ಕಲಬುರಗಿ: ಮೇಯರ್​ ಪಟ್ಟಕ್ಕಾಗಿ 3 ಪಕ್ಷಗಳಿಂದಲೂ ಒಂದೊಂದು ಯೋಜನೆ; ಜೆಡಿಎಸ್​ನದ್ದು ಕಾದು ನೋಡುವ ತಂತ್ರ

ಮೇಯರ್ ಆಯ್ಕೆಗೆ ದಿನಾಂಕ ನಿಗದಿ ಆಗದಂತೆ ತಡೆಯುವ ಚಿಂತನೆಯಲ್ಲಿರುವ ಬಿಜೆಪಿ ಎರಡರಿಂದ ಮೂರು ತಿಂಗಳು ಆಯ್ಕೆ ಪ್ರಕ್ರಿಯೆ ಮುಂದೂಡಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಟಾಂಗ್ ನೀಡುವ ಲೆಕ್ಕಾಚಾರ ಬಿಜೆಪಿಯಲ್ಲಿದ್ದು, ತಮ್ಮದೇ ದಾಳ ಉರುಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಕಲಬುರಗಿ: ಮೇಯರ್​ ಪಟ್ಟಕ್ಕಾಗಿ 3 ಪಕ್ಷಗಳಿಂದಲೂ ಒಂದೊಂದು ಯೋಜನೆ; ಜೆಡಿಎಸ್​ನದ್ದು ಕಾದು ನೋಡುವ ತಂತ್ರ
ಸಾಂಕೇತಿಕ ಚಿತ್ರ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಅತಂತ್ರವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್​ ಮೂರೂ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆ ರೂಪಿಸಿವೆ. ಮೇಯರ್​ ಪಟ್ಟ ಕಗ್ಗಂಟಾಗಿರುವುದರಿಂದ ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ. ಕಾಂಗ್ರೆಸ್, ಬಿಜೆಪಿ ಪೈಕಿ ಯಾರಾದರೂ ತಮಗೆ ಬೆಂಬಲಿಸುತ್ತಾರಾ ಎಂದು ಕಾಯುತ್ತಿರುವ ಜೆಡಿಎಸ್, ಕಲಬುರಗಿ ಪಾಲಿಕೆ ಮೇಯರ್ ಪಟ್ಟಕ್ಕೆ ಡಿಮ್ಯಾಂಡ್ ಇಟ್ಟಿದೆ. ಇತ್ತ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಕೂಡಾ ತಂತ್ರ ರೂಪಿಸಿದ್ದು, ಮ್ಯಾಜಿಕ್ ಸಂಖ್ಯೆ ಪಕ್ಕಾ ಆಗೋ ತನಕ ಮೇಯರ್ ಆಯ್ಕೆ ದಿನಾಂಕವನ್ನೇ ತಡೆಯುವ ಯೋಚನೆಯಲ್ಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು ಕಾಂಗ್ರೆಸ್​ ಕೂಡಾ ಈ ವಿಚಾರದಲ್ಲಿ ಪ್ರಯತ್ನಪಡುತ್ತಿದ್ದು, ಕಲಬುರಗಿ ಕಾಂಗ್ರೆಸ್​ ಕಾರ್ಪೊರೇಟರ್​​ಗಳು ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಮೇಯರ್ ಆಯ್ಕೆಗೆ ದಿನಾಂಕ ನಿಗದಿ ಆಗದಂತೆ ತಡೆಯುವ ಚಿಂತನೆಯಲ್ಲಿರುವ ಬಿಜೆಪಿ ಎರಡರಿಂದ ಮೂರು ತಿಂಗಳು ಆಯ್ಕೆ ಪ್ರಕ್ರಿಯೆ ಮುಂದೂಡಲು ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಟಾಂಗ್ ನೀಡುವ ಲೆಕ್ಕಾಚಾರ ಬಿಜೆಪಿಯಲ್ಲಿದ್ದು, ತಮ್ಮದೇ ದಾಳ ಉರುಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ಒಂದು ವೇಳೆ ಜೆಡಿಎಸ್ ಬೆಂಬಲ ನೀಡದಿದ್ದರೆ ಮೇಯರ್ ಆಯ್ಕೆ ಮುಂದಕ್ಕೆ ಹೋಗುವ ಸಾಧ್ಯತೆ ಇದ್ದು, ಪಾಲಿಕೆ ಸದಸ್ಯರ ಹೆಸರು ಗೆಜೆಟ್ ನೋಟಿಪಿಕಿಷನ್ ಆದ ನಂತರ ಪ್ರಾದೇಶಿಕ ಆಯುಕ್ತರು ಮೇಯರ್ ಆಯ್ಕೆಗೆ ದಿನಾಂಕ ನಿಗದಿ ಪಡಿಸುವ ಸಂದರ್ಭದಲ್ಲೇ ಬಿಜೆಪಿ ತನ್ನ ತಂತ್ರಗಾರಿಕೆ ತೋರಿಸುವ ಸಾಧ್ಯತೆ ಇದೆ.

ಇತ್ತ ಜೆಡಿಎಸ್​​ ಪಾಲಿಕೆ ಸದಸ್ಯರು ಇಂದು ಬೆಳಗ್ಗೆ ಮತ್ತೆ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಕೆಲ ದಿನಗಳ ಕಾಲ ಕಾದು ನೋಡೋಣ ಎಂದು ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಬೆಂಗಳೂರಲ್ಲಿ ಉಳಿದುಕೊಂಡಿರುವ ಪಾಲಿಕೆ ಸದಸ್ಯರು ಮುಂದಿನ ನಡೆಯನ್ನು ಸ್ಪಷ್ಟಪಡಿಸಿಕೊಳ್ಳಲು ಕಾಯುತ್ತಿದ್ದಾರೆ.

ಇನ್ನು ಕಲಬುರಗಿ ಕಾಂಗ್ರೆಸ್​ ಕಾರ್ಪೊರೇಟರ್​​ಗಳು ಪಾಲಿಕೆ ಚುನಾವಣಾ ಫಲಿತಾಂಶ ಅತಂತ್ರ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ್ದು, ಬೆಂಗಳೂರಿನ ಖರ್ಗೆ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಅಧಿಕಾರದ ಚುಕ್ಕಾಣಿ ಖಂಡಿತವಾಗಿ ನಮ್ಮ ಕೈಗೆ ಬರಲಿದೆ ಎಂದು ಕಾರ್ಪೊರೇಟರ್​​ಗಳಿಗೆ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದು, ಮೇಯರ್ ಆಯ್ಕೆಗೆ ನೋಟಿಫಿಕೇಷನ್ ಹೊರಡಿಸಿದರೆ ತಂತ್ರ ರೂಪಿಸಲಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್​ ಬೆಂಬಿಲಿಸುವಂತೆ ದೇವೇಗೌಡರ ಜತೆ ಮಾತುಕತೆ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆಯ ಮಾತಿಗೆ ಬೆಲೆ ಸಿಗಲಿದೆ, ಜೆಡಿಎಸ್​ನ ಪಾಲಿಕೆ ಸದಸ್ಯರು ಮುಂದಿನ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಜತೆಗೆ ಕೈ ಜೋಡಿಸುತ್ತಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಿದ್ದಾರೆ.

ಇದನ್ನೂ ಓದಿ:
ಕಲಬುರಗಿ ಮಹಾನಗರ ಪಾಲಿಕೆ ರಿಸಲ್ಟ್ ಅತಂತ್ರ: ಹೆಚ್​ಡಿ ದೇವೇಗೌಡರ ಜೊತೆ ಮೈತ್ರಿ ಮಾಡಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ? 

ಕಲಬುರಗಿ ಮೇಯರ್ ಸ್ಥಾನಕ್ಕೆ ಜೆಡಿಎಸ್ ತಂತ್ರ; ಮುಳುಗುವ ಹಡಗಿನ ಜೊತೆ ಏಕೆ ಬರುತ್ತೀರಿ: ಹೆಚ್​ಡಿ ರೇವಣ್ಣ ವ್ಯಂಗ್ಯ

Click on your DTH Provider to Add TV9 Kannada