PSI Recruitment Scam: ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಸಿಐಡಿ ವಶ

PSI Recruitment Scam: ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಸಿಐಡಿ ವಶ
ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ಬಂಧನ

ಕಿಂಗ್​​ಪಿನ್​ಗೆ ಸಹಾಯ‌ ಮಾಡಿದ ಆರೋಪ ಹಿನ್ನೆಲೆ ಕೆಎಸ್​​ಆರ್​ಪಿ (KSRP) ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್​ ನನ್ನು ಸಿಐಡಿ ವಶಕ್ಕೆ ಪಡೆದು ಕಲಬುರಗಿ ಕಚೇರಿಗೆ ಸಿಐಡಿ ತಂಡ ಕರೆತಂದಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 06, 2022 | 8:07 PM

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಲ್ಲಿನ ಕುಳಗಳೇ ಬಲೆಗೆ ಬೀಳುತ್ತಿದ್ದು, ಈಗ ಪರೀಕ್ಷಾ ಅಕ್ರಮದಲ್ಲಿ ಮತ್ತೊಬ್ಬ ಪೊಲೀಸ್​ ಸಿಬ್ಬಂದಿಯನ್ನ ಸಿಐಡಿ ವಶಕ್ಕೆ ಪಡೆದುಕೊಂಡಿದೆ. ಅಭ್ಯರ್ಥಿಗಳು, ಕಿಂಗ್​​ಪಿನ್​ಗೆ ಸಹಾಯ‌ ಮಾಡಿದ ಆರೋಪ ಹಿನ್ನೆಲೆ ಕೆಎಸ್​​ಆರ್​ಪಿ (KSRP) ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್​ ನನ್ನು ಸಿಐಡಿ ವಶಕ್ಕೆ ಪಡೆದು ಕಲಬುರಗಿ ಕಚೇರಿಗೆ ಸಿಐಡಿ ತಂಡ ಕರೆತಂದಿದ್ದಾರೆ. ನಿನ್ನೆಯಷ್ಟೇ ಓರ್ವ ಡಿವೈಎಸ್ಪಿ ಬಂಧಿಸಿದ್ದ ಸಿಐಡಿ ಅಧಿಕಾರಿಗಳು ಇಂದು ವೈಜನಾಥ್​ನನ್ನು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕು ನಿವಾಸಿಯಾಗಿರುವ ವೈಜನಾಥ್​ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ DySP ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್​ರನ್ನ ಸಿಐಡಿ ಬಂಧಿಸಿದ್ದು, ಕಲಬುರಗಿಯ ಸಿಐಡಿ ಕಚೇರಿಯಲ್ಲಿ ಬೆಳಗ್ಗೆಯಿಂದ ಸಿಐಡಿ ಅಧಿಕಾರಿಗಳು ಇಬ್ಬರ ವಿಚಾರಣೆ ನಡೆಸಿದರು. ಬೆಳಗ್ಗೆ 10ಗಂಟೆಯಿಂದ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಬೆರಳಚ್ಚು ವಿಭಾಗದ ಪೊಲೀಸ್​ ಇನ್ಸ್​ಪೆಕ್ಟರ್​​​ ಆಗಿದ್ದ ಆನಂದ್, ಮಲ್ಲಿಕಾರ್ಜುನ ಸಾಲಿ ರಾಯಚೂರು ಜಿಲ್ಲೆಯಲ್ಲಿ ಡಿವೈಎಸ್​ಪಿ ಆಗಿದ್ದಾರೆ. ಅಭ್ಯರ್ಥಿ, ಕಿಂಗ್​ಪಿನ್​​ಗೆ ಡೀಲ್​ ಮಾಡುವುದಕ್ಕೆ ಮಲ್ಲಿಕಾರ್ಜುನ ಸಹಾಯ ಮಾಡುತ್ತಿದ್ದ.

16 ಮಂದಿ ಬಂಧನ, ಕೆಲ ಪೊಲೀಸರಿಗೆ ಆತಂಕ

ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಯಶವಂತಗೌಡ, ಮಧು ಎಂಬುವವರನ್ನು ಬಂಧಿಸಿದ್ದಾರೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಈವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರ ವಿರುದ್ಧ ಒಎಂಆರ್ ಶೀಟ್ ತಿದ್ದಿರುವ ಆರೋಪ ಕೇಳಿಬಂದಿದೆ. ಎಚ್​.ಯು.ರಘುವೀರ್, ಎಂ.ಸಿ.ಚೇತನ್ ಕುಮಾರ್, ಸಿ.ವೆಂಕಟೇಶ್ ಗೌಡ, ಮಮತೇಶ್ ಗೌಡ, ಆರ್.ಮಧು, ಸಿ.ಕೆ.ದಿಲೀಪ್ ಕುಮಾರ್, ಎಚ್​.ಆರ್.ಪ್ರವೀಣ್ ಕುಮಾರ್‌, ಸೂರ್ಯನಾರಾಯಣ, ಸಿ.ಎಂ.ನಾಗರಾಜ, ಗಜೇಂದ್ರ, ಯಶವಂತ್ ದೀಪ್, ಮನುಕುಮಾರ್, ಜಿ.ಸಿ.ರಾಘವೇಂದ್ರ, ನಾಗೇಶ್ ಗೌಡ, ಆರ್.ಮಧು, ಯಶವಂತ ಗೌಡ ಬಂಧಿತರು. ನಾಪತ್ತೆಯಾಗಿರುವ ಆರು ಆರೋಪಿಗಳಿಗಾಗಿ ಸಿಐಡಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ರೋಲ್ ನಂಬರ್ 9245556ರ ಮಧು ಮತ್ತು ರೋಲ್ ನಂಬರ್ 9244198ರ ಯಶವಂತಗೌಡ ಅವರ ವಿರುದ್ಧ ಒಎಂಅರ್ ಶೀಟ್ ತಿದ್ದಿರುವ ಆರೋಪ ಕೇಳಿಬಂದಿದೆ. ಪಿಎಸ್​ಐ ನೇಮಕಾತಿ ಹಗರಣ ಸಂಬಂಧ ಪ್ರಕರಣ ದಾಖಲಾದ ಬಳಿಕ ಇವರಿಬ್ಬರೂ ನಾಪತ್ತೆಯಾಗಿದ್ದರು.

ಪ್ರಕರಣದ‌ ತನಿಖೆ ಮುಗಿದ ಬಳಿಕ ಪರೀಕ್ಷಾ ದಿನಾಂಕ ತಿಳಿಸುತ್ತೇವೆ: ಆರಗ ಜ್ಞಾನೇಂದ್ರ

ಪಿಎಸ್​ಐ ದೈಹಿಕ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಹೀಗಾಗಿ PSI ಮರು ಪರೀಕ್ಷೆ ಘೋಷಣೆ ಮಾಡಲಾಗಿದೆ. ಪ್ರಕರಣದ‌ ತನಿಖೆ ಮುಗಿದ ಬಳಿಕ ಪರೀಕ್ಷಾ ದಿನಾಂಕ ತಿಳಿಸ್ತೇವೆ ಎಂದು ಕಲಬುರಗಿಯಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಒಂದೇ ಸೆಂಟರ್​ ಅಲ್ಲ ಬೇರೆಬೇರೆ ಸೆಂಟರ್​​ಗಳಲ್ಲಿ ಅಕ್ರಮ ಆಗಿದೆ. ನಾವು ಯಾರನ್ನೂ ಬಿಡುವುದಿಲ್ಲ, ಕ್ರಮ ತೆಗೆದುಕೊಳ್ಳುತ್ತೇವೆ. ಅಕ್ರಮ ನಡೆದಿರುವ ಕೇಂದ್ರಗಳಲ್ಲಿ ಕರ್ತವ್ಯಕ್ಕಿದ್ದವರ ವಿಚಾರಣೆ ಮಾಡಲಾಗುತ್ತಿದೆ. ಪರೀಕ್ಷಾ ಅಕ್ರಮದಲ್ಲಿ ಇಷ್ಟು ಆಳವಾದ ತನಿಖೆ ಯಾರೂ ಮಾಡಿಲ್ಲ. ನಮ್ಮ ಸರ್ಕಾರ ಪ್ರಕರಣದ ಸಮಗ್ರವಾದ ತನಿಖೆ ಮಾಡುತ್ತಿದೆ. ಪ್ರಕರಣದಲ್ಲಿ ನಮ್ಮ ಸರ್ಕಾರ ಯಾರನ್ನೂ ಬಿಡುವುದಿಲ್ಲ. ಪರೀಕ್ಷಾ ಅಕ್ರಮದಿಂದ ಅಧಿಕಾರಿಗಳನ್ನ ವರ್ಗಾವಣೆ ಮಾಡಿಲ್ಲ. ಅಧಿಕಾರಿಗಳು ಬದಲಾವಣೆ ಬಯಸಿದ್ದಕ್ಕೆ ವರ್ಗಾಯಿಸಲಾಗ್ತಿದೆ. ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಮನವಿ ಮಾಡ್ತೇವೆ. ಅಧಿಕಾರಿಗಳ ತಪ್ಪಿದ್ದರೆ ವರ್ಗಾವಣೆ ಅಷ್ಟೇ ಅಲ್ಲ ಶಿಕ್ಷೆ ನೀಡ್ತೇವೆ. ಮುಂದಿನ ಪರೀಕ್ಷೆ ಅತ್ಯಂತ ಪಾರದರ್ಶಕವಾಗಿ ನಡೆಸಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada