International Yoga Day 2023: ರಾಜ್ಯಾದ್ಯಂತ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮ: ಯೋಗದ ಕುರಿತು ನಾಯಕರ ಅಭಿಪ್ರಾಯ ಇಲ್ಲಿದೆ
ಇಂದು (ಜೂ.21) ರಾಜ್ಯಾದ್ಯಂತ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗಿದೆ. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಹಾಗೂ ಆರೋಗ್ಯ ಕುಟುಂಬ ಇಲಾಖೆವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ 9 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಸುದೈವ ಕುಟಂಬಂ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಬೆಂಗಳೂರು: ಇಂದು (ಜೂ.21) ರಾಜ್ಯಾದ್ಯಂತ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಆಚರಿಸಲಾಯಿತು. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಹಾಗೂ ಆರೋಗ್ಯ ಕುಟುಂಬ ಇಲಾಖೆವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ 9 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಸುದೈವ ಕುಟಂಬಂ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯೋಗ ವಿನ್ಯಾಸದ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾನು ನಿಮ್ಮೆಲರನ್ನ ಹಾರ್ದಿಕವಾಗಿ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ನಮ್ಮ ಸಂಸ್ಕ್ರತಿಯಲ್ಲಿ ಯೋಗ ಇದೆ. ಹಳೆಯ ಗ್ರಂಥಗಳಲ್ಲೂ ಉಲ್ಲೇಖ ಇದೆ. ಯೋಗವು ದೇಹ, ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತೆ ಮನವಿ ಮಾಡಿದರು. ಈ ನಿರ್ಣಯಕ್ಕೆ ನೂರಾರು ದೇಶಗಳು ಬೆಂಬಲಿಸಿ ಯೋಗ ದಿನ ಆಚರಿಸುತ್ತಿವೆ. ಯೋಗದ ಮೂಲಕ ಮನುಕುಲವನ್ನು ಬೆಸೆಯಬೇಕಾಗಿದೆ ಎಂದು ತಿಳಿಸಿದರು.
ಯೋಗ ಮಾಡುವುದರಿಂದ ಕಾಯಿಲೆಗಳನ್ನು ನಿಯಂತ್ರಿಸಬಹುದು
ಯೋಗ ನಮ್ಮ ದೇಶದ ಸಂಸ್ಕೃತಿ, ಪೂರ್ವಜರ ಕೊಡುಗೆ. ಇಂದು ವಿಶ್ವದೆಲ್ಲೆಡೆ ಯೋಗ ದಿನಾಚರಣೆ ಮಾಡಲಾಗುತ್ತಿದೆ. ನಮ್ಮ ಜೀವನ ಶೈಲಿ ಬದಲಾವಣೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಮನುಷ್ಯನಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಯೋಗ ಮಾಡುವುದರಿಂದ ಕಾಯಿಲೆಗಳನ್ನು ನಿಯಂತ್ರಿಸಬಹುದು. ಯೋಗ ನಮ್ಮೆಲ್ಲರ ಬದುಕಿನಲ್ಲಿ ಒಂದು ಅಂಗವಾಗಿ ಉಳಿಯಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶಾಲೆಗಳಲ್ಲಿ ಯೋಗವನ್ನು ಅಳವಡಿಸುವ ಅಗತ್ಯವಿದೆ
ಯೋಗಾ ನಿಮ್ಮ ಬದುಕಿನಲ್ಲಿ ಒಂದು ಅಂಗವಾಗಿ ಉಳಿಯಲಿ. ಶಾಲೆಗಳಲ್ಲಿ ಯೋಗವನ್ನು ಅಳವಡಿಸುವ ಅಗತ್ಯವಿದೆ. ಯೋಗಾ ಋಷಿ ಮುನಿಗಳು ದೇಶಕ್ಕೆ ಕೊಟ್ಟ ಕೊಡುಗೆ. ಎಲ್ಲ ರೋಗಕ್ಕೆ ಮದ್ದಿದೆ, ಮಾನಸಿಕ ರೋಗಕ್ಕೆ ಮದ್ದು ಇಲ್ಲ. ಒತ್ತಡದ ಬದುಕಿಗೆ ಯೊಗಾಭ್ಯಾಸ ಅತ್ಯಗತ್ಯ. ದಷ್ಚಟ ಮತ್ತು ರೋಗಕ್ಕೆ ಯೋಗವೇ ಮದ್ದು. ಶಾಲೆಗಳಲ್ಲಿ ಯೋಗ ಅಳವಡಿಸುವುದು ಅಗತ್ಯ. ಯೋಗಾಕ್ಕೆ ಒಂದು ಸಿಲೆಬಸ್ ಮಾಡಿ ಮಕ್ಕಳಿಗೆ ಅರಿವು ಮೂಡಿಸಬೇಕು. ವೇದಿಕೆ ಮೇಲೆ ಇದ್ದ ಸಚಿವರಿಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮನವಿ ಮಾಡಿದರು.
ವಿಶ್ವಸಂಸ್ಥೆಯ ಸೆಕ್ಯೂರಿಟಿ ಕೌನ್ಸಿಲ್ನಲ್ಲಿ ಭಾರತಕ್ಕೆ ಸ್ಥಾನ ಸಿಗಬೇಕು
ವಿಶ್ವ ಸಂಸ್ಥೆಯಲ್ಲಿ ಪ್ರಧಾನಿ ಮೋದಿ ಯೋಗಮಾಡುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ 188 ದೇಶಗಳ ಪ್ರಮುಖರ ಜೊತೆ ಯೋಗ ಮಾಡುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆ, ಗೌರವಪಡುವ ವಿಚಾರ. ಭಾರತ ಯಾವ ವಿಚಾರವನ್ನ ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಂಡನೆ ಮಾಡುತ್ತಿದೆ ಅದಕ್ಕೆ ಗೌರವ ಸಿಕ್ಕಿದೆ. ಬೇರೆಲ್ಲ ದೇಶಗಳು ಅದನ್ನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಮ್ಮ ಪ್ರಯತ್ನ ಆಗಬೇಕಿರುವುದು ವಿಶ್ವಸಂಸ್ಥೆಯ ಸೆಕ್ಯೂರಿಟಿ ಕೌನ್ಸಿಲ್ನಲ್ಲಿ ಭಾರತಕ್ಕೆ ಸ್ಥಾನ ಸಿಗಬೇಕು. ಸೆಕ್ಯೂರಿಟಿ ಕೌನ್ಸಿಲ್ ಸ್ಥಾನದ ಪ್ರಯತ್ನವನ್ನ ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಕಳೆದ 70 ವರ್ಷಗಳಿಂದ ಪ್ರಯತ್ನ ಮಾಡಿದರೂ ಸ್ಥಾನ ಸಿಕ್ಕಿಲ್ಲ. ನಮಗೆ ವಿಶ್ವಾಸವಿದೆ ದೇಶ ವಿಶ್ವದಲ್ಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸೆಕ್ಯೂರಿಟಿ ಕೌನ್ಸಿಲ್ ಸ್ಥಾನ ಭಾರತಕ್ಕೆ ಸಿಗುತ್ತೆ ಎಂಬ ವಿಶ್ವಾಸವಿದೆ. ಪ್ರಧಾನಿ ಪ್ರಪಂಚಾದ್ಯಂತ ಬೇರೆ ಬೇರೆ ದೇಶಗಳೊಂದಿಗೆ ಮನವೊಲಿಸಿ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಧರ್ಮ, ಭಾಷೆಯ ಅಂತರವನ್ನು ಬಿಟ್ಟು ದೇಶದಾದ್ಯಂತ ಯೋಗ ಆಚರಣೆ ಮಾಡಿದ್ದಾರೆ ಎಂದರು.
ಇಂದು ನಮ್ಮ ಯೋಗವನ್ನು ಇಡೀ ಜಗತ್ತು ಸ್ವೀಕಾರ ಮಾಡಿದೆ
ಒಂದು ಕಾಲದಲ್ಲಿ ಭಾರತ ಅಂದರೇ ಜಗತ್ತು ಅಪಹಾಸ್ಯ ಮಾಡುತ್ತಿತ್ತು. ಇಂದು ನಮ್ಮ ಯೋಗವನ್ನು ಇಡೀ ಜಗತ್ತು ಸ್ವೀಕಾರ ಮಾಡಿದೆ. ನಾನು ಪ್ರವಾಸದ ವೇಳೆ ಬ್ರೆಜಿಲ್ನ ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಬ್ರೆಜಿಲ್ ದೇಶದ ಜನ ಪ್ರತಿನಿತ್ಯ ಯೋಗಾಸನ ಮಾಡುತ್ತಾರೆ. ಯೋಗಾಭ್ಯಾಸದಿಂದ ಶ್ವಾಸಕೋಶದ ವ್ಯವಸ್ಥೆ ನಿಯಂತ್ರಣದಲ್ಲಿರುತ್ತೆ. ಯೋಗದಿಂದ ಅನೇಕ ರೋಗಗಳನ್ನು ನಿಯಂತ್ರಿಸಬಹುದು ಇದನ್ನು ಅನೇಕ ಸಂಶೋಧಕರು ಹೇಳಿದ್ದಾರೆ. ಯೋಗದಿಂದ ಆಚಾರ ವಿಚಾರಗಳು, ಮನಸ್ಸು ಶುದ್ಧವಾಗಿರುತ್ತೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನಾನು ಇವತ್ತು ಮೊದಲ ಬಾರಿಗೆ ಯೋಗ ಮಾಡಿದ್ದೇನೆ
ನಾನು ಇವತ್ತು ಮೊದಲ ಬಾರಿಗೆ ಯೋಗ ಮಾಡಿದ್ದೇನೆ. ಇನ್ಮುಂದೆ ಮುಂದುವರಿಸಬೇಕು ಅಂತ ಅನ್ನಿಸುತ್ತಿದೆ. ಸಾವಿರಾರು ವರ್ಷಗಳಿಂದ ಯೋಗಾ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ರಾಜಕಾರಣಿಗಳು, ಸರ್ಕಾರದಿಂದ ಯೋಗಕ್ಕೆ ಪಾಪ್ಯುಲಾರಿಟಿ ಬಂದಿಲ್ಲ. ಸಾವಿರಾರು ವರ್ಷಗಳ ಇತಿಹಾಸವನ್ನ ಯೋಗಾ ಹೊಂದಿದೆ ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಯೋಗವನ್ನ ವಿಶ್ವಕ್ಕೆ ಪರಿಚಯಿಸುವ ಸಲುವಾಗಿ ಪ್ರಧಾನಿ ಮೋದಿ ಪ್ರಯತ್ನಿಸಿದರು
ಭಾರತದ ಕೊಡುಗೆಯಾಗಿರುವ ಯೋಗವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಯತ್ನಿಸಿದರು. ಮೋದಿಯವರ ಪ್ರಯತ್ನದ ಫಲವಾಗಿ ಪ್ರತಿ ವರ್ಷ ಜೂನ್ 21 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಕಳೆದ ವರ್ಷ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಆ ಮೂಲಕ ಇಡೀ ವಿಶ್ವ ಮೈಸೂರಿನತ್ತ ನೋಡುವಂತೆ ಮಾಡಿದರು. ಇಂದು ಮೋದಿಯವರು ಅಮೇರಿಕಾದಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗುವ ಮೂಲಕ ಯೋಗದ ಮಹತ್ವವನ್ನು ಸಾರಲಿದ್ದಾರೆ ಎಂದು ಮೈಸೂರಿನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ವಿದ್ಯಾರ್ಥಿಗಳಿಗೆ ಯೋಗದಲ್ಲಿ ಉಜ್ವಲ ಭವಿಷ್ಯವಿದೆ
ಯೋಗ ಜೀವನದಲ್ಲಿ ತುಂಬಾ ಅಗತ್ಯ ಇದೆ. ಉತ್ತಮ ಆರೋಗ್ಯಕ್ಕೆ ಯೋಗಾಸನ ಅಗತ್ಯ ಇದೆ. ಯೋಗಾಭ್ಯಾಸ ಎಲ್ಲರೂ ಮಾಡಬೇಕು. ಯೋಗದಿಂದ ಮೆದುಳು ಕಾರ್ಯ ಚುರುಕಾಗುತ್ತದೆ. ಬೇರೆ ದೇಶಕ್ಕೆ ಸರಿಸಮಾನವಾಗಿ ನಿಲ್ಲುವ ಕಾಲ ಬಂದಿದೆ. ವಿಶ್ವದ ಜನರಿಗೆ ಯೋಗದ ಮೂಲಕ ದೇಶವು ಈಗ ಉತ್ತಮ ಆರೋಗ್ಯ ನೀಡಿದೆ. ವಿದ್ಯಾರ್ಥಿಗಳಿಗೆ ಯೋಗದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಶಿವಮೊಗ್ಗದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Wed, 21 June 23