ಕಲಬುರ್ಗಿ: ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಾಚಾಮಗೋಚರ ನಿಂದಿಸಿರುವ ಪ್ರಕರಣಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶಾಸಕರು ತಾಳ್ಮೆ ಕಳೆದುಕೊಂಡು ಮಾತನಾಡಿದ್ದಾರೆ. ಏನಾಯಿತು ಎನ್ನುವ ಬಗ್ಗೆ ನಮ್ಮ ಅಧಿಕಾರಿಗಳಿಂದ ವರದಿ ಪಡೆಯುತ್ತೇನೆ. ಲೋಕೋಪಯೋಗಿ ಇಲಾಖೆಯ ನೇಮಕಾತಿಯಲ್ಲಿಯೂ ಅಕ್ರಮಗಳು ನಡೆದಿರು ದೂರುಗಳು ಕೇಳಿ ಬಂದಿವೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, ಬೇರು ಮಟ್ಟದಲ್ಲಿ ತನಿಖೆ ಆರಂಭವಾಗಿದೆ. ಕವಲಂದೆಯಲ್ಲಿ ಛೋಟಾ ಪಾಕಿಸ್ತಾನ ಎಂಬ ಘೋಷಣೆ ಕೂಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಹಿರಿಯ ಅಧಿಕಾರಿಗಳಿಂದ ವರದಿ ಪಡೆದುಕೊಳ್ಳುತ್ತೇನೆ ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಪಿಎಸ್ಐ ಅಕ್ರಮ ನೇಮಕಾತಿ ಬಗ್ಗೆ ಪ್ರಸ್ತಾಪಿಸಿದ ಅವರು, ಹಣದ ಹಿಂದೆ ಹೋದರೆ ಗೌರವ ಸಿಗಲ್ಲ. ನಿನ್ನೆ ಪರೀಕ್ಷಾ ಅಕ್ರಮದಲ್ಲಿ ಡಿವೈಎಸ್‌ಪಿ, ಸಿಪಿಐಗಳನ್ನು ಬಂಧಿಸಿದ್ದೇವೆ. ಬಂಧಿತರು ಅನೈತಿಕ ಮಾರ್ಗವಾಗಿ ಹಣ ಮಾಡಲು ಹೋಗಿದ್ದರು. ಅವರು ಸಹ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದರು. ಇಂದು ಪೊಲೀಸ್ ಸಮವಸ್ತ್ರ ಬಿಚ್ಚಿ ಲಾಕಪ್‌ನಲ್ಲಿ ಕುಳಿತಿದ್ದಾರೆ. ಇದು ನಮಗೆಲ್ಲರಿಗೂ ಎಚ್ಚರಿಕೆ ಗಂಟೆಯಾಗಬೇಕಿದೆ. ಕಷ್ಟಪಟ್ಟು ಓದಿದ್ದ ಪಿಎಸ್ಐ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು. ಪರೀಕ್ಷಾ ಕೇಂದ್ರದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಿದ್ದರೆ ಇಂಥ ಅಕ್ರಮ ಆಗುತ್ತಿರಲಿಲ್ಲ. ನಮ್ಮ ಅಧಿಕಾರಿಗಳು ಹಣಕ್ಕೆ ಕೈ ಚಾಚಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಅಕ್ರಮ ಮಾರ್ಗದಲ್ಲಿ ನೀವು ಹಣ ಮಾಡಬಹುದು, ಆದರೆ ಮಾನ ಮರ್ಯಾದೆ ಹೋಗುತ್ತದೆ ಎಂದು ಹೇಳಿದರು.
ನೇಮಕಾತಿ ಹಗರಣದಲ್ಲಿ ಈವರೆಗೆ 48 ಜನರನ್ನು ಬಂಧಿಸಲಾಗಿದೆ. ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ನಾವು ಮುಕ್ತ ಅವಕಾಶ ನೀಡಿದ್ದೇವೆ. ಈ ಮೂಲಕ ಅಕ್ರಮ ನಡೆಸುವ ಎಲ್ಲರಿಗೂ ಒಂದು ಕಠಿಣ ಸಂದೇಶ ಹೋಗಬೇಕಿದೆ. ಈವರೆಗೆ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮದ ಆರೋಪಗಳು ಕೇಳಿಬಂದಿದ್ದವು. ಆದರೆ ಹಿಂದೆಂದೂ ಇಷ್ಟು ವಿಸ್ತೃತ ತನಿಖೆ ನಡೆದಿರಲಿಲ್ಲ. ಅನೈತಿಕ ಮಾರ್ಗ ಹಿಡಿಯುವವರಿಗೆ ಉಳಿಗಾಲ ಇಲ್ಲ ಎಂದು ಎಚ್ಚರಿಸಿದರು.
ವಿರೋಧಿಗಳ ಕುತಂತ್ರದಿಂದ ಆಡಿಯೊ ವೈರಲ್: ಎಂ.ಪಿ.ಕುಮಾರಸ್ವಾಮಿ
ಮಲ್ಲಂದೂರು ಪಿಎಸ್ಐ ಜೊತೆಗೆ ನನ್ನ ಮಾತುಕತೆಯ ಆಡಿಯೊ ವೈರಲ್ ಆಗಿರುವುದರಿಂದ ವಿರೋಧಿಗಳ ಕುತಂತ್ರವಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿಂದೊಮ್ಮೆ ಇದೇ ಪಿಎಸ್ಐ ನನ್ನ ಬಳಿಗೆ ಬಂದಿದ್ದರು. ಮಲ್ಲಂದೂರು ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಮತ್ತು ಅತ್ಯಂತ ಹಿಂದುಳಿದ ವರ್ಗದ ಜನಾಂಗದವರು ಹೆಚ್ಚು ವಾಸಿಸುತ್ತಿದ್ದಾರೆ. ನಿಮ್ಮ ಸ್ವಂತ ಊರು ಮಂಡ್ಯಕ್ಕೆ ಹೋಗಿ. ನೀವು ಕೆಲಸಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದರಿಂದ ಮತ್ತು ಭಾಷೆಯ ವ್ಯತ್ಯಾಸ ಇರುವುದರಿಂದ ಜನರನ್ನು ಸಂಭಾಳಿಸುವುದು ಕಷ್ಟ ಎಂದು ತಿಳಿಹೇಳಿದ್ದೆ. ಅದನ್ನು ಹೊರತುಪಡಿಸಿ ಯಾವುದೇ ಜಾತಿ ಜನಾಂಗದ ವಿಚಾರ ಅಥವಾ ಬೇರೆ ವಿಚಾರವನ್ನು ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದೇ ವ್ಯಕ್ತಿಯು ಇದೀಗ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದಂತೆ ಕೆಲಸಕ್ಕೆ ಹಾಜರಾಗಿದ್ದರು. ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ಒತ್ತಡ ಹಾಕಿದ್ದರಿಂದ ಒಬ್ಬ ಶಾಸಕನಾಗಿ ನಾನೇ ಮಾತನಾಡಿದೆ. ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ಪ್ರತಿದಿನ ಹತ್ತಾರು ಕರೆಗಳು ನನಗೆ ಬರುತ್ತವೆ. ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದ್ದಾರೆ.
ಇದೀಗ ನನ್ನ ವಿರುದ್ಧ ಒಕ್ಕಲಿಗರ ವಿರೋಧಿ ಎಂಬ ಕುತಂತ್ರದ ಪ್ರಚಾರ ನಡೆಯುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು. ಬಹುತೇಕ ನನ್ನ ಜೊತೆಗಾರರರು ಒಕ್ಕಲಿಗ ನಾಯಕರೇ ಆಗಿದ್ದಾರೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಲ್ಲಿ ಒಕ್ಕಲಿಗರ ನಿರ್ದೇಶನದಂತೆ ಬಹುತೇಕ ಕೆಲಸಗಳನ್ನು ಮಾಡಲಾಗುತ್ತಿದೆ. ಹಾಗಾಗಿ ನನ್ನ ವಿರೋಧಿಗಳು ಹೆಣೆದಿರುವ ಈ ಕುತಂತ್ರವನ್ನು ದಯವಿಟ್ಟು ಯಾರೂ ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಒದ್ ಓಡಿಸ್ತೀನಿ ನಿನ್ನ: ರೌಡಿಯಂತೆ ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿದ ಬಿಜೆಪಿ ಶಾಸಕ
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ: ಬಂಧಿತ ಸಿಪಿಐ ಆನಂದ್ PSI ಪರೀಕ್ಷೆ ಬಳಿಕ ಬರೋಬ್ಬರಿ 22 ಎಕರೆ ಜಮೀನು ಖರೀದಿ ಮಾಡಿದ್ದ