾಳಿಗಳಿಗೆ ಈ ಮನೆ ಜಗ್ಗೋದಿಲ್ಲ. ಈ ಮನೆಗಳ ಸಮೀಪವೇ ಸರ್ಕಾರ ಕೂಡ ಸುಮಾರು 540 ಮನೆಗಳನ್ನ ನಿರ್ಮಿಸಿದೆ. ಇನ್ಫೋಸಿಸ್ ಕೂಡ ಇದೇ ಮನೆಯ ಡಿಸೈನ್ ಅನ್ನೇ ಬಳಸಿದ್ದು, ಮನೆಗಳು ಆಕರ್ಷಕವಾಗಿವೆ. ಜಿಲ್ಲಾಡಳಿತ ಕೂಡ ಇನ್ಫೋಸಿಸ್ ಕಾರ್ಯವನ್ನು ಶ್ಲಾಘಿಸಿದೆ. ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಷನ್ನಂತಹ ಸಂಸ್ಥೆಗಳು ಮುಂದಾಗಿ ಜನರಿಗೆ ಮನೆ ಕಟ್ಟಿಸಿಕೊಡುತ್ತಿರುವುದು ಸರ್ಕಾರದ ಭಾರವನ್ನು ಸ್ವಲ್ಪ ಕಡಿಮೆಗೊಳಿಸಿದೆ. ಇಂತಹ ಸಂಸ್ಥೆಗಳಿಗೆ ಜಿಲ್ಲಾಡಳಿತ ಎಲ್ಲಾ ನೆರವು ನೀಡುತ್ತದೆ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ.
200 ಮನೆಗಳಲ್ಲಿ 70 ಮನೆಗಳು ಸಂಪೂರ್ಣವಾಗಿದ್ದು, ಉಳಿದ ಮನೆಗಳು ಬಹುತೇಕ ಮುಕ್ತಾಯದ ಹಂತದಲ್ಲಿವೆ. ಈ ಮಳೆಗಾಲದ ಅಂತ್ಯಕ್ಕೆ ಎಲ್ಲಾ ಮನೆಗಳನ್ನ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ಜಿಲ್ಲಾಡಳಿತ ಫಲಾನುಭವಿಗಳಿಗೆ ಈ ಮನೆಗಳನ್ನ ಹಂಚಲಿದೆ. ಒಟ್ಟಾರೆ, ಇನ್ಫೋಸಿಸ್ ನಂತಹ ದೈತ್ಯ ಐಟಿ ಸಂಸ್ಥೆ ಸಮಾಜ ಸೇವೆಯ ಮೂಲಕ ಸಮಾಜದ ಕಟ್ಟ ಕಡೆಯ ಜನರನ್ನು ತಲುಪುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಗ್ರಾಮೀಣ ಭಾಗದ ಜನರ ಮನೆಗೆ ವೈದ್ಯಕೀಯ ಸೇವೆ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸೋಂಕಿತರಿಗೆ ನೆರವು
ಕೊರೊನಾ ವಿರುದ್ಧದ ಹೋರಾಟಕ್ಕೆ ಪಾಂಡ್ಯ ಬ್ರದರ್ಸ್ ನೆರವು; 2000 ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಸಿದ ಬಿಸಿಸಿಐ