ಬೆಂಗಳೂರು, ಮಾರ್ಚ್ 25: ಕೆಆರ್ಪಿಪಿ ಪಕ್ಷ ಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy)ಅವರು ಇಂದು (ಮಾರ್ಚ್ 25) ರಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಮ್ಮುಖದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ (BJP) ಕಚೇರಿ ಬಿಜೆಪಿ ಸೇರ್ಪಡೆಯಾದರು. ಈ ಮೂಲಕ ಜನಾರ್ದನ ರೆಡ್ಡಿ ತವರಿಗೆ ಮರಳಿದ್ದಾರೆ. ಹಾಗೆ ಬಿಜೆಪಿಯಲ್ಲಿ ತಮ್ಮ ಕೆಆರ್ಪಿಪಿ ಪಕ್ಷವನ್ನೂ ವಿಲೀನಗೊಳಿಸಿದ್ದಾರೆ. ಬಿಜೆಪಿ ಸೇರ್ಪಡೆ ಬಳಿಕ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನನಾಡಿದ ಜನಾರ್ದನ ರೆಡ್ಡಿ, ನನ್ನ ರಕ್ತದ ಕಣ ಕಣದಲ್ಲಿ ಬಿಜೆಪಿ ಇದೆ ಎಂದರು.
ಬಿಜೆಪಿ ಪಕ್ಷದ ಜೊತೆ ಕೆಆರ್ಪಿಪಿ ಪಕ್ಷವನ್ನು ವಿಲೀನ ಮಾಡುತ್ತಿದ್ದೇನೆ. ಬಿಎಸ್ ಯಡಿಯೂರಪ್ಪ ಆಶೀರ್ವಾದ, ಬಿವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದ್ದೇನೆ. ಕೇಂದ್ರ ಸಚಿವ ಅಮಿತ್ ಶಾ ಅವರು ನನಗೆ ಪಕ್ಷಕ್ಕೆ ಬನ್ನಿ ಅಂದರು. ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಬಿಎಸ್ ಯಡಿಯೂರಪ್ಪ ಕಾರಣ. ಅವರು ಮುಖ್ಯಮಂತ್ರಿಯಾಗಿದ್ದಾಗ, ನನಗೆ ಸಚಿವ ಸ್ಥಾನ ಕೊಟ್ಟಿದ್ದರು. ಈಗ ಅವರ ಸುಪುತ್ರ ಇದ್ದಾರೆ. ತಂದೆ ಮಗನ ಜೊತೆ ಈಗ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಯಾವ ಷರತ್ತು ಇಲ್ಲದೆ ಕಾರ್ಯಕರ್ತನಾಗಿ ಬಿಜೆಪಿಗೆ ಸೇರಿದ್ದೇನೆ. ಯಾವದೆ ಹುದ್ದೆಯ ಆಕಾಂಕ್ಷೆ ನನಗೆ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಜನಾರ್ದನ ರೆಡ್ಡಿಯನ್ನು ದಿಲ್ಲಿಗೆ ಕರೆಯಿಸಿಕೊಂಡು ಮಾತನಾಡಿದ ಶಾ, ಭೇಟಿ ಹಿಂದಿನ ರಹಸ್ಯವೇನು?
ಮೂರನೇ ಬಾರಿ ನರೇಂದ್ರ ಮೋದಿಯವರನ್ನ ಪ್ರಧಾನಿ ಮಾಡಲು ಕೆಲಸ ಮಾಡುತ್ತೇನೆ. ನನ್ನ ಆತ್ಮೀಯ ಗೆಳೆಯ ಶ್ರೀರಾಮುಲು ಸೇರಿ ಎಲ್ಲರಿಗೂ ಧನ್ಯವಾದ. ಭಾತರವನ್ನು ವಿಶ್ವಗುರು ಮಾಡಿರುವ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿದರು.
ಜನಾರ್ದನರೆಡ್ಡಿ ಬಿಜೆಪಿಗೆ ವಾಪಸಾಗಿದ್ದರಿಂದ ಆನೆ ಬಲ ಬಂದಂತಾಗಿದೆ. ಜನಾರ್ದನರೆಡ್ಡಿಯನ್ನು ಮುಂದಿನ ದಿನದಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತೇವೆ. ಜನಾರ್ದನರೆಡ್ಡಿ ಬಿಜೆಪಿಗೆ ವಾಪಸಾಗಿದ್ದರಿಂದ ಖುಷಿಯಾಗಿದೆ. ಅವರನ್ನ ಮುಂದಿನ ದಿನಗಳಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಜನಾರ್ದನ ರೆಡ್ಡಿ ಬಿಜೆಪಿಗೆ ಬಂದಿದ್ದಕ್ಕೆ ನಮಗೆ ಸಂತೋಷವಾಗಿದೆ. ಪ್ರಧಾನಿ ಮೋದಿ ನಾಯಕತ್ವ ಒಪ್ಪಿಕೊಂಡು ಬಿಜೆಪಿಗೆ ಬಂದಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲಬೇಕೆಂದು ರೆಡ್ಡಿ ಪಕ್ಷಕ್ಕೆ ಸೇರಿದ್ದಾರೆ. ದೇಶದ ಭವಿಷ್ಯ ರೂಪಿಸುವ ಚುನಾವಣೆ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಜನಾರ್ದನ್ ರೆಡ್ಡಿ ಅವರು ತವರು ಪಕ್ಷಕ್ಕೆ ಮರಳಿದ್ದಾರೆ. ಒಂದಾನೊಂದು ಕಾಲದಲ್ಲಿ ಯಾವುದೇ ವಿಷಯಕ್ಕೆ ಬೇರೆಯಾಗಿದ್ವಿ. ಈಗ ಮತ್ತೆ ಬಿಜೆಪಿ ಮರಳಿದ್ದಾರೆ. ಅವರು ಬಂದಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಸಾಕಷ್ಟು ಶಕ್ತಿ ಬಂದಂತಾಗಿದೆ. ಬಳ್ಳಾರಿ, ಕೊಪ್ಪಳ ಸೇರಿ ನಮ್ಮ ಭಾಗದಲ್ಲಿ ಅತೀ ಹೆಚ್ಚು ಮತಗಳು ಬರುತ್ತವೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಬಿಜೆಪಿ ಹ್ಯಾಟ್ರಿಕ್ ಗೆಲುವು ಕಾಣಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ