ಗರ್ಭಿಣಿ ಅಭ್ಯರ್ಥಿಗೆ ಕಲಬುರಗಿಯಲ್ಲೇ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡಿ: KPSCಗೆ ಹೈಕೋರ್ಟ್ ನಿರ್ದೇಶನ
ತುಂಬು ಗರ್ಭಿಣಿ ಮಹಾಲಕ್ಷ್ಮೀ ಎಂಬುವರು ಕರ್ನಾಟಕ ಲೋಕಸೇವಾ ಆಯೋಗದ ಗ್ರೂಪ್ ಎ ಮತ್ತು ಬಿKAS ಪರೀಕ್ಷೆಗೆ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದೂರ ಪ್ರಯಾಣದಿಂದ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ, ಹೈಕೋರ್ಟ್ ಕೆಪಿಎಸ್ಸಿಗೆ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಒದಗಿಸಲು ನಿರ್ದೇಶನ ನೀಡಿದೆ.

ಬೆಂಗಳೂರು, ಏಪ್ರಿಲ್ 09: ಗೆಜೆಟೆಡ್ ಪ್ರೊಬೇಷನರಿ (KAS) ಹುದ್ದೆಗಳ ಗ್ರೂಪ್ ಎ ಮತ್ತು ಬಿ ನೇಮಕಾತಿಗೆ ನಡೆಯುವ ಮುಖ್ಯ ಪರೀಕ್ಷೆಗೆ ತುಂಬು ಗರ್ಭಿಣಿಯೊಬ್ಬರಿಗೆ ಕಲಬುರಗಿಯಲ್ಲೇ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (KPSC) ಹೈಕೋರ್ಟ್ (High Court) ನಿರ್ದೇಶನ ನೀಡಿದೆ.
ಪರೀಕ್ಷಾ ಕೇಂದ್ರವನ್ನು ಕಲಬುರಗಿಯಲ್ಲಿ ವ್ಯವಸ್ಥೆ ಮಾಡಲು ನಿರ್ದೇಶನ ನೀಡುವಂತೆ ಕೋರಿ ಮಹಾಲಕ್ಷ್ಮೀ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಡಾ. ಚಿಲಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.
ಏನಿದು ಪ್ರಕರಣ
ಅರ್ಜಿದಾರರಾದ ಮಹಾಲಕ್ಷ್ಮೀ ಎಂಬುವರು ತುಂಬು ಗರ್ಭಿಣಿಯಾಗಿದ್ದಾರೆ. ಇವರು, ಹೆಚ್ಚು ದೂರು ಪ್ರಯಾಣ ಮಾಡಿದರೇ ಆರೋಗ್ಯ ಮತ್ತು ಭ್ರೂಣದ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರಲಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿಯೇ ಪರೀಕ್ಷಾ ಕೇಂದ್ರ ವ್ಯವಸ್ಥೆ ಮಾಡುವಂತೆ ಕೆಪಿಎಸ್ಸಿಗೆ ನಿರ್ದೇಶನ ನೀಡಬೇಕೆಂದು ಕೋರಿ ಮಹಾಲಕ್ಷ್ಮೀ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರತ್ಯೇಕ ಕೇಂದ್ರ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ: ಕೆಪಿಎಸ್ಸಿ
ಈ ಅರ್ಜಿಗೆ ಕೆಪಿಎಸ್ಸಿ ಆಕ್ಷೇಪ ವ್ಯಕ್ತಪಡಿಸಿತ್ತು. ಬೆಂಗಳೂರು ಮತ್ತು ಧಾರವಾಡದಲ್ಲಿ ಮುಖ್ಯ ಪರೀಕ್ಷೆ ಕೇಂದ್ರಗಳಿವೆ. ಹೀಗಾಗಿ, ಈ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಬೇಕು. ಕಲಬುರಗಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿತ್ತು.
ಅಲ್ಲದೇ, ಅರ್ಜಿ ವಿಚಾರಣೆ ವೇಳೆ ಕೆಪಿಎಸ್ಸಿ ಪರ ವಕೀಲರು, ಓರ್ವ ಅಭ್ಯರ್ಥಿಗಾಗಿ ಪರೀಕ್ಷಾ ಕೇಂದ್ರ ಪ್ರಾರಂಭಿಸುವ ಸಲುವಾಗಿ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡುವುದಕ್ಕೆ ಹಣ ಖರ್ಚು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಇದನ್ನೂ ಓದಿ: ಚೆಕ್‌ಬೌನ್ಸ್ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರಗೆ ಶಿಕ್ಷೆ ವಿಧಿಸಿದ ಕೋರ್ಟ್
ಚಾಟಿ ಬೀಸಿದ ಕೋರ್ಟ್
“ಚುನಾವಣೆ, ಉಪಚುನಾವಣೆಗೆಂದು ತೆರಿಗೆ ಹಣ ವ್ಯರ್ಥ ಮಾಡಲಾಗುತ್ತದೆ. ದೂರದೃಷ್ಟಿಯ ಕೊರತೆಯಿಂದ ಕೋಟ್ಯಂತರ ತೆರಿಗೆ ಹಣ ಖರ್ಚಾಗುತ್ತದೆ. ಗರ್ಭಿಣಿ ಅಭ್ಯರ್ಥಿಗಾಗಿ ಕಲಬುರಗಿಯಲ್ಲೇ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸುವಂತೆ” ನ್ಯಾ. ಡಾ.ಚಿಲಕೂರು ಸುಮಲತಾ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Wed, 9 April 25