ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆ: ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಇಬ್ಬರು ಕನ್ನಡಿಗರನ್ನು ರಕ್ಷಣಾಪಡೆ ಸುರಕ್ಷಿತವಾಗಿ ರಕ್ಷಿಸಿದೆ. ಮಲ್ಲಿನಾಥ್ ಕೊಲಕುಂದಿ ಹಾಗೂ ಸಂಗಮೇಶ್ ಕನಕಪುರ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಬ್ಬರನ್ನೂ ದೆಹಲಿಗೆ ಕರೆತಂದು ಅಲ್ಲಿನ ಕರ್ನಾಟಕ ಭವನದಲ್ಲಿ ತಂಗಲು ವ್ಯವಸ್ಥೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.

ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆ: ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಕನ್ನಡಿಗರ ರಕ್ಷಣೆ
Image Credit source: tv9
Edited By:

Updated on: Aug 27, 2026 | 10:53 AM

ಮುಖ್ಯಾಂಶಗಳು

  • ನೇಪಾಳ ಪ್ರವಾಹದಲ್ಲಿ ಇಬ್ಬರು ಕನ್ನಡಿಗರ ರಕ್ಷಣೆ
  • ಕಲಬುರಗಿ ಮೂಲದ ಇಬ್ಬರೂ ಸುರಕ್ಷಿತ
  • ದೆಹಲಿಗೆ ಕರೆತರಲು ಸರ್ಕಾರ ಸಿದ್ಧತೆ

ಕಲಬುರಗಿ, ಆಗಸ್ಟ್ 27: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ (Nepal Flood) ನಡುವೆ ಸಿಲುಕಿದ್ದ ಕಲಬುರಗಿ ಜಿಲ್ಲೆಯ ಇಬ್ಬರು ಕನ್ನಡಿಗರನ್ನು ರಕ್ಷಣಾಪಡೆ ಸುರಕ್ಷಿತವಾಗಿ ರಕ್ಷಿಸಿ ಸ್ಥಳಾಂತರಿಸಿದೆ. ಚಿಂಚೋಳಿ ತಾಲ್ಲೂಕಿನ ಮಲ್ಲಿನಾಥ್ ಕೊಲಕುಂದಿ ಮತ್ತು ಸಂಗಮೇಶ್ ಕನಕಪುರ ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ಇಬ್ಬರನ್ನೂ ಸಂಪರ್ಕಿಸಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಇಬ್ಬರೂ ಸುರಕ್ಷಿತವಾಗಿದ್ದು, ಅವರನ್ನು ನೇಪಾಳದಿಂದ ದೆಹಲಿಗೆ ಕರೆತರಲು ಕರ್ನಾಟಕ ಸರ್ಕಾರ ವ್ಯವಸ್ಥೆ ಮಾಡಲಿದೆ. ದೆಹಲಿಯ ಕರ್ನಾಟಕ ಭವನದಲ್ಲಿ ಇಬ್ಬರಿಗೂ ಅಗತ್ಯ ವಸತಿ ಹಾಗೂ ಇತರ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಹೈದರಾಬಾದ್‌ನ 23 ಮಂದಿ ಜೊತೆ ನೇಪಾಳಕ್ಕೆ ಪ್ರಯಾಣ

ಮಲ್ಲಿನಾಥ್ ಮತ್ತು ಸಂಗಮೇಶ್ ಸೇರಿದಂತೆ ಕಲಬುರಗಿ ಜಿಲ್ಲೆಯ ಇಬ್ಬರು, ಹೈದರಾಬಾದ್‌ನ 23 ಮಂದಿಯೊಂದಿಗೆ ಒಟ್ಟು 25 ಜನರು ನೇಪಾಳಕ್ಕೆ ತೆರಳಿದ್ದರು ಎನ್ನಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಅವರು ಸಿಲುಕಿಕೊಂಡಿರುವ ಮಾಹಿತಿ ಲಭ್ಯವಾದ ಬಳಿಕ ಕರ್ನಾಟಕದ ವಿಪತ್ತು ನಿರ್ವಹಣಾ ಸಂಸ್ಥೆ ಸಂಪರ್ಕಿಸಿ ರಕ್ಷಣಾ ಕಾರ್ಯಕ್ಕೆ ಮುಂದಾಗಿತ್ತು. ಇದೀಗ ಇಬ್ಬರೂ ಸುರಕ್ಷಿತ ಸ್ಥಳಕ್ಕೆ ತಲುಪಿರುವುದು ಕುಟುಂಬಸ್ಥರು ಹಾಗೂ ಅಧಿಕಾರಿಗಳಿಗೆ ನೆಮ್ಮದಿ ತಂದಿದೆ.

ಗಂಡಕ್ ನದಿ ನೀರಿನ ಮಟ್ಟ ದಿಢೀರ್ ಏರಿಕೆ

ನೇಪಾಳದಲ್ಲಿ ಉಂಟಾಗಿರುವ ಜಲಪ್ರಳಯದ ಪರಿಣಾಮ ಭಾರತದ ಗಂಡಕ್ ನದಿಯ ನೀರಿನ ಮಟ್ಟವೂ ದಿಢೀರ್ ಏರಿಕೆಯಾಗಿದೆ. ಇದರಿಂದ ಬಿಹಾರ ಹಾಗೂ ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಗಂಡಕ್ ನದಿ ಪಾತ್ರದಲ್ಲಿ ಈಗಾಗಲೇ 20 NDRF ತಂಡಗಳನ್ನು ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ತ್ರಿಶೂಲಿ ನದಿಯ ಮೂಲಕ ಭಾರತ ಪ್ರವೇಶಿಸುವ ಗಂಡಕ್ ನದಿಯಿಂದ ಪಶ್ಚಿಮ ಚಂಪಾರಣ್, ಮುಜಫರ್‌ಪುರ, ಕುಶಿನಗರ ಮತ್ತು ಮಹಾರಾಜ್‌ಗಂಜ್ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ ತೀರದ ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯವೂ ನಡೆಯುತ್ತಿದೆ.

ಮತ್ತೊಂದು ಪ್ರವಾಹದ ಆತಂಕ

ನೇಪಾಳದಲ್ಲಿ ಮತ್ತೊಂದು ಹಂತದ ಪ್ರವಾಹದ ಮುನ್ಸೂಚನೆ ಸಿಕ್ಕಿರುವುದು ಆತಂಕ ಹೆಚ್ಚಿಸಿದೆ. ಹಿಮ ಮತ್ತು ಬಂಡೆಗಳು ಕುಸಿದು ನದಿಯ ಮೇಲ್ಭಾಗದಲ್ಲಿ ಸಿಲುಕಿಕೊಂಡ ಪರಿಣಾಮ ಕೃತಕ ಡ್ಯಾಂ ರೂಪುಗೊಂಡಿದೆ ಎನ್ನಲಾಗಿದೆ. ಈ ಕೃತಕ ಜಲಾಶಯ ಯಾವುದೇ ಕ್ಷಣದಲ್ಲಿ ಒಡೆಯುವ ಸಾಧ್ಯತೆಯಿದ್ದು, ಅದು ಮತ್ತಷ್ಟು ಭೀಕರ ಪ್ರವಾಹಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ವೇಗವಾಗಿ ಕರಗುತ್ತಿರುವ ಹಿಮಾಲಯ ನೀಡುತ್ತಿದೆ ಗಂಭೀರ ಎಚ್ಚರಿಕೆ: ನೇಪಾಳದಲ್ಲಿ ಬಾಂಬ್​​ನಂತೆ ಅಪ್ಪಳಿಸಿದ ಹಿಮದ ತುಂಡುಗಳು

ಅಂತಾರಾಷ್ಟ್ರೀಯ ಸಮಗ್ರ ಬೆಟ್ಟಗುಡ್ಡಗಳ ಅಭಿವೃದ್ಧಿ ಕೇಂದ್ರ (ICIMOD) ಕೂಡ ಈ ಕುರಿತು ನೇಪಾಳಕ್ಕೆ ಎಚ್ಚರಿಕೆ ನೀಡಿದೆ. ಲಹೆಂದಾ ಕೋಲಾ ನದಿ ಮೇಲ್ಭಾಗದಲ್ಲಿ ನಿರ್ಮಾಣವಾಗಿರುವ ಕೃತಕ ಡ್ಯಾಂನ ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ. ಬೋತೆ ಖೋಶಿ ಮತ್ತು ತ್ರಿಶೂಲಿ ನದಿ ಪಾತ್ರಗಳಲ್ಲಿ ಹೈ ಅಲರ್ಟ್ ಮುಂದುವರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us