ಪರಿಸರ ನಿಯಮಾವಳಿ ಉಲ್ಲಂಘನೆ ಆರೋಪ: ಯತ್ನಾಳ್ ಸಕ್ಕರೆ ಕಾರ್ಖಾನೆ ಮುಚ್ಚಲು ಕೆಎಸ್‌ಪಿಸಿಬಿ ಆದೇಶ
ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿನ್ನಲೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಸಿದ್ದ ಶ್ರೀ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಲು ಆದೇಶ ನೀಡಲಾಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಈ ಶುಗರ್ ಫ್ಯಾಕ್ಟರಿ ಬಂದ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.
ಕಲಬುರಗಿ, ಜ.27: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಒಡೆತನದ ಶುಗರ್ ಫ್ಯಾಕ್ಟರಿ ಬಂದ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಶುಗರ್ ಫ್ಯಾಕ್ಟರಿ ಮತ್ತು ಏಥೆನಾಲ್ ಘಟಕಕ್ಕೆ ಬೀಗ ಹಾಕಲು ಆದೇಶಿಸಲಾಗಿದೆ. ಕಾರ್ಖಾನೆಯ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.
ಅಲ್ಲದೇ ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿನ್ನಲೆ ಬೀಗ ಜಡಿಯುವಂತೆ ಮಂಡಳಿ ಆದೇಶ ಹೊರಡಿಸಿದೆ. ಫ್ಯಾಕ್ಟರಿಗೆ ನೀಡಿರುವ ವಿದ್ಯುತ್, ನೀರಿನ ಸಂರ್ಪಕ ಕಡಿತಗೊಳಿಸುವಂತೆ ಆದೇಶ ಹೊರಡಿಸಿದೆ. ಈ ಬಗ್ಗೆ ಕೆಎಸ್‌ಪಿಸಿಬಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಿದೆ.
ಕಳೆದ ವಾರ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಮಂಡಳಿ, ಸಕ್ಕರೆ ಕಾರ್ಖಾನೆಗಳನ್ನು ಮುಚ್ಚುವಂತೆ ನೋಟಿಸ್ ಜಾರಿಗೊಳಿಸಿದೆ. ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಹುಮ್ನಾಬಾದ್‌ನ ಪ್ರಸನ್ನ ಪ್ರಿ ಪ್ರೊಸೆಸಿಂಗ್ ಪ್ರೈಧಿವೇಟ್ ಲಿಮಿಟೆಡ್ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿಯ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.
ಇದನ್ನೂ ಓದಿ: ಸಂಚಾರ ದಟ್ಟಣೆ ಕಂಟ್ರೋಲ್ಗೆ ಹೊಸ ಪ್ಲಾನ್; ಇನ್ಮೇಲೆ ಪ್ರತಿ ದಿನವೂ ಹಾರಾಡಲಿವೆ ಡ್ರೋನ್ಗಳು
ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿಯುವುದು ಮಾತ್ರವಲ್ಲದೆ, ಅವುಗಳ ನೋಂದಣಿಗೆ ಸಹಾಯ ಮಾಡಿದ ಅಧಿಕಾರಿಗಳ ವಿರುದ್ದವೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೆಎಸ್‌ಪಿಸಿಬಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಎರಡು ಕಾರ್ಖಾನೆಗಳಲ್ಲಿ ಅವೈಜ್ಞಾನಿಕ ನಿರ್ವಹಣೆ ಸೇರಿದಂತೆ ಹಲವು ಲೋಪಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:33 am, Sat, 27 January 24