
ಕಲಬುರಗಿ, ಮೇ,23: ವೈದ್ಯಕೀಯ ಶಿಕ್ಷಣದ (Medical Education) ದೊಡ್ಡ ಕನಸು ಹೊತ್ತಿದ್ದ 18 ವರ್ಷದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಅತ್ಯಂತ ದಾರುಣ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಮೇ 2ರಂದು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಬರೆದಿದ್ದ ಭಾಗ್ಯಶ್ರೀ (18) ಮೃತಪಟ್ಟ ದುರ್ದೈವಿ. ಕಲಬುರಗಿ ನಗರದ ಕೋರ್ಟ್ ವೃತ್ತದ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಸಂಭವಿಸಿದೆ.
ಮೃತ ಭಾಗ್ಯಶ್ರೀ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 92 ರಷ್ಟು ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಳು. ವೈದ್ಯಕೀಯ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಮತ್ತು ನಿರೀಕ್ಷೆ ಹೊಂದಿದ್ದ ಆಕೆ, ಇತ್ತೀಚೆಗಷ್ಟೇ ನೀಟ್ ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪರೀಕ್ಷೆಯ ಫಲಿತಾಂಶದ ಕುರಿತಾದ ಆತಂಕ ಅಥವಾ ಒತ್ತಡವೇ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ನೀಟ್ ಹಗರಣಕ್ಕೆ ಮತ್ತೊಂದು ಬಲಿ; ಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದಾಗಿದ್ದಕ್ಕೆ 22 ವರ್ಷದ ವಿದ್ಯಾರ್ಥಿ ಸಾವು
ಘಟನೆ ಕುರಿತು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ ಮೃತಳ ತಂದೆ ರಾಜಶೇಖರ್, “ಮಗಳಿಗೂ ನಮಗೂ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ, ಕುಟುಂಬಸ್ಥರ ಜೊತೆ ಅತ್ಯಂತ ಚೆನ್ನಾಗಿಯೇ ಇದ್ದಳು. ಪಿಯುಸಿಯಲ್ಲಿ 92% ಅಂಕ ಬಂದಿತ್ತು, ಇವಾಗ ಆಕೆಯೇ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಾವು ಯಾರ ಮೇಲೆಯೂ ಆಪಾದನೆ ಮಾಡುವುದಿಲ್ಲ ಮತ್ತು ಯಾರ ಮೇಲೂ ದೂರಲು ಹೋಗುವುದಿಲ್ಲ” ಎಂದು ಭಾವುಕರಾಗಿ ಹೇಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Sat, 23 May 26