AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸೀದಿ ಬಳಿ ಜೈ ಶ್ರೀರಾಂ ಘೋಷಣೆ ಹೇಗೆ ಅಪರಾಧ? ಕರ್ನಾಟಕ ಪೊಲೀಸರ ಅಭಿಪ್ರಾಯ ಕೋರಿದ ಸುಪ್ರೀಂ

ಮಸೀದಿ ಆವರಣದಲ್ಲಿ "ಜೈ ಶ್ರೀರಾಮ್" ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲ್ಲ ಎಂಬ ಕರ್ನಾಟಕ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ. ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಕರ್ನಾಟಕ ಪೊಲೀಸರ ಅಭಿಪ್ರಾಯ ಕೇಳಿದೆ. ಏನಿದು ಪ್ರಕರಣ? ಹಿನ್ನೆಲೆ ಸಹಿತ ಸಂಪೂರ್ಣ ವಿವರ ಇಲ್ಲಿದೆ.

ಮಸೀದಿ ಬಳಿ ಜೈ ಶ್ರೀರಾಂ ಘೋಷಣೆ ಹೇಗೆ ಅಪರಾಧ? ಕರ್ನಾಟಕ ಪೊಲೀಸರ ಅಭಿಪ್ರಾಯ ಕೋರಿದ ಸುಪ್ರೀಂ
ಸುಪ್ರೀಂ ಕೋರ್ಟ್
Ganapathi Sharma
|

Updated on: Dec 16, 2024 | 2:30 PM

Share

ನವದೆಹಲಿ, ಡಿಸೆಂಬರ್ 16: ಮಸೀದಿ ಆವರಣದಲ್ಲಿ ಜೈ ಶ್ರೀರಾಂ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ಸೋಮವಾರ ವಿಚಾರಣೆ ಕೈಗೆತ್ತಿಕೊಂಡಿದ್ದು, ಕರ್ನಾಟಕ ಪೊಲೀಸರ ಅಭಿಪ್ರಾಯ ಕೋರಿದೆ. ಮಸೀದಿ ಬಳಿ ಜೈ ಶ್ರೀರಾಂ ಘೋಷಣೆ ಹೇಗೆ ಅಪರಾಧ? ಈ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ಕರ್ನಾಟಕ ಪೊಲೀಸರಿಗೆ ಸೂಚಿಸಿದೆ.

ಆರೋಪಿಗಳು ನಿರ್ದಿಷ್ಟವಾದ ಒಂದು ಧಾರ್ಮಿಕ ಘೋಷಣೆಯನ್ನು ಕೂಗಿದ್ದಾರೆ ಎನ್ನಲಾಗಿದೆ. ಅದು ಹೇಗೆ ಅಪರಾಧ ಎಂದು ಪ್ರಶ್ನಿಸಿರುವ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು 2025ರ ಜನವರಿ ತಿಂಗಳಿನಲ್ಲಿ ನಡೆಸುವುದಾಗಿ ತಿಳಿಸಿದೆ.

ಏನಿದು ಮಸೀದಿಯಲ್ಲಿ ಜೈ ಶ್ರೀರಾಂ ಘೋಷಣೆ ಪ್ರಕರಣ?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಕಡಬ-ಮರ್ದಾಳ ರಸ್ತೆಯಲ್ಲಿರುವ ಮಸೀದಿ ಆವರಣಕ್ಕೆ ನುಗ್ಗಿದ್ದ ಕೆಲವು ಅಪರಿಚಿತ ವ್ಯಕ್ತಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗಿದ್ದರು. ಬ್ಯಾರಿ ಸಮುದಾಯಕ್ಕೆ ಸೇರಿದವರನ್ನು ಬದುಕಲ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಕಡಬ ಠಾಣೆಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಸೀದಿ ಆಡಳಿತ ಉಲ್ಲೇಖಿಸಿತ್ತು. 2023ರ ಸೆಪ್ಟೆಂಬರ್​​ನಲ್ಲಿ ಈ ಘಟನೆ ನಡೆದಿತ್ತು. ಕೆಲವು ಯುವಕರು ಬೈಕ್‌ಗಳಲ್ಲಿ ಮಸೀದಿ ಸುತ್ತಿದ್ದಲ್ಲದೆ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿರುವ ಸಿಸಿಟಿವಿ ದೃಶ್ಯವನ್ನೂ ಅವರು ಒದಗಿಸಿದ್ದರು.

ಮಸೀದಿ ಆಡಳಿತ ನೀಡಿದ್ದ ದೂರಿನಲ್ಲೇನಿತ್ತು?

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದಾರೆ. ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿರುವ ಈ ವ್ಯಕ್ತಿಗಳು ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ನಂತರ, ದಕ್ಷಿಣ ಕನ್ನಡದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನಿವಾಸಿ ಕೀರ್ತನ್ ಕುಮಾರ್ ಮತ್ತು ಎನ್ಎಂ ಸಚಿನ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 447, 295 ಎ 505 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳು

ಪ್ರಕರಣ ಸಂಬಂಧ ಪುತ್ತೂರಿನ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಐಪಿಸಿ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಮಸೀದಿಯು ಸಾರ್ವಜನಿಕ ಸ್ಥಳವಾಗಿರುವುದರಿಂದ ಅದರ ಆವರಣಕ್ಕೆ ಪ್ರವೇಶವನ್ನು ಕ್ರಿಮಿನಲ್ ಅತಿಕ್ರಮಣ ಎಂದು ಅರ್ಥೈಸಲಾಗುವುದಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಮತ್ತೊಂದೆಡೆ, ಮಸೀದಿಯ ಆವರಣದಲ್ಲಿ ‘ಜೈ ಶ್ರೀರಾಮ್’ ಎಂದು ಕೂಗುವಂತಿಲ್ಲ ಮತ್ತು ಬೆದರಿಕೆ ಹಾಕುವಂತಿಲ್ಲ ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

ಹೈಕೋರ್ಟ್​ ಏನು ಹೇಳಿತ್ತು?

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಯಾರಾದರೂ ‘ಜೈ ಶ್ರೀರಾಮ್’ ಎಂದು ಕೂಗಿದರೆ ಅದು ಯಾವುದೇ ವರ್ಗದ ಧಾರ್ಮಿಕ ಭಾವನೆಯನ್ನು ಹೇಗೆ ಕೆರಳಿಸುತ್ತದೆ ಎಂಬುದು ಅರ್ಥವಾಗುವುದಿಲ್ಲ. ಘೋಷಣೆ ಕೂಗಿದ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ದೂರುದಾರರೇ ಹೇಳಿರುವಾಗ, ಘೋಷಣೆಯು ಘರ್ಷಣೆಗೆ ಕಾರಣವಾಗಬಹುದು ಎನ್ನಲಾಗದು ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಪುತ್ತೂರಿನ ಎರಡನೇ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಿತ್ತು. ವಿಚಾರಣೆಗೆ ಅನುಮತಿ ನೀಡಿದರೆ ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದೂ ಅಭಿಪ್ರಾಯಪಟ್ಟಿತ್ತು.

ಇದನ್ನೂ ಓದಿ: ಮಸೀದಿ ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದರೆ ಧಾರ್ಮಿಕ ಭಾವನೆಗೆ ಧಕ್ಕೆಯಾಗಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್, ಕರ್ನಾಟಕ ಸರ್ಕಾರ ಹಾಗೂ ಪೊಲೀಸರ ಅಭಿಪ್ರಾಯ ಕೋರಿದೆ. ಮುಂದಿನ ವಿಚಾರಣೆ ಜನವರಿಯಲ್ಲಿ ನಡೆಯಲಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ