Kalaburagi News: ಅದ್ದೂರಿಯಾಗಿ ಕತ್ತೆಗಳಿಗೆ ಮದುವೆ ಮಾಡಿದ ಜನ; ವಿವಾಹವಾಗುತ್ತಿದ್ದಂತೆ ನಡೆಯಿತು ಪವಾಡ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 23, 2023 | 10:54 PM

ಆ ಇಡೀ ಗ್ರಾಮದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಜನರು ತಮ್ಮ ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಿದ್ದು, ಅದ್ದೂರಿಯಾಗಿ ಕತ್ತೆಗಳ ಮದುವೆ ಕೂಡ ನಡೆಯಿತು. ಅಷ್ಟೇ ಅಲ್ಲದೇ ಊಟಕ್ಕೆ ಸಿಹಿ, ಅನ್ನ, ಸಾರು, ಪಲ್ಯ ಕೂಡ ಮಾಡಿಸಲಾಗಿತ್ತು. ಈ ವೇಳೆ ಅನೇಕರು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಅಷ್ಟಕ್ಕೂ ಕತ್ತೆಗಳ ಮದುವೆ ಮಾಡಿದ್ದು ಯಾಕೆ ಅಂತೀರಾ? ಇಲ್ಲಿದೆ ನೋಡಿ.

Kalaburagi News: ಅದ್ದೂರಿಯಾಗಿ ಕತ್ತೆಗಳಿಗೆ ಮದುವೆ ಮಾಡಿದ ಜನ; ವಿವಾಹವಾಗುತ್ತಿದ್ದಂತೆ ನಡೆಯಿತು ಪವಾಡ!
ಕತ್ತೆಗಳ ಮದುವೆ
Follow us on

ಕಲಬುರಗಿ: ಜಿಲ್ಲೆಯ ಅಫಜಲಪುರ(Afzalpur) ತಾಲೂಕಿನ ಚಿಂಚೋಳಿ ಗ್ರಾಮದ ಜನರು, ಇಂದು(ಜೂ.23) ಗ್ರಾಮದಲ್ಲಿ ಅದ್ದೂರಿಯಾಗಿ ಕತ್ತೆಗಳ ಮದುವೆ(Donkeys Marrigage) ಮಾಡಿ ಮೆರವಣಿಗೆ ಮಾಡಿದರು. ಮಹಾರಾಷ್ಟ್ರದ ಕುಂಬಾರಿ ಎನ್ನುವ ಗ್ರಾಮದಿಂದ 12 ಸಾವಿರ ಹಣ ನೀಡಿ ಒಂದು ಹೆಣ್ಣು ಮತ್ತು ಒಂದು ಗಂಡು ಕತ್ತೆ ಖರೀದಿಸಿ ತಂದಿದ್ದ ಗ್ರಾಮಸ್ಥರು, ಇಂದು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕತ್ತೆಗಳಿಗೆ ಮದುವೆ ಮಾಡಿದ್ರು. ಗಂಡು ಕತ್ತೆಗೆ ಪಂಚೆ ಉಡಿಸಿ, ಹೊಸ ಬಟ್ಟೆ ತೊಡಿಸಿದ್ದ ಗ್ರಾಮಸ್ಥರು, ಇತ್ತ ಹೆಣ್ಣು ಕತ್ತೆಗೆ ಸೀರೆ ಉಡಿಸಿ ಅಲಂಕಾರ ಮಾಡಿದ್ರು. ಇಡೀ ಗ್ರಾಮದ ಜನರು ಮುಂದೆ ನಿಂತು, ತಮ್ಮ ಮನೆಯಲ್ಲಿನ ಮಕ್ಕಳ ಮದುವೆಯಂತೆ ಕತ್ತೆಗಳಿಗೆ ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿಸಿ, ಮದುವೆ ಮಾಡಿ ಸಂಭ್ರಮಿಸಿದರು. ಮದುವೆ ನಂತರ ಇಡೀ ಗ್ರಾಮದ ಜನರು, ಮದುವೆ ಊಟವನ್ನು ಕೂಡ ಮಾಡಿದ್ದಾರೆ.

ಕತ್ತೆಗಳಿಗೆ ಮದುವೆ ಯಾಕೆ?

ಬಿಸಿಲನಾಡು ಕಲಬುರಗಿ ಜಿಲ್ಲೆಯ ಜನರ ಮೇಲೆ ವರುಣದೇವ ಮುನಿಸಿಕೊಂಡಿದ್ದು, ಇದರಿಂದ ಆದಷ್ಟು ಬೇಗ ಮಳೆಯಾಗಲಿ ಎಂದು ಚಿಂಚೋಳಿ ಗ್ರಾಮದ ಜನರು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಹೌದು ಜೂನ್ ತಿಂಗಳು ಮುಗಿಯಲು ಬಂದರೂ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಹನಿ ಮಳೆಯಾಗಿಲ್ಲ. ಹೀಗಾಗಿ ರೈತಾಪಿ ಜನರು, ಬಿತ್ತನೆ ಮಾಡಲಿಕ್ಕಾಗದೇ ಪರದಾಡುತ್ತಿದ್ದಾರೆ. ಜನರು ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ. ಜಾನುವಾರುಗಳಿಗೆ ಕೂಡ ನೀರು ಸಿಗುತ್ತಿಲ್ಲ. ಎಲ್ಲಡೆ ಬರದ ಛಾಯೆ ಮೂಡಿದೆ.

ಇದನ್ನೂ ಓದಿ:Uttara Kannada: ವರುಣನ ಕೃಪೆಗಾಗಿ ರೈತ ಮಹಿಳೆಯರಿಂದ ವಿಶಿಷ್ಟ ಆಚರಣೆ; ಕಪ್ಪೆಗಳ ಮದುವೆ ಮಾಡಿ ಪ್ರಾರ್ಥನೆ, ವಿಡಿಯೋ ವೈರಲ್

ಇದು ಜನರ ಆತಂಕವನ್ನು ಹೆಚ್ಚಿಸಿದೆ. ಮುಗಿಲು ನೋಡುತ್ತಾ, ಓ ಮೋಡಗಳೆ ನಿಲ್ಲಿ, ಮಳೆ ಸುರಿಸಿ ಎಂದು ಮೋಡಗಳನ್ನು ನೋಡುತ್ತಾ ಕುಳಿತಿರುವ ಜನ, ಇದೀಗ ಮಳೆಗಾಗಿ ಕೆಲವಡೆ ದೇವರ ಮೊರೆ ಹೋಗಿದ್ದರೆ, ಇನ್ನು ಕೆಲವಡೆ ಕತ್ತೆಗಳಿಗೆ ಮದುವೆ ಮಾಡಲಾಗುತ್ತದೆ. ಹೌದು ಕತ್ತೆಗಳಿಗೆ ಶಾಶ್ತ್ರೋಕ್ತವಾಗಿ ಮದುವೆ ಮಾಡಿದರೆ, ಮಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮೀಣ ಭಾಗದ ಜನರಲ್ಲಿದೆ. ಹೀಗಾಗಿ ಚಿಂಚೋಳಿ ಗ್ರಾಮದ ಜನರು ಕತ್ತೆಗಳಿಗೆ ಮದುವೆ ಮಾಡಿದ್ದಾರೆ.

ಮದುವೆ ನಂತರ ನಡೆಯಿತು ಪವಾಡ!

ಇನ್ನು ಕತ್ತೆಗಳಿಗೆ ಮದುವೆ ಮಾಡಿದರೆ ಮಳೆಯಾಗುತ್ತೆ ಅನ್ನೋದು ಜನರು ನಂಬಿಕೆ. ಚಿಂಚೋಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ಕತ್ತೆಗಳಿಗೆ ಮದುವೆ ಮಾಡಲಾಗಿತ್ತು. ಕತ್ತೆಗಳಿಗೆ ಮದುವೆಯಾದ ಕೆಲವೇ ಗಂಟೆಗಳಿಗೆ ಪವಾಡ ಕೂಡ ನಡೆಯಿತು. ಕಾಕತಾಳಿಯವೋ ಏನು, ಚಿಂಚೋಳಿ ಗ್ರಾಮದಲ್ಲಿ ಇಂದು ಸಂಜೆ ತುಂತುರು ಮಳೆ ಕೂಡ ಆಗಿದೆ. ಮಳೆ ಬರ್ತಿದ್ದಂತೆ, ಇದು ಕತ್ತೆಗಳಿಗೆ ಮದುವೆ ಮಾಡಿದ ಇಂಪ್ಯಾಕ್ಟ್ ಎಂದು ಜನರು ಖುಷಿ ಪಟ್ಟರು.
ನಮ್ಮೂರಲ್ಲಿ ಕಳೆದ ಕೆಲ ದಿನಗಳಿಂದ ಹನಿ ಮಳೆ ಕೂಡ ಆಗಿರಲಿಲ್ಲ. ಆದರೆ, ಇಂದು ಕತ್ತೆಗಳಿಗೆ ಮದುವೆ ಮಾಡಿದ್ರೆ ಮಳೆಯಾಗುತ್ತೆ ಅನ್ನೋ ನಂಬಿಕೆಯಿಂದ ಗ್ರಾಮದ ಜನರೆಲ್ಲ ಸೇರಿ ಮದುವೆ ಮಾಡಿದ್ದೇವೆ. ಕತ್ತೆಗಳ ಮದುವೆ ನಂತರ ಮಳೆ ಕೂಡಾ ಆಗಿದ್ದು, ಇದು ಮೂಡನಂಬಿಕೆಗಿಂತ ಹಳ್ಳಿ ಜನರ ನಂಬಿಕೆ ಎಂದು ಗ್ರಾಮದ ಮುಖಂಡ ರಾಮಚಂದ್ರ ಎಂಬುವವರು ಹೇಳಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ