
ಬೆಂಗಳೂರು, ಮಾರ್ಚ್ 4: ಜನರ ದೈನಂದಿನ ಆಹಾರ ಬಳಕೆಯ ವಸ್ತುವಾಗಿರುವ ಬೆಲ್ಲ ಕೂಡ ಇದೀಗ ಅಪಾಯಕಾರಿ ರಾಸಾಯನಿಕ ಹೊಂದಿರುವುದು ಆಹಾರ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬೆಲ್ಲದಲ್ಲಿ ಅಪಾಯಕಾರಿ ರಾಸಾಯನಿಕ ಸಲ್ಫರ್ ಡೈಆಕ್ಸೈಡ್ ಹಾಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಗೊತ್ತಾಗಿದೆ. ಬೆಲ್ಲ ಗೋಲ್ಡನ್ ಕಲರ್ನಲ್ಲಿ ಕಾಣಿಸುವ ಮೂಲಕ ಜನರನ್ನು ಸೆಳೆಯುವಂತೆ ಮಾಡಲು ಕೃತಕ ಬಣ್ಣ ಬೆರೆಸಲಾಗುತ್ತಿದೆ ಎಂಬುದು ತಿಳಿದುಬಂದಿದೆ.
ಗೋಲ್ಡನ್ ಕಲರ್ನಲ್ಲಿ ಕಾಣಿಸುವ ಬೆಲ್ಲದತ್ತ ಜನ ಆಕರ್ಷಿತರಾಗುತ್ತಾರೆ. ಆದರೆ ರಾಸಾಯನಿಕ ಬೆಲ್ಲ ಆರೋಗ್ಯದ ಮೇಲೆ ಅಡ್ಡ ಪರಿಣಾಮಕ್ಕೆ ಕಾರಣವಾಗಿದೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಕರ್ನಾಟಕದ ವಿವಿಧ ಕಡೆಗಳಲ್ಲಿ ಆಹಾರ ಇಲಾಖೆ ಬೆಲ್ಲದ ಮಾದರಿಗಳನ್ನು ಸಂಗ್ರಹ ಮಾಡಿತ್ತು. ಆ ಸ್ಯಾಂಪಲ್ಸ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ವರದಿ ಬಯಾಲಾಗಿದೆ. ಸ್ಯಾಂಪಲ್ಗಳಲ್ಲಿ ಕಲರ್ ಏಜೆಂಟ್ ಹಾಗೂ ಸಲ್ಫರ್ ಡೈಆಕ್ಸೈಡ್ ದೃಢಪಟ್ಟಿವೆ.
ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಇತ್ತೀಚಿಗಿನ ಪ್ರಯೋಗಾಲಯ ಪರೀಕ್ಷೆಗಳಲ್ಲಿ ದಡಪಟ್ಟಿತ್ತು. ಇದರ ಬೆನ್ನಲ್ಲೇ ಮಹತ್ವದ ಕ್ರಮ ಕೈಗೊಂಡಿದ್ದ ಕರ್ನಾಟಕ ಆಹಾರ ಇಲಾಖೆ, ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದಕ್ಕೆ ನಿಷೇಧ ಹೇರಿತ್ತು. ಆನಂತರ, ರಾಜ್ಯದ ವಿವಿಧ ಕಡೆಗಳಲ್ಲಿ ಮಾರಾಟವಾಗುವ ಕಲ್ಲಂಗಡಿ ಹಣ್ಣುಗಳಿಗೆ ರುಚಿ ಮತ್ತು ಬಣ್ಣ ಬರುವುದಕ್ಕಾಗಿ ರಾಸಾಯನಿಕಯುಕ್ತ ಇಂಜೆಕ್ಷನ್ ಚುಚುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು. ಇದರ ವಿರುದ್ಧವೂ ಆಹಾರ ಇಲಾಖೆ ಅಧಿಕಾರಿಗಳು ದಾಳಿಗಳನ್ನು ನಡೆಸುವ ಮೂಲಕ ಕ್ರಮ ಕೈಗೊಂಡಿದ್ದರು.
ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಟ್ಯಾಟೂವಿನಲ್ಲಿ ಕೂಡ ಕ್ಯಾನ್ಸರ್‌ಕಾರಕ ಅಂಶ ಇರುವುದು ಪತ್ತೆಯಾಗಿತ್ತು. ಕುಡಿಯುವ ನೀರಿನ ಬಾಟಲ್ ಸುರಕ್ಷತೆ ಬಗ್ಗೆಯೂ ಆಹಾರ ಇಲಾಖೆಗೆ ಅನುಮಾನ ವ್ಯಕ್ತವಾಗಿದ್ದು, ರಾಜ್ಯದ ವಿವಿಧ ಕಡೆಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಕ್ಕೆ ಕಳುಹಿಸಲಾಗಿದೆ. ಈ ವಾರವೇ ಫಲಿತಾಂಶ ದೊರೆಯುವ ಸಾಧ್ಯತೆ ಇತ್ತು ವರದಿ ಪ್ರಕಟವಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಇಡ್ಲಿ, ಹೋಳಿಗೆ ಬೆನ್ನಲ್ಲೇ ಟೊಮೇಟೊ ಸಾಸ್ನಿಂದ ಕೂಡ ಆರೋಗ್ಯಕ್ಕೆ ಕುತ್ತು
ಒಟ್ಟಿನಲ್ಲಿ ರಾಜ್ಯದಲ್ಲಿ ಜನರು ಬಳಸುವ ದೈನಂದಿನ ಬಹುತೇಕ ದಿನಸಿ, ಆಹಾರ ವಸ್ತುಗಳು ಕಲುಷಿತ, ಕಲಬೆರಕೆಯುಕ್ತ ಮತ್ತು ರಾಸಾಯನಿಕಯುಕ್ತವಾಗಿದ್ದು ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿರುವುದು ಆಘಾತಕಾರಿಯಾಗಿದೆ.
Published On - 10:35 am, Tue, 4 March 25