ಕಲಬುರಗಿ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ, ಪ್ರಾಂಶುಪಾಲರ ಮನೆಗೆಲಸ ಮಾಡಿಸಿದ ಆರೋಪ
1 ವರ್ಷದಿಂದ ಪ್ರಾಂಶುಪಾಲರು ಮಕ್ಕಳನ್ನು ಮನೆಗೆಲಸಕ್ಕೆ ಕರೆದೊಯ್ದಿದ್ದಾರೆ. ಕೆಲಸ ಮಾಡದಿದ್ದರೆ ಗದರುವುದು, ಹೊಡೆಯುವುದು ಮಾಡುತ್ತಿದ್ದರು ಎಂದು ಆರೋಪಿಸಿರುವ ಪೋಕರು, ಜೋಹರ ಜಬೀನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕಲಬುರಗಿ, ಜನವರಿ 15: ಕೋಲಾರ, ಬೆಂಗಳೂರು, ಶಿವಮೊಗ್ಗದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಗಳ ನೆನಪು ಮಾಸುವ ಮುನ್ನವೇ ಇದೀಗ ಕಲಬುರಗಿಯಲ್ಲಿ (Kalaburagi) ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಿಂದ ಶಾಲಾ ಶೌಚಾಲಯ ಸ್ವಚ್ಛ ಮಾಡಿಸಿದ್ದಲ್ಲದೆ, ಪ್ರಾಂಶುಪಾಲರ ಮನೆಗೆಲಸವನ್ನೂ ಮಾಡಿಸಿಕೊಳ್ಳಲಾಗುತ್ತಿದೆ (Students forced to clean toilets) ಎಂದು ಪೋಷಕರು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಕಲಬುರಗಿಯ ಮಾಲಗತ್ತಿ ರಸ್ತೆಯಲ್ಲಿರುವ ಮೌಲಾನಾ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ಹಾಗೂ ಪ್ರಾಂಶುಪಾಲ ಜೋಹರ ಜಬೀನ ಅವರ ವಿರುದ್ಧ ಆರೋಪ ವ್ಯಕ್ತವಾಗಿದೆ.
1 ವರ್ಷದಿಂದ ಪ್ರಾಂಶುಪಾಲರು ಮಕ್ಕಳನ್ನು ಮನೆಗೆಲಸಕ್ಕೆ ಕರೆದೊಯ್ದಿದ್ದಾರೆ. ಕೆಲಸ ಮಾಡದಿದ್ದರೆ ಗದರುವುದು, ಹೊಡೆಯುವುದು ಮಾಡುತ್ತಿದ್ದರು ಎಂದು ಆರೋಪಿಸಿರುವ ಪೋಕರು, ಜೋಹರ ಜಬೀನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಕಲಬುರಗಿಯ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಷಕರ ದೂರಿನಲ್ಲೇನಿದೆ?
ಕಳೆದ ಹಲವು ತಿಂಗಳುಗಳಿಂದ ಜೋಹರ ಜಬೀನ ಕೆಲವು ವಿದ್ಯಾರ್ಥಿಗಳನ್ನು ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಳಸಿದ್ದರೆ, ಇನ್ನು ಕೆಲವರನ್ನು ಅವರ ನಿವಾಸದಲ್ಲಿರುವ ಉದ್ಯಾನವನ್ನು ಸ್ವಚ್ಛಗೊಳಿಸಲು ಸಹ ಕರೆದೊಯ್ಯುತ್ತಿದ್ದರು. ಈ ಬಗ್ಗೆ ತಮ್ಮ ಪುತ್ರ ಮತ್ತು ಇತರ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದರು ಎಂದು ಪೋಷಕರೊಬ್ಬರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವಾರ ಶಾಲೆಗೆ ಹೋಗಿ, ಶಾಲಾ ವಿದ್ಯಾರ್ಥಿಗಳನ್ನು ಇಂತಹ ಕೆಲಸಗಳಿಗೆ ಬಳಸದಂತೆ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದ್ದೆ. ವಿದ್ಯಾರ್ಥಿಗಳನ್ನು ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ದೂರುದಾರರು ಉಲ್ಲೇಖಿಸಿದ್ದಾರೆ.
ಎಚ್ಚರಿಕೆಯ ಹೊರತಾಗಿಯೂ, ಜೋಹರ ಜಬೀನ ಅವರು ಶನಿವಾರ ಅವರ ಮನೆಯ ತೋಟವನ್ನು ಸ್ವಚ್ಛಗೊಳಿಸಲು ಮಗನಿಗೆ ಸೂಚಿಸಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಿದರೆ ತಪ್ಪಿಲ್ಲ ಎಂದ ಸ್ಪೀಕರ್ ಯುಟಿ ಖಾದರ್: ಏನಂದ್ರು ರಾಜಣ್ಣ?
ಕೋಲಾರ, ಬೆಂಗಳೂರು, ಶಿವಮೊಗ್ಗದಲ್ಲಿ ಶಾಲಾ ವಿದ್ಯಾರ್ಥಿಗಳ ಬಳಿ ಶೌಚಾಲಯ ಸ್ವಚ್ಛ ಮಾಡಿಸಿರುವ ಘಟನೆಗಳು ಇತ್ತೀಚೆಗೆ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದವು. ಈ ಘಟನೆಗಳು ನಂತರ ರಾಜಕೀಯ ಆಯಾಮವನ್ನೂ ಪಡೆದಿಕೊಂಡಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ