ಕಲಬುರಗಿ: ಆಟೋದಲ್ಲೇ ಚಿನ್ನಾಭರಣದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕ; ಆಟೋ ಪತ್ತೆ ಹಚ್ಚಿದ್ದೇ ರೋಚಕ
ಎಸ್‌ಬಿಐ ಕಾಲೊನಿ ನಿವಾಸಿ ರೇಖಾ ಲಕ್ಷ್ಮಿಸಾಗರ ಅವರು 13.42 ಲಕ್ಷ ಮೌಲ್ಯದ ಚಿನ್ನಾಭರಣ ಇರಿಸಿದ್ದ ಬ್ಯಾಗ್ ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದರು. ಈ ಬಗ್ಗೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆ ಆರಂಭಿಸಿದ ಪೊಲೀಸರು ಆಟೋ ಪತ್ತೆ ಹಚ್ಚಿ ಚಿನ್ನವನ್ನು ವಶಕ್ಕೆ ಪಡೆದು ಮಾಲೀಕರಿಗೆ ಒಪ್ಪಿಸಿದ್ದಾರೆ.
ಕಲಬುರಗಿ, ಫೆ.20: ಪ್ರಯಾಣಿಕರೊಬ್ಬರು ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ಕಲಬುರಗಿ (Kalaburagi) ಜಿಲ್ಲೆಯ ಅಶೋಕ ನಗರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಎಸ್‌ಬಿಐ ಕಾಲೊನಿ ನಿವಾಸಿ ರೇಖಾ ಲಕ್ಷ್ಮಿಸಾಗರ ಅವರು 13.42 ಲಕ್ಷ ಮೌಲ್ಯದ ಚಿನ್ನಾಭರಣ ಇರಿಸಿದ್ದ ಬ್ಯಾಗ್ ಆಟೊದಲ್ಲಿ ಮರೆತು ಬಿಟ್ಟು ಹೋಗಿದ್ದರು. ಬಿಟ್ಟು ಹೋದ ಬ್ಯಾಗ್ ಪತ್ತೆ ಹಚ್ಚಿ, ಪೊಲೀಸ್ ಕಮಿಷನರ್ ಚೇತನ್ ಆರ್ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.
ರೇಖಾ ಅವರು ಫೆ.17ರ ಸಂಜೆ ತಮ್ಮ ತಂಗಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಬೀದರ್‌ನ ಬಸವಕಲ್ಯಾಣಕ್ಕೆ ತೆರಳುತ್ತಿದ್ದರು. ತಂಗಿಗೆ ಒಡವೆ ತೊಡಿಸಲು ತಮ್ಮ ಮನೆಯಿಂದ 13.42 ಲಕ್ಷ ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದರು. ಸಂತೋಷ ಕಾಲೊನಿ ಆಟೋ ನಿಲ್ದಾಣದಿಂದ ಹೊರಟು ಕೇಂದ್ರ ಬಸ್ ನಿಲ್ದಾಣ ಬಳಿಯ ಬೇಕರಿಯೊಂದರ ಸಮೀಪ ಇಳಿದರು. ಒಡವೆಗಳು ಇದ್ದ ಬ್ಯಾಗ್ ಅನ್ನು ಆಟೊದಲ್ಲಿ ಮರೆತು ಬಿಟ್ಟು ಹೋದರು. ನಿಲ್ದಾಣದ ಒಳಗೆ ಹೋದಾಗ ನೆನಪಾಗಿ, ವಾಪಸ್ ಬಂದು ನೋಡುವಷ್ಟರಲ್ಲಿ ಆಟೋ ಅಲ್ಲಿಂದ ತೆರಳಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral News: 4.1 ಕೆಜಿ ಚಿನ್ನದಿಂದ ವಿನ್ಯಾಸಗೊಳಿಸಲಾದ ವಿಶ್ವದ ಅತ್ಯಂತ ದುಬಾರಿ ಶರ್ಟ್
ಈ ಸಂಬಂಧ ಮಹಿಳೆಯು ಅಶೋಕ ನಗರ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದರು. ಕಾನ್‌ಸ್ಟೆಬಲ್ ನೀಲಕಂಠರಾವ ಪಾಟೀಲ ಅವರು ಆಟೋ ನಿಲ್ದಾಣ ಸಮೀಪದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಪರಿಶೀಲಿಸಿದರು. ಆದರೆ, ಆಟೋ ನೋಂದಣಿಯ ಸಂಖ್ಯೆ ಕಾಣಿಸಲಿಲ್ಲ. ಬೇರೊಂದು ಕಡೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಪರಿಶೀಲಿಸಿದಾಗ, ಆಟೋ ಹಿಂದೆ ಜಾಹೀರಾತು ಮಾತ್ರ ಕಾಣಿಸುತ್ತಿತ್ತು. ಜಾಹೀರಾತು ಬಾತ್ಮಿದಾರರಿಂದ ಸುಮಾರು 200 ಆಟೊಗಳನ್ನು ಪರಿಶೀಲಿಸಿ, ಸಿಸಿಟಿವಿಯಲ್ಲಿ ಹೊಂದಾಣಿಕೆಯಾದ ಆಟೋ ನೋಂದಣಿ ಮೂಲಕ ಅದರ ಮಾಲೀಕರನ್ನು ಪತ್ತೆಹಚ್ಚಲಾಯಿತು ಎಂದು ಮಾಹಿತಿ ನೀಡಿದರು.
ಆಟೋ ಚಾಲಕ ಹೀರಾಪುರ ನಿವಾಸಿ ಅಣವೀರಪ್ಪ ನಾಗಪ್ಪ ಅವರ ಮನೆಗೆ ತೆರಳಿದ ಪೊಲೀಸರು, ವಿಚಾರಣೆ ನಡೆಸಿ ಬ್ಯಾಗ್ ಪಡೆದರು. ಬ್ಯಾಗ್ ವಾರಸುದಾರರು ಪರಿಶೀಲಿಸಿದಾಗ ಎಲ್ಲ ಒಡವೆಗಳು ಇರುವುದಾಗಿ ಖಚಿತಪಡಿಸಿದರು. ಆ ಬಳಿಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ವಾರಸುದಾರರಿಗೆ ಚಿನ್ನಾಭರಣಗಳು ಇದ್ದ ಬ್ಯಾಗ್ ನೀಡಲಾಯಿತು.
24 ಗಂಟೆಯೊಳಗೆ ಬಿಟ್ಟು ಹೋದ ಬ್ಯಾಗ್ ಪತ್ತೆ ಹಚ್ಚಿ, ವಾರಸುದಾರರಿಗೆ ನೀಡಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ