ಪಾಠ ಕೇಳುವಾಗಲೇ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ

ಕಲಬುರಗಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದಾಗಲೇ ಕೊಠಡಿಯ ಮೇಲ್ಛಾವಣಿ ಪ್ಲಾಸ್ಟರ್ ಕುಸಿದು ಐವರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸಂಭವನೀಯ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಶಾಸಕ ಅಲ್ಲಮಪ್ರಭು ಪಾಟೀಲ್‌ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ.

ಪಾಠ ಕೇಳುವಾಗಲೇ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ
ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್
Image Credit source: Tv9 Kannada
Edited By:

Updated on: Jun 12, 2026 | 5:35 PM

ಕಲಬುರಗಿ, ಜೂನ್​​ 12: ಪಾಠ ಕೇಳುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿರುವ ಆಘಾತಕಾರಿ ಘಟನೆ ಕಲಬುರಗಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಘಟನೆ ವೇಳೆ 80ಕ್ಕೂ ಅಧಿಕ ಯುವತಿಯರು ಕೊಠಡಿಯಲ್ಲಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್​​ ಸಂಭವನೀಯ ಭಾರಿ ಅನಾಹುತವೊಂದು ತಪ್ಪಿದೆ. ಐವರು ವಿದ್ಯಾರ್ಥಿಗಳಿಗೆ ಈ ವೇಳೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.

ಈ ಕಾಲೇಜಿನಲ್ಲಿ ಸುಮಾರು 2 ಸಾವಿರ ಜನ ವಿದ್ಯಾರ್ಥಿನಿಯರಿದ್ದು, ಬಹುತೇಕ ಗ್ರಾಮೀಣ ಭಾಗದ ಹೆಣ್ಣು ಮಕ್ಕಳೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೀಗಿದ್ದರೂ ಕಾಲೇಜಿನ ಕಟ್ಟಡವೇ ವಿದ್ಯಾರ್ಥಿನಿಗಳ ಪಾಲಿಗೆ ಕಂಟಕವಾಗಿ ಮಾರ್ಪಟ್ಟಿದೆ. ಇಂದು ಬೆಳಗ್ಗೆ ಎಂದಿನಂತೆ ಪಿಯುಸಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕ್ಲಾಸ್ ರೂಮ್​​ಗೆ ಬಂದಿದ್ದರು. ಕೊಠಡಿಗೆ ಬಂದ ಪ್ರಾಧ್ಯಾಪಕರೂ ಪಾಠ ಶುರುಮಾಡಿದ್ದರು. ಈ ವೇಳೆ ಏಕಾ ಏಕಿ ಮೇಲ್ಛಾವಣಿಯ ಪ್ಲಾಸ್ಟರ್​​ ಕುಸಿದಿದ್ದು, ಘಟನೆಯಲ್ಲಿ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಹಾಗೂ ದಿವ್ಯಾ ಎಂಬ ಐದು ಜನ ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕೂಡಲೇ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಟ್ರಾಮಾ ಕೇರ್‌ ಸೆಂಟರ್​​ಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಲಂಚ ಪಡೆಯುತ್ತಿದ್ದಾಗ ರೆಡ್​ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಎಎಸ್​ಐ, ಕಾನ್​ಸ್ಟೇಬಲ್

8 ವರ್ಷಗಳ ಹಿಂದಷ್ಟೇ ನಿರ್ಮಿಸಿರುವ ಕಟ್ಟಡ

ಇನ್ನು ಈ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ನಿರ್ಮಾಣ ಮಾಡಿ ಇನ್ನೂ 8 ವರ್ಷಗಳೂ ಕಳೆದಿಲ್ಲ. ಹೀಗಿದ್ದರೂ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಈ ಹಿಂದೆಯೂ ಇದೇ ರೀತಿ ಪ್ಲಾಸ್ಟರ್​​ ಕುಸಿದಿತ್ತು. ಆದರೆ ಆ ಸಮಯದಲ್ಲಿ ಕೊಠಡಿಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿತ್ತು. ಈಗ ಅದೇ ರೂಂನ ಪಕ್ಕದ ಕೊಠಡಿಯಲ್ಲಿ ಘಟನೆ ನಡೆದಿದೆ. ಬಹುತೇಕ ಕ್ಲಾಸ್​​ ರೂಂಗಳ ಸ್ಥಿತಿ ಹೀಗೆ ಇರುವ ಕಾರಣ ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದೇ ಪಾಠ ಕೇಳಬೇಕಾದ ಸ್ಥಿತಿ ಇಲ್ಲಿನದು. ಹೀಗಾಗಿ ಸಂಬಂಧಪಟ್ಟವರು ಈ ಸಂಬಂಧ ತುರ್ತಾಗಿ ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ತನಿಖೆಗೆ ಶಾಸಕರ ಆಗ್ರಹ

ಘಟನೆ ಬೆನ್ನಲ್ಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿರುವ ಶಾಸಕ ಅಲ್ಲಮಪ್ರಭು ಪಾಟೀಲ್‌, ಕಾಲೇಜು ಕಟ್ಟಡದ ಕಾಮಗಾರಿ ಸಂಬಂಧ ತನಿಖೆಗೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ದತ್ತಾತ್ರೇಯ ಪಾಟೀಲ, ಕಲಬುರಗಿ

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us