ಕಲಬುರಗಿಯಲ್ಲಿ ಕಾಂಗ್ರೆಸ್​ ಜತೆ ಕೈ ಜೋಡಿಸಲು ಜೆಡಿಎಸ್​​ ಒಲವು; ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಮೈತ್ರಿ ನಿಲುವು

ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮೈತ್ರಿ ನಿರ್ಧಾರ ಮಾಡುವಂತೆ ಹೆಚ್​.ಡಿ.ದೇವೇಗೌಡ ಸಲಹೆ ನೀಡಿದ್ದು, ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಳ್ಳಲು ದೇವೇಗೌಡರು ಒಲವು ತೋರಿಸಿದ್ದಾರೆ ಎನ್ನಲಾಗಿದೆ.

ಕಲಬುರಗಿಯಲ್ಲಿ ಕಾಂಗ್ರೆಸ್​ ಜತೆ ಕೈ ಜೋಡಿಸಲು ಜೆಡಿಎಸ್​​ ಒಲವು; ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಮೈತ್ರಿ ನಿಲುವು
ಕಾಂಗ್ರೆಸ್​ ಜತೆ ಜೆಡಿಎಸ್​ ಮೈತ್ರಿ ಬಹುತೇಕ ಖಚಿತ
Follow us
| Updated By: Skanda

Updated on: Sep 11, 2021 | 7:42 AM

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಅತಂತ್ರವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಮೂರು ಪಕ್ಷಗಳೂ ಮೇಯರ್​​ ಪಟ್ಟಕ್ಕಾಗಿ ತಂತ್ರಗಾರಿಕೆ ರೂಪಿಸಿದ್ದು ಇದೀಗ ಅಂತಿಮವಾಗಿ ಕಾಂಗ್ರೆಸ್​ ಜತೆ ಜೆಡಿಎಸ್​ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತ ಎಂದೆನ್ನಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕಾಗಿ ಮೈತ್ರಿ ಅನಿವಾರ್ಯ ಎಂಬಂತಾಗಿದ್ದು, ಮುಂದಿನ ರಾಜಕೀಯ ಲೆಕ್ಕಾಚಾರವನ್ನು ಗಮನದಲ್ಲಿ ಇಟ್ಟುಕೊಂಡು ದಳಪತಿಗಳು ಕಾಂಗ್ರೆಸ್​ಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಈ ಕುರಿತು ಸೋಮವಾರ ಜೆಡಿಎಸ್​ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ಕಾಂಗ್ರೆಸ್​ ಜತೆ ಜೆಡಿಎಸ್​ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲು ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್​ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಜೆಡಿಎಲ್​ಪಿ ಸಭೆಯಲ್ಲಿ ನಾಯಕರು ತಮ್ಮ ನಿರ್ಧಾರ ತಿಳಿಸಲಿದ್ದು, ಸೋಮವಾರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಇದೇ ವೇಳೆ ಜೆಡಿಎಸ್ ಸದಸ್ಯರನ್ನು ಹೈಜಾಕ್​ ಮಾಡುವ ಆತಂಕವೂ ಇರುವುದರಿಂದ ಬೆಂಗಳೂರಿನಲ್ಲಿರುವ ಜೆಡಿಎಸ್​ ಸದಸ್ಯರನ್ನು ಸೋಮವಾರ ಅಂತಿಮ ನಿರ್ಧಾರ ಪ್ರಕಟವಾಗುವ ತನಕ ಬೇರೆಡೆಗೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮೈತ್ರಿ ನಿರ್ಧಾರ ಮಾಡುವಂತೆ ಹೆಚ್​.ಡಿ.ದೇವೇಗೌಡ ಸಲಹೆ ನೀಡಿದ್ದು, ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಳ್ಳಲು ದೇವೇಗೌಡರು ಒಲವು ತೋರಿಸಿದ್ದಾರೆ ಎನ್ನಲಾಗಿದೆ. ರಾಜಕೀಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಲು ದೇವೇಗೌಡರು ಯೋಚಿಸಿದ್ದು ಹೆಚ್​.ಡಿ.ಕುಮಾರಸ್ವಾಮಿ ಅವರಿಗೂ ಈ ಬಗ್ಗೆ ಸಲಹೆ ನೀಡಿದ್ದಾರೆ.

ಇತ್ತ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಕೂಡಾ ತಂತ್ರ ರೂಪಿಸಿದ್ದು, ಮ್ಯಾಜಿಕ್ ಸಂಖ್ಯೆ ಪಕ್ಕಾ ಆಗೋ ತನಕ ಮೇಯರ್ ಆಯ್ಕೆ ದಿನಾಂಕವನ್ನೇ ತಡೆಯುವ ಯೋಚನೆಯಲ್ಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು ಕಾಂಗ್ರೆಸ್​ ಕೂಡಾ ಈ ವಿಚಾರದಲ್ಲಿ ಪ್ರಯತ್ನಪಡುತ್ತಿದ್ದು, ಕಲಬುರಗಿ ಕಾಂಗ್ರೆಸ್​ ಕಾರ್ಪೊರೇಟರ್​​ಗಳು ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಮೇಯರ್ ಆಯ್ಕೆಗೆ ದಿನಾಂಕ ನಿಗದಿ ಆಗದಂತೆ ತಡೆಯುವ ಚಿಂತನೆಯಲ್ಲಿರುವ ಬಿಜೆಪಿ ಎರಡರಿಂದ ಮೂರು ತಿಂಗಳು ಆಯ್ಕೆ ಪ್ರಕ್ರಿಯೆ ಮುಂದೂಡಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಟಾಂಗ್ ನೀಡುವ ಲೆಕ್ಕಾಚಾರ ಬಿಜೆಪಿಯಲ್ಲಿದ್ದು, ತಮ್ಮದೇ ದಾಳ ಉರುಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಒಂದು ವೇಳೆ ಜೆಡಿಎಸ್ ಬೆಂಬಲ ನೀಡದಿದ್ದರೆ ಮೇಯರ್ ಆಯ್ಕೆ ಮುಂದಕ್ಕೆ ಹೋಗುವ ಸಾಧ್ಯತೆ ಇದ್ದು, ಪಾಲಿಕೆ ಸದಸ್ಯರ ಹೆಸರು ಗೆಜೆಟ್ ನೋಟಿಪಿಕಿಷನ್ ಆದ ನಂತರ ಪ್ರಾದೇಶಿಕ ಆಯುಕ್ತರು ಮೇಯರ್ ಆಯ್ಕೆಗೆ ದಿನಾಂಕ ನಿಗದಿ ಪಡಿಸುವ ಸಂದರ್ಭದಲ್ಲೇ ಬಿಜೆಪಿ ತನ್ನ ತಂತ್ರಗಾರಿಕೆ ತೋರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆ ರಿಸಲ್ಟ್ ಅತಂತ್ರ: ಹೆಚ್​ಡಿ ದೇವೇಗೌಡರ ಜೊತೆ ಮೈತ್ರಿ ಮಾಡಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ? 

ಕಲಬುರಗಿ: ಮೇಯರ್​ ಪಟ್ಟಕ್ಕಾಗಿ 3 ಪಕ್ಷಗಳಿಂದಲೂ ಒಂದೊಂದು ಯೋಜನೆ; ಜೆಡಿಎಸ್​ನದ್ದು ಕಾದು ನೋಡುವ ತಂತ್ರ

(Kalaburagi Mayor election updates JDS may go with Congress with future Political calculations)