ಇಂದು ಕಲಬುರಗಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಕುತೂಹಲ ಮೂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡೆ

ತೀವ್ರ ಕುತೂಹಲ ಮೂಡಿಸಿರುವ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಜೆಡಿಎಸ್ ನಾಲ್ವರು ಪಾಲಿಕೆ ಸದಸ್ಯರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಇಂದು ಕಲಬುರಗಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ: ಕುತೂಹಲ ಮೂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡೆ
ಮಲ್ಲಿಕಾರ್ಜುನ ಖರ್ಗೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Mar 23, 2023 | 8:23 AM

ಕಲಬುರಗಿ: ಇಂದು(ಮಾರ್ಚ್23) ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ (Municipal Corporation Mayor’s Election) ನಡೆಯಲಿದೆ. ಒಂದುವರೆ ವರ್ಷ ಬಳಿಕ ನಡೆಯುತ್ತಿರುವ ಪಾಲಿಕೆ ಮೇಯರ್ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ತವರಲ್ಲಿ ಮೊದಲ ಬಾರಿಗೆ ಸ್ವಂತ ಬಲದಿಂದ ಅಧಿಕಾರ ಹಿಡಿಯಲು ಬಿಜೆಪಿ ಕಸರತ್ತು ನಡೆಸಿದೆ. ಇಂದು ಬೆಳಗ್ಗೆ 10ರಿಂದ ಬೆಳಗ್ಗೆ 10.30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದ್ದು, ಮಧ್ಯಾಹ್ನ 12ರ ಬಳಿಕ ಮೇಯರ್​, ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಂತರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಪಾಲಿಕೆ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದ್ದಾರೆ.

ನಾಲ್ವರು ಜೆಡಿಎಸ್ ಪಾಲಿಕೆ ಸದಸ್ಯರ ಮೇಲೆ ಎಲ್ಲರ ಕಣ್ಣು

ಹೌದು..ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಹುಮತಕ್ಕೆ ಸಂಖ್ಯೆ ಬಲ ಕಡಿಮೆ ಇರುವುದಿರಂದ ನಾಲ್ವರು ಜೆಡಿಎಸ್​ ಸದಸ್ಯರ ನಡೆ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈಗಾಗಲೇ ಕಾಂಗ್ರೆಸ್ ಗೆ ಬೆಂಬಲಿಸುತ್ತೇವೆ ಎಂದು ಜೆಡಿಎಸ್ ಪಾಲಿಕೆ ಸದಸ್ಯರು ಹೇಳಿದ್ದಾರೆ. ನಾಲ್ವರ ಪೈಕಿ ಒಬ್ಬರನ್ನಾದರೂ ಮತದಾನಕ್ಕೆ ಬರದಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ. ಒಬ್ಬರು ಮತದಾನದಿಂದ ದೂರ ಉಳಿದರೆ ಬಿಜೆಪಿ ಮೇಯರ್ ಚುಕ್ಕಾಣಿ ಹಿಡಿಯಲಿದೆ. ಹೀಗಾಗಿ ನಾಲ್ವರು ಜೆಡಿಎಸ್ ಪಾಲಿಕೆ ಸದಸ್ಯರ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಮತ ಚಲಾಯಿಸಲು ಬರ್ತಾರಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ?

ಜಿದ್ದಾಜಿದ್ದಿಯಿಂದ ಕೂಡಿರುವ ಪಾಲಿಕೆ ಮೇಯರ್ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಲು ಬರುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರು. ಹೀಗಾಗಿ ಕಲಬುರಗಿ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅವರು ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಇರುವುದರಿಂದ ಮತದಾನಕ್ಕೆ ಬರುತ್ತಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನವೇ ಶಾಕ್ ನೀಡಲು ಬಿಜೆಪಿ ಮುಂದಾಗಿದೆ. 2021ರ ಸೆಪ್ಟೆಂಬರ್​​ ತಿಂಗಳಲ್ಲಿ ಕಲಬುರಗಿ ಪಾಲಿಕೆ ಚುನಾವಣೆ ನಡೆದಿತ್ತು. BJP 23, ಕಾಂಗ್ರೆಸ್ 27, JDS 4, ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಅಧಿಕಾರಕ್ಕೆ ಬರಲು MLCಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅಧಿಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರಕ್ಕೇರಲು ಕಾಂಗ್ರೆಸ್ ಕೂಡ ತಂತ್ರ ರೂಪಿಸುತ್ತಿದೆ. ಈಗಾಗಲೇ ಕೈ ಮುಖಂಡರು ಜೆಡಿಎಸ್ ನಾಯಕರ ಸಂಪರ್ಕದಲ್ಲಿದ್ದು, ಪಾಲಿಕೆಯ ಗದ್ದುಗೆ ಹಿಡಿಯಲು ಬಿಜೆಪಿಗೆ ಬಿಡದಂತೆ ಕೈ ತಂತ್ರ ಹೆಣಿಯುತ್ತಿದೆ.

ಕಲಬುರಗಿ ಮಹಾನಗರ ಪಾಲೆಕೆಯಲ್ಲಿ ಯಾವುದೇ ಪಕ್ಷ ಕ್ಕೆ ಸ್ಪಷ್ಟ ಬಹುಮತ ಇರಲಿಲ್ಲಾ. ಆದ್ರೆ ಅಧಿಕಾರ ಪಡೆಯಲು ಬಿಜೆಪಿ ಜಿಲ್ಲೆಗೆ ಸಂಬಂಧಿಸಿದೇ ಇದ್ದ ವಿಧಾನ ಪರಿಷತ್ ಸದಸ್ಯರನ್ನು ಪಾಲಿಕೆಯ ಮೇಯರ್ ಚುನಾವಣೆಯ ಮತದಾರರ ಪಟ್ಟಿಗೆ ಸೇರಿಸಿದ್ದರು. ಲಕ್ಷ್ಮಣ್ ಸವದಿ, ಬಾರತಿ ಶೆಟ್ಟಿ,ಲೆಹರಸಿಂಗ್ ಸೇರಿದಂತೆ ಅನೇಕ ಹೆಸರನ್ನು ಸೇರಿಸಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿತ್ತು. ಹೈಕೋರ್ಟ್ ಪರಿಷತ್ ಸದಸ್ಯರಿಗೆ ಕೂಡಾ ಮತದಾನಕ್ಕೆ ಅವಕಾಶ ನೀಡಿತ್ತು. ಸದ್ಯ ಪಾಲಿಕೆ ಸದಸ್ಯರು, ಶಾಸಕರು, ಸಂಸದ, ಇಬ್ಬರು ರಾಜ್ಯಸಭೆ ಸದಸ್ಯರು, ಪರಿಷತ್ ಸದಸ್ಯರು ಸೇರಿ ಒಟ್ಟು ಮತದಾರರ ಸಂಖ್ಯೆ 68 ಆಗಿದ್ದು, ಅಧಿಕಾರಕ್ಕೆ ಬರಲು ಮ್ಯಾಜಿಕ್ ನಂಬರ್ 35 ಬೇಕಿದೆ.