ಈ ಗ್ರಾಮದಲ್ಲಿ ಮಂಚ, ಹಾಸಿಗೆ, ಛತ್ರಿ ಏನೂ ಬಳಸುವುದಿಲ್ಲ; ಈ ದೇವಿಗೆ ವಿರುದ್ಧವಾಗಿ ಊರ ಯಾವ ಜನರೂ ನಡೆಯುವುದಿಲ್ಲ
ಆ ಊರಿನ ಜನ ಮಲಗೋಕೆ ಮಂಚ ಬಳಸಲ್ಲ.. ಹಾಸಿಗೆ ಯೂಸ್ ಮಾಡಲ್ಲ.. ಛತ್ರಿಯಂತೂ ಖರೀದಿಸೋದೆ ಇಲ್ಲ. ತಲಾತಲಾಂತರಗಳಿಂದ ಆ ಗ್ರಾಮದಲ್ಲಿ ಆಚರಿಸುಕೊಂಡು ಬಂದಿರುವ ಪದ್ಧತಿ ಇದು. ಅಷ್ಟಕ್ಕೂ ಆ ಆಚರಣೆ ಹಿಂದಿರುವ ವಿಶೇಷತೆಯಾದ್ರೂ ಏನು.. ಒಂದು ವೇಳೆ ಹಾಸಿಗೆ ಮಂಚ ಬಳಸಿದ್ರೆ ಏನಾಗುತ್ತೆ ಎಂಬ ಅಚ್ಚರಿಯ ಸಂಗತಿಗಳನ್ನು ಇಲ್ಲಿ ವಿವರಿಸಿದ್ದೇವೆ.
ಕಲಬುರಗಿ: ಬೆಡ್ ಬೇಕೆನ್ನೋ ಆಸೆಯೂ ಇಲ್ಲ.. ಮಂಚವಿಲ್ಲ ಅನ್ನೋ ಕೊರಗೂ ಇಲ್ಲ.. ಚಾಪೆ ಮೇಲೆಯೇ ಸುಖನಿದ್ರೆಗೆ ಜಾರುತ್ತಾರೆ. ಅದೆಷ್ಟೇ ಸಂಪತ್ತು ಇದ್ರೂ ನೆಲದ ಮೇಲೆಯೇ ಮಲಗುತ್ತಾರೆ. ಊರಿಗೆ ನೆಂಟರಿಷ್ಟರು ಬಂದ್ರೂ ಅವ್ರೂ ಕೆಳಗೇ ಮಲಗುತ್ತಾರೆ. ಅಷ್ಟೇ ಯಾಕೆ ಊರಿನ ಯಾವುದೇ ಲಾಡ್ಜ್.. ಹೋಟೆಲ್ನಲ್ಲೂ ಮಂಚವಿಲ್ಲ. ಅಷ್ಟಕ್ಕೂ ಇಲ್ಲಿನ ಜನ ನೆಲದ ಮೇಲೆ ಮಲಗೋಕೆ ಕಾರಣ ಭಾಗ್ಯವಂತಿ ದೇವಿ.
ಅಷ್ಟಕ್ಕೂ ಇಂತಹವೊಂದು ವಿಶಿಷ್ಟ ಆಚರಣೆ ಇರುವುದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದಲ್ಲಿ. ಈ ಊರಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಲಾಡ್ಜ್ ಗಳಿವೆ.. ಹೋಟೆಲ್‌ಗಳಿವೆ… ಎಲ್ಲಿಯೂ ಕೂಡ ಮಂಚ ಹಾಕಲ್ಲ, ಹಾಸಿಗೆ ಬಳಸಲ್ಲ. ಗ್ರಾಮಸ್ಥರಷ್ಟೇ ಅಲ್ಲ ಈ ಊರಿಗೆ ಯಾರೇ ಬಂದ್ರೂ ಅಷ್ಟೇ ನೆಲದ ಮೇಲೆ ಚಾಪೆ ಹಾಕಿಕೊಂಡೇ ಮಲಗಬೇಕು.. ಇನ್ನು ಗ್ರಾಮಕ್ಕೆ ಮದುವೆಯಾಗಿ ಬರೋ ಹೆಣ್ಣು ಮಕ್ಕಳು ಅಷ್ಟೇ ಅಪ್ಪನ ಮನೆಯಿಂದ ಗಿಫ್ಟ್ ಅಂತಾ ಮಂಚ, ಹಾಸಿಗೆ ತರುವಂತಿಲ್ಲ.
ಹಾಸಿಗೆ, ಮಂಚ ಬಳಸದೇ ಇರೋ ಸಂಪ್ರದಾಯಕ್ಕೆ ಕಾರಣ.. ಇದೇ ಗ್ರಾಮದಲ್ಲಿರುವ ಭಾಗ್ಯವಂತಿ ದೇವಿ. ಇಷ್ಟಾರ್ಥಗಳನ್ನ ಸಿದ್ಧಿಸೋ ಈ ಭಾಗ್ಯವಂತಿ ದೇವಿ ರಾತ್ರಿ ಸಮಯದಲ್ಲಿ ಮಂಚದ ಮೇಲೆ ಹಾಸಿಗೆ ಹಾಸಿಕೊಂಡು ಮಲಗುತ್ತಾಳೆ ಎಂಬ ಪ್ರತೀತಿ ಇದೆ.. ಹಾಗಾಗಿ ಗ್ರಾಮಸ್ಥರು ತಮ್ಮೂರಿನ ದೇವತೆ ಹಾಸಿಗೆಯಿರುವ ಮಂಚದ ಮೇಲೆ ಮಲಗಬೇಕಾದ್ರೆ ನಾವು ಕೂಡ ಆ ದೇವಿಯಂತೆ ಹಾಸಿಗೆ ಇರುವ ಮಂಚದ ಮೇಲೆ ಮಲಗೋದು ಸರಿಯಲ್ಲ ಅಂತಾ ಕೇವಲ ಚಾಪೆ ಹಾಸಿಕೊಂಡು ಮಲಗುತ್ತಿದ್ದಾರಂತೆ. ಹಾಗೇನಾದ್ರೂ ಹಾಸಿಗೆ ಮೇಲೆ ಮಲಗಿದ್ರೆ ಏನಾದ್ರೂ ಕೇಡು ಸಂಭವಿಸುತ್ತೆ ಅನ್ನೋ ನಂಬಿಕೆ ಇದೆ.
ಹಾಸಿಗೆ ಮಂಚ ಮಾತ್ರವಲ್ಲ.. ಈ ಊರಿನ ಜನ ಛತ್ರಿಯನ್ನು ಕೂಡ ಖರೀದಿಸುವುದಿಲ್ಲವಂತೆ. ಯಾಕಂದ್ರೆ ಭಾಗ್ಯವಂತಿ ದೇವಿಯ ಮೇಲೆ ಛತ್ರಿ ಇರೋದ್ರಿಂದ ಗ್ರಾಮಸ್ಥರು ಛತ್ರಿಯನ್ನು ಸಹ ಬಳಸುವುದಿಲ್ಲವಂತೆ. ಒಂದು ವೇಳೆ ಹಾಸಿಗೆ… ಮಂಚ.. ಛತ್ರಿ ಏನಾದ್ರೂ ಬಳಸಿದ್ರೆ ಅಂತವರು ಏನಾದ್ರೂ ಸಮಸ್ಯೆಯಲ್ಲಿ ಸಿಲುಕುತ್ತಾರಂತೆ.
ಅಂದಹಾಗೆ ಇಲ್ಲಿನ ಜನರಿಗೆ ಮಂಚ ಬಳಸಬೇಡಿ, ಹಾಸಿಗೆ ಹಾಕೋಬೇಡಿ.. ಛತ್ರಿ ಬಳಕೆ ಮಾಡ್ಬೇಡಿ ಅಂತಾ ಯಾರೂ ಆದೇಶಿಸಿಲ್ಲ.. ದೇವಿಯೂ ಬಂದು ಹೇಳಿಲ್ಲ.. ಆದ್ರೆ ಗ್ರಾಮಸ್ಥರೇ ಸ್ವಯಂಪ್ರೇರಣೆಯಿಂದ ಇಂತಹದೊಂದು ಪದ್ಧತಿಯನ್ನ ತಲಾತಲಾಂತರಗಳಿಂದ ಆಚರಿಸಿಕೊಂಡು ಬರ್ತಿರೋದು ನಿಜಕ್ಕೂ ಅಚ್ಚರಿ.
ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ: Anjaneya Swamy: ಆಂಜನೇಯ ಸ್ವಾಮಿಗಾಗಿ ಒಂದು ದೀಪ ಹಚ್ಚಿ, ನಿಮ್ಮ ಜೀವನ ತೇಜೋಮಯಗೊಳ್ಳುತ್ತದೆ
Published On - 8:58 am, Wed, 25 August 21