ಇಡ್ಲಿ, ಹೋಳಿಗೆ ಬೆನ್ನಲ್ಲೇ ಟೊಮೇಟೊ ಸಾಸ್ನಿಂದ ಕೂಡ ಆರೋಗ್ಯಕ್ಕೆ ಕುತ್ತು
ಆಹಾರ ಮತ್ತು ಆರೋಗ್ಯ ಇಲಾಖೆಯ ವರದಿಯ ಪ್ರಕಾರ, ಹಲವು ಟೊಮೇಟೊ ಸಾಸ್ನಲ್ಲಿ ಅಪಾಯಕಾರಿ ರಾಸಾಯನಿಕಗಳು ಮತ್ತು ಕಲಬೆರಕೆ ಪತ್ತೆಯಾಗಿದೆ. ಸೋಡಿಯಂ ಬೆಂಜೊಯೆಟ್ ಮತ್ತು ಕೃತಕ ಬಣ್ಣಗಳ ಬಳಕೆಯಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಮಕ್ಕಳು ಮತ್ತು ವಯಸ್ಕರಲ್ಲಿ ರಕ್ತದೊತ್ತಡ, ನಿಶಕ್ತಿ ಮತ್ತು ಮನಸ್ಥಿತಿಯ ಬದಲಾವಣೆಗಳಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಮುಖ್ಯ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬೆಂಗಳೂರು, ಮಾರ್ಚ್ 04: ಬಾಯಿ ಚಪ್ಪರಿಸಿ ಸವಿಯುವ ಟೊಮೇಟೊ ಸಾಸ್ (Tomato sauce) ಕೂಡ ಆರೋಗ್ಯಕ್ಕೆ ಮಾರಕವಾಗಿದೆ. ಹೌದು, ಇಡ್ಲಿ, ಬಟಾಣಿ ಮತ್ತು ಹೋಳಿಗೆ ಬೆನ್ನಲ್ಲೇ ಟೊಮೇಟೊ ಸಾಸ್ ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶ ಆರೋಗ್ಯ ಇಲಾಖೆಯ (Health Department) ವರದಿಯಿಂದ ಧೃಡವಾಗಿದೆ.
ಆಹಾರ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಫೆಬ್ರವರಿಯಲ್ಲಿ ಟೊಮೇಟೊ ಸಾಸ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ತಪಾಸಣೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ, ಟೊಮೇಟೊ ಸಾಸ್ ಕಲಬೆರಕೆಯಿಂದ ಕೂಡಿದ್ದು, ಆರೋಗ್ಯಕ್ಕೆ ಮಾರಕವಾಗಿದೆ ಅಂಶ ಬಹಿರಂಗವಾಗಿದೆ. ಈ ಮೂಲಕ ಪುಟಾಣಿಗಳಿಂದ ದೊಡ್ಡವರವರೆಗೆ ಬಾಯಿ ಚಪ್ಪರಿಸಿ ಸವಿಯುವ ಟೊಮೇಟೊ ಸಾಸ್ ಆರೋಗ್ಯಕ್ಕೆ ಡೇಂಜರ್ ಆಗಿದೆ.
ಟೊಮೇಟೊ ಸಾಸ್ನಲ್ಲಿ ಅಪಾಯಕಾರಿ ರಾಸಾಯನಿಕ ಬಳಿಸಿರುವುದನ್ನು ಕಂಡು ಸ್ವತಃ ಆಹಾರ ಇಲಾಖೆ ತಜ್ಞರೇ ಕಳವಳಗೊಂಡಿದ್ದಾರೆ. ಟೊಮೇಟೊ ಸಾಸ್ನಲ್ಲಿ ಸೋಡಿಯಂ ಬೆಂಜೊಯೆಟ್ ಬಳಸಲಾಗುತ್ತಿದೆ. ಸೋಡಿಯಂ ಬೆಂಜೊಯೆಟ್ನಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ. ಅಲ್ಲದೇ, ಟೊಮೇಟೊ ಸಾಸ್ ಬ್ರೈಟ್ ಹಾಗೂ ಕೆಂಪಾಗಿ ಕಾಣಿಸಲು ಕೃತಕ ಬಣ್ಣ ಬಳಸಲಾಗುತ್ತಿದೆ ಎಂಬ ಅಂಶ ವರದಿಯಿಂದ ತಿಳಿದುಬಂದಿದೆ.
ರಾಸಾಯನಿಕ ಬಳಕೆಯಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀಳುತ್ತದೆ. ಹೀಗಾಗಿ ಟೊಮೇಟೊ ಸಾಸ್ ಆರೋಗ್ಯಕ್ಕೆ ಮಾರಕವಾಗಿದೆ. ಕಲಬೆರಕೆ ಸಾಸ್ನಿಂದ ಮಕ್ಕಳು, ದೊಡ್ಡವರಲ್ಲಿ ಬಿಪಿ ಸಮಸ್ಯೆ ಕಾಡಬಹುದು. ಅಲ್ಲದೇ ನಿಶಕ್ತಿ ಉಂಟಾಗುತ್ತದೆ. ಮಕ್ಕಳಲ್ಲಿ ತಾಳ್ಮೆ ಶಾಂತಿ, ಮನಸ್ಥಿತಿ ಕಡಿಮೆಯಾಗುತ್ತದೆ. ಹೀಗಾಗಿ ಟೊಮೇಟೊ ಸಾಸ್ ಸಾಕಷ್ಟು ಅಪಾಯ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ಆಹಾರ ತಜ್ಞೆ ಕೀರ್ತಿ ಹಿರಿಸಾವೆ ಹೇಳಿದರು.
ಇದನ್ನೂ ಓದಿ: ಕಳಪೆ ಔಷಧ ತಯಾರಕ ಕಂಪನಿಗಳಿಗೆ ಶಾಕ್: ಕಡಿಮೆ ಗುಣಮಟ್ಟದ ಔಷಧಗಳಿಗೆ ಕೋಕ್, ಬರಲಿದೆ ಹೊಸ ನಿಯಮ
3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹ
ಜವವರಿಯಿಂದ ಒಟ್ಟು 3608 ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 26 ಮಾದರಿಗಳು ಅಸುರಕ್ಷಿತವಾಗಿವೆ ಎಂಬುದು ತಿಳಿದುಬಂದಿದೆ. 28 ಕಳಪೆಯಾಗಿವೆ. ಇದೇ ಜನವರಿಯಲ್ಲಿ 681 ರಷ್ಟು ಇಡ್ಲಿ ಸ್ಯಾಂಪಲ್ಸ್ ಪಡೆಯಲಾಗಿದೆ. ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಘಟನೆ ಸಂಬಂಧ 52 ಆಹಾರ ಉತ್ಪಾದಕರಿಗೆ ನೋಟಿಸ್ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಈಗಾಗಲೇ ನಾವು ಎಚ್ಚರಿಕೆ ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದರು.