ಆಳಂದ: ಪಾದರಕ್ಷೆ ಕಟ್ಟುವ ಹರಕೆಯಿಂದಾಗಿ ಗೋಳಾ ಬಿ ಲಕ್ಕಮ್ಮ ದೇವಿ ಜಾತ್ರೆ ಪ್ರಸಿದ್ದಿ ಪಡೆದಿದೆ!

TV9kannada Web Team

TV9kannada Web Team | Edited By: sadhu srinath

Updated on: Nov 08, 2022 | 5:54 PM

ಪಾದರಕ್ಷೆಗಳನ್ನು ಕಟ್ಟಿ ಹರಕೆ ತಿರಿಸೋ ವಿಶಿಷ್ಟ ಸಂಪ್ರದಾಯ ಕಲಬುರಗಿ ಜಿಲ್ಲೆಯಲ್ಲಿದೆ. ಇದೇ ದೇವಸ್ಥಾನದಲ್ಲಿ ದೇವರ ಬೆನ್ನಿಗೆ ಜನರು ನಮಸ್ಕರಿಸುತ್ತಾರೆ. ಎಲ್ಲ ಕಡೆ ದೇವಸ್ಥಾನದ ಮುಂಭಾಗದಲ್ಲಿ ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಅಂತ ಫಲಕ ಹಾಕಿರುತ್ತಾರೆ. ಆದ್ರೆ ಈ ದೇವಸ್ಥಾನದ ಮುಂಭಾಗದಲ್ಲಿಯೇ ಪಾದರಕ್ಷೆಗಳನ್ನು ಕಟ್ಟಿದ್ದಾರೆ!

ಆಳಂದ: ಪಾದರಕ್ಷೆ ಕಟ್ಟುವ ಹರಕೆಯಿಂದಾಗಿ ಗೋಳಾ ಬಿ ಲಕ್ಕಮ್ಮ ದೇವಿ ಜಾತ್ರೆ ಪ್ರಸಿದ್ದಿ ಪಡೆದಿದೆ!
ಪಾದರಕ್ಷೆ ಕಟ್ಟುವ ಹರಕೆಯಿಂದಾಗಿ ಗೋಳಾ ಬಿ ಲಕ್ಕಮ್ಮ ದೇವಿ ಜಾತ್ರೆ ಪ್ರಸಿದ್ದಿ ಪಡೆದಿದೆ!

ದೇವರಿಗೆ ಜನರು ತಾವು ಅಂದುಕೊಂಡಿದ್ದು ನಡೆದರೆ ಹತ್ತಾರು ರೀತಿಯಲ್ಲಿ ಹರಕೆಗಳನ್ನು ತೀರಿಸೋದು ಸಂಪ್ರದಾಯ. ಅನೇಕರು ಕೇಶ ಮುಂಡನ ಮಾಡಿಸಿಕೊಂಡ್ರೆ, ಇನ್ನು ಕೆಲವರು ತೆಂಗಿನ ಕಾಯಿ ಒಡೆಯುತ್ತಾರೆ. ದೀಡ ನಮಸ್ಕಾರ ಹಾಕುತ್ತಾರೆ. ಚಿನ್ನಾಭರಣ, ಹಣ, ದಾಸೋಹ ಸೇರಿದಂತೆ ಜನರು ವಿಭಿನ್ನ ರೀತಿಯ ಹರಕೆಗಳನ್ನು ತೀರಿಸೋದನ್ನು ನೀವೆಲ್ಲಾ ನೋಡಿದ್ದೀರಿ. ಕೇಳಿದ್ದೀರಿ. ಆದ್ರೆ ಪಾದರಕ್ಷೆಗಳನ್ನು (slippers) ಕಟ್ಟಿ ಹರಕೇ ತಿರಿಸೋ ವಿಶಿಷ್ಟ ಸಂಪ್ರದಾಯವೊಂದು ಕಲಬುರಗಿ ಜಿಲ್ಲೆಯಲ್ಲಿದೆ. ಇನ್ನು ಇದೇ ದೇವಸ್ಥಾನದಲ್ಲಿ, ದೇವರ ಬೆನ್ನಿಗೆ ಜನರು ನಮಸ್ಕರಿಸುತ್ತಾರೆ (Gola B Lakshmamma devi temple).

ಎಲ್ಲಡೆ ಜಾತ್ರೆಯ ಸಂಭ್ರಮ. ಇನ್ನೊಂದಡೆ ದೇವಿಯ ದರ್ಶನ ಪಡೆಯುವಲ್ಲಿ ನಿರತರಾಗಿರುವ ಅನೇಕ ಭಕ್ತರು. ಇದರ ಜೊತೆಗೆ ದೇವಿಯ ದೇವಸ್ಥಾನದ ಮುಂದೆ ಕಟ್ಟಲಾಗಿರುವ ಹಗ್ಗಕ್ಕೆ ಕಟ್ಟಿರುವ ತರೇಹವಾರಿ ಪಾದರಕ್ಷೆಗಳು. ಇದನ್ನು ನೋಡಿದ್ರೆ ನೀವು ಶಾಕ್ ಆಗ್ತೀರಿ. ಯಾಕಂದ್ರೆ ದೇವಸ್ಥಾನದ ಮುಂಭಾಗದಲ್ಲಿ ಚಪ್ಪಲಿಗಳನ್ನು ಹೊರಗೆ ಬಿಟ್ಟು ಬನ್ನಿ ಅಂತ ಫಲಕ ಹಾಕಿರುತ್ತಾರೆ. ಆದ್ರೆ ಈ ದೇವಸ್ಥಾನದ ಮುಂಭಾಗದಲ್ಲಿಯೇ ಪಾದರಕ್ಷೆಗಳನ್ನು ಕಟ್ಟಿದ್ದಾರೆ ಅಂತ ಅಂದುಕೊಳ್ಳಬಹುದು.

ಆದ್ರೆ ಇಲ್ಲಿ ಈ ರೀತಿ ಪಾದರಕ್ಷೆಗಳನ್ನು ಕಟ್ಟಲಿಕ್ಕೆ ಕಾರಣವಿದೆ. ಹೌದು ದೇವಿಯ ಮಂದಿರದ ಮುಂದೆ ಹೊಸ ಪಾದರಕ್ಷೆಗಳನ್ನು ಕಟ್ಟುವ ಸಂಪ್ರದಾಯ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದಲ್ಲಿ ಆಚರಣೆಯಲ್ಲಿದೆ. ದೀಪಾವಳಿ ಹಬ್ಬವಾದ ನಂತರ ಬರುವ ಕೊನೆಯ ಪಂಚಮಿಯ ದಿನ ಮತ್ತು ಹುಣ್ಣಿಮೆಯ ದಿನ, ಗೋಳಾ ಬಿ ಗ್ರಾಮದಲ್ಲಿರುವ ಲಕ್ಕಮ್ಮ ದೇವಿಯ ಜಾತ್ರೆ ನಡೆಯುತ್ತೆ. ಈ ಜಾತ್ರೆಯ ವಿಶೇಷವೆಂದ್ರೆ ದೇವಸ್ಥಾನದ ಮುಂದೆ ಪಾದರಕ್ಷೆಗಳನ್ನು ಕಟ್ಟಿ ಹರಕೆ ತೀರಿಸೋದು. ಹೌದು ದೇವಿಯ ದೇವಸ್ಥಾನದ ಮುಂದೆ ಭಕ್ತರು ಹೊಸ ಪಾದರಕ್ಷೆಗಳನ್ನು ಖರೀದಿಸಿ ತಂದು, ಇಲ್ಲಿ ಕಟ್ಟಿ ತಮ್ಮ ಹರಕೆಯನ್ನು ತೀರಿಸುತ್ತಾರೆ.

ಇಂತಹದೊಂದು ಸಂಪ್ರದಾಯ ಇಲ್ಲಿ ಅನೇಕ ವರ್ಷಗಳಿಂದ ಆಚರಣೆಯಲ್ಲಿದೆ. ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸಮಸ್ಯೆಗಳನ್ನು ದೇವಿಯ ಮುಂದೆ ಹೇಳಿಕೊಳ್ಳುತ್ತಾರಂತೆ. ತಮ್ಮ ಸಮಸ್ಯೆ ಬಗೆಹರಿದರೆ ಅಥವಾ ತಾವು ಅಂದುಕೊಂಡಿದ್ದು ಆದ್ರೆ, ಬರುವ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಮುಂದೆ ಚಪ್ಪಲಿಗಳನ್ನು ಕಟ್ಟುತ್ತೇನೆ ಅಂತ ಹೇಳಿ ದೇವರಲ್ಲಿ ಪ್ರಾರ್ಥಿಸುತ್ತಾರಂತೆ. ಹೀಗೆ ಬೇಡಿಕೊಂಡವರಲ್ಲಿ ತಮ್ಮ ಸಮಸ್ಯೆಗಳು ಬಗೆಹರಿದವರು, ತಾವಂದುಕೊಂಡಿದ್ದು ಆದವರು ಜಾತ್ರೆಯ ಸಂದರ್ಭದಲ್ಲಿ ಪಾದರಕ್ಷೆಗಳನ್ನು ತಂದು ಕಟ್ಟಿ, ತಮ್ಮ ಹರಕೆಯನ್ನು ತೀರಿಸುತ್ತಾರೆ ಎನ್ನುತ್ತಾರೆ ದೇವಸ್ಥಾನದ ಟ್ರಸ್ಟಿ ಬಸವರಾಜ್.

ಇನ್ನು ಚಪ್ಪಲಿಗಳನ್ನು ತಂದು ಕಟ್ಟಲು ಕಾರಣವು ಇದೆಯಂತೆ. ಯಾಕಂದ್ರೆ ಗೋಳಾ ಗ್ರಾಮದಲ್ಲಿರುವ ಲಕ್ಕಮ್ಮ ದೇವಿ ರಾತ್ರಿಯ ಸಂದರ್ಭದಲ್ಲಿ ದೇವಸ್ಥಾನವನ್ನು ಬಿಟ್ಟು ಹೊರಗೆ ಸಂಚರಿಸುತ್ತಾಳೆ. ಆಗ ಈ ಚಪ್ಪಲಿಗಳನ್ನು ಹಾಕಿಕೊಂಡು ಅಡ್ಡಾಡುತ್ತಾಳೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು! ಜಾತ್ರೆಗೆ ಒಂದು ದಿನ ಮೊದಲು ಇಲ್ಲಿ ಯಾವುದೋ ದಿವ್ಯ ಶಕ್ತಿ ಬಂದು ಚಪ್ಪಲಿಗಳನ್ನು ತಂದು ಕಟ್ಟಿಹೋಗುತ್ತೆ.

ಇದನ್ನೂ ಓದಿ:

ಬೆಟ್ಟದ ಮೇಲೆ ಲಕ್ಷ್ಮೀ ತಿಮ್ಮಪ್ಪನ ಮಹಿಮೆ, ಬೇಡಿದ್ದೆಲ್ಲ ಈಡೇರುತ್ತದೆ ಅನ್ನೋದು ಭಕ್ತರ ಅಚಲ ನಂಬಿಕೆ

ಆ ಚಪ್ಪಲಿಗಳು ಮುಂಜಾನೆ ವೇಳೆಗೆ ಸವೆದಿರುತ್ತವೆ. ಅಂದ್ರೆ ದೇವಿ ಅವುಗಳನ್ನು ಹಾಕಿಕೊಂಡು ಅಡ್ಡಾಡಿರುತ್ತಾಳಂತೆ. ಇದೆಲ್ಲಾ ದೇವಿಯ ಶಕ್ತಿಯಿಂದ ನಡೆಯುತ್ತೆ ಅನ್ನೋ ನಂಬಿಕೆ ಜನರದ್ದು. ಇದು ಒಂದಾದ್ರೆ ಇನ್ನೊಂದು ವಿಶೇಷ ಈ ದೇವಸ್ಥಾನದಲ್ಲಿ ಇದೆ. ಇಲ್ಲಿ ದೇವರ ಮುಖ ಕಾಣೋದಿಲ್ಲಾ. ಬದಲಾಗಿ ದೇವರ ಬೆನ್ನಿಗೆ ಎಲ್ಲರು ನಮಸ್ಕರಿಸುತ್ತಾರೆ. ಯಾಕಂದ್ರೆ ಆಳಂದ ತಾಲೂಕಿನ ದುತ್ತರಗಾಂವ್ ಗ್ರಾಮದಿಂದ ಬಂದ ಲಕ್ಕಮ್ಮದೇವಿ ಗೋಳಾ ಬಿ ಗ್ರಾಮಕ್ಕೆ ಬಂದು ಬೆನ್ನನ್ನು ಮೇಲೆ ಮಾಡಿ ಮಲಗಿದ್ದಾಳಂತೆ.

ಹೀಗಾಗಿ ಇಲ್ಲಿ ದೇವಿಯ ಮುಖ ಕಾಣೋದಿಲ್ಲಾ. ಆದ್ದರಿಂದ ದೇವಸ್ಥಾನಕ್ಕೆ ಬರುವ ಭಕ್ತರು ದೇವಿಯ ಬೆನ್ನಿಗೆ ನಮಸ್ಕರಿಸುತ್ತಾರೆ. ದೇವಿಯ ಬೆನ್ನಿಗೆ ಇಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಗೋಳಾ ಬಿ ಗ್ರಾಮದಲ್ಲಿ ನಡೆಯುವ ಲಕ್ಕಮ್ಮ ದೇವಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕಲಬುರಗಿ ಜಿಲ್ಲೆಯಲ್ಲದೆ, ನೆರೆಯ ಮಹರಾಷ್ಟ್ರ ಮತ್ತು ತೆಲಂಗಾಣದಿಂದಲೂ ಕೂಡಾ ಸಾಕಷ್ಟು ಭಕ್ತರು ಬರ್ತಾರಂತೆ. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.

ಪಾದರಕ್ಷೆ ಹರಕೆಯಿಂದಾಗಿ ಗೋಳಾ ಬಿ ಲಕ್ಕಮ್ಮದೇವಿ ಜಾತ್ರೆ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಪಾದರಕ್ಷೆಗಳನ್ನು ಕಟ್ಟಿ ಹರಕೆ ತೀರಿಸೋದರಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೇ ಅನ್ನೋ ನಂಬಿಕೆ ಭಕ್ತರಲ್ಲಿ ಇರೋದರಿಂದಾಗಿ ಇಂದಿಗೂ ಪಾದರಕ್ಷೆಯ ಹರಕೆ ನಡೆದುಕೊಂಡು ಬಂದಿದೆ. ಕಾಲ ಬದಲಾದ್ರು ಕೂಡಾ ಜನರ ನಂಬಿಕೆ ಮಾತ್ರ ಬದಲಾಗಿಲ್ಲ, ಜೈ ಲಕ್ಕಮ್ಮ! (ವರದಿ: ಸಂಜಯ್, ಟಿವಿ 9, ಕಲಬುರಗಿ)

ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada