ಚೆಕ್‌ಬೌನ್ಸ್ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರಗೆ ಶಿಕ್ಷೆ ವಿಧಿಸಿದ ಕೋರ್ಟ್
ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿತ್ತು. ಈ ಹಗರಣ ಸಂಬಂಧ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ಸಹ ನೀಡಿದ್ದಾರೆ. ಇದೀಗ, ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಪ್ರಕರಣವೊಂದರಲ್ಲಿ ಶಿಕ್ಷೆ ಪ್ರಕಟವಾಗಿದೆ.

ಬೆಂಗಳೂರು, ಏಪ್ರಿಲ್ 09: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ (Valmiki Corporation scam) ಕೇಸ್ನ ಆರೋಪಿ, ಮಾಜಿ ಸಚಿವ ಬಿ.ನಾಗೇಂದ್ರಗೆ (B Nagendra) ಚೆಕ್‌ಬೌನ್ಸ್ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ಚೆಕ್‌ಬೌನ್ಸ್ ಪ್ರಕರಣದಲ್ಲಿ ಬಿ.ನಾಗೇಂದ್ರ ಸೇರಿದಂತೆ ಮೂವರು ಆರೋಪಿಗಳು 1 ಕೋಟಿ 25 ಲಕ್ಷ ರೂ. ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಒಂದು ವೇಳೆ ದಂಡ ಪಾವತಿಸದಿದ್ದರೆ ಒಂದು ವರ್ಷ ಸೆರೆವಾಸ ಅನುಭವಿಸಬೇಕೆಂದು 42ನೇ ಎಸಿಜೆಎಂ ನ್ಯಾಯಾಧೀಶರಾದ ಕೆ.ಎನ್.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ
ದೂರುದಾರ ವಿಎಸ್‌ಎಲ್ ಸ್ಟೀಲ್ಸ್ ಲಿಮಿಟೆಡ್ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಅನಿಲ್ ರಾಜಶೇಖರ್ ಚುಂಡೂರು ಭಾಸ್ಕರ್ ಪಾಲುದಾರಿಕೆಯ ಬಿ.ಸಿ. ಇನ್ಫ್ರಾಸ್ಟ್ರಕ್ಚರ್ ಅಂಡ್ ರಿಸೋರ್ಸ್ ಕಂಪನಿ ನಡುವೆ 2013 ರಿಂದಲೂ ಹಣಕಾಸು ವಿವಾದವಿತ್ತು. ವಿಎಸ್‌ಎಲ್ ಕಂಪೆನಿ ಪರವಾಗಿ ಕೋರ್ಟ್ ಆದೇಶ ನೀಡಿದ್ದು, ಬಿ. ನಾಗೇಂದ್ರ ಪಾಲುದಾರಿಕೆಯ ಕಂಪೆನಿ ಒಟ್ಟು 2 ಕೋಟಿ 53 ಲಕ್ಷ ಪಾವತಿಸಬೇಕಿತ್ತು. ಇದರ ಭಾಗವಾಗಿ 1 ಕೋಟಿ ರೂಪಾಯಿಯ ಚೆಕ್ ಅನ್ನು ನೀಡಲಾಗಿತ್ತು.
ಇದನ್ನೂ ಓದಿ: ಬಿ.ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ: ಮತ್ತೆ ಸಚಿವರಾಗಲು ತುದಿಗಾಲಲ್ಲಿ ನಿಂತಿದ್ದ ಶಾಸಕಗೆ ಶಾಕ್
ಆದರೆ, 2022 ರಲ್ಲಿ ಚೆಕ್‌ಬೌನ್ಸ್ ಆದ ಹಿನ್ನಲೆಯಲ್ಲಿ ವಿಎಸ್‌ಎಲ್ ಸ್ಟೀಲ್ಸ್ ಲಿಮಿಟೆಡ್ ಕೇಸ್ ದಾಖಲಿಸಿತ್ತು. ಸಾಕ್ಷ್ಯ ವಿಚಾರಣೆ ಬಳಿಕ ಕೋರ್ಟ್ ತೀರ್ಪು ನೀಡಿದ್ದು, 1 ಕೋಟಿ 23 ಲಕ್ಷ ದಂಡ ಪಾವತಿಸುವಂತೆ ಆದೇಶ ನೀಡಿದೆ. ಇದರಲ್ಲಿ 10 ಸಾವಿರ ಸರ್ಕಾರಕ್ಕೆ ಉಳಿದ ಹಣ ದೂರುದಾರ ಕಂಪೆನಿಗೆ ಪಾವತಿಸುವಂತೆ ಕೋರ್ಟ್ ಆದೇಶ ನೀಡಿದೆ. ತಪ್ಪಿದಲ್ಲಿ 1 ವರ್ಷ ಸೆರೆವಾಸದ ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ಕೋರ್ಟ್ ಸ್ಪಷ್ಟಪಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Wed, 9 April 25