ವರುಣದೇವನ ಕೃಪೆಗೆ ಗೊಂಬೆಗಳ ಮದುವೆ! ಈ ವಿಶೇಷ ಮದುವೆಗೆ ಐದು ದಿನ ತಯಾರಿ ಹೇಗಿತ್ತು ಗೊತ್ತಾ?
ವರನ ಕಡೆಯವರು ವಧುವಿನ ಕಡೆಯವರು ಎಲ್ಲರೂ ಸೇರಿಕೊಂಡು ಬಾಂಧವ್ಯದಿಂದ ಮದುವೆ ಕಾರ್ಯಕ್ರಮ ಸಾಂಪ್ರದಾಯಕವಾಗಿ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ರು...
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಬುಧವಾರ ಮದುವೆ ಸಂಭ್ರಮ, ಸಡಗರ ಜೋರಾಗಿತ್ತು. ಅನ್ನದಾತರು ವರುಣನ ಕೃಪೆಗಾಗಿ ವಿಶೇಷ ಮದುವೆ ಸಮಾರಂಭ ಆಯೋಜಿಸಿದ್ರು. ಹೆಣ್ಣಿನ ಕಡೆಯವ್ರು, ಗಂಡಿನ ಕಡೆಯವ್ರು ಸಂಭ್ರಮದಿಂದ ಹೆಣ್ಣು ಗಂಡು ಇಲ್ಲದೇ ಅದ್ಧೂರಿ ಮದುವೆ ಮಾಡಿದ್ರು. ಅರೇ ಹೆಣ್ಣು ಗಂಡು ಇಲ್ಲದ ಮದುವೆ ಇದೆಂಥಾ ಮದುವೆ ಅನ್ನೋ ಕುತೂಹಲವಾ ಅಂತಿರಾ… ಹೌದು ಲಕ್ಷ್ಮೇಶ್ವರ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ರೈತರು ಕುಟುಂಬಗಳು ಮಳೆಗಾಗಿ ಗೊಂಬೆಗಳ ಮದುವೆ ಅದ್ದೂರಿಯಾಗಿ ಮಾಡಿದ್ರು. ಗಂಡು ಹೆಣ್ಣಿನ ಮದುವೆಯಂತೆ ಸಾಂಪ್ರದಾಯಕವಾಗಿ ಮದುವೆ ಕಾರ್ಯ ಮಾಡಿ ಸಂಭ್ರಮಿಸಿದ್ರು. ಮಳೆಗಾಗಿ ವರುಣದೇವರನ್ನು ಬೇಡಿಕೊಂಡ್ರು.
ವರುಣದೇವನ ಕೃಪೆಗೆ ಗೊಂಬೆಗಳ ಮದುವೆ…. ರೈತ ಸಮುದಾಯ ಈಗಾಗಲೇ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದಾರೆ. ಆದ್ರೆ, ಈಗ ಬಿತ್ತನ ಮಾಡಿದ ಬೆಳೆಗಳಿಗೆ ಮಳೆಯ ಕೊರತೆ ಕಾಡುತ್ತಿದೆ. ಹೀಗಾಗಿ ರೈತ ಕುಟುಂಬಗಳು ಬಿತ್ತಿದ ಬೆಳೆ ಕಾಪಾಡಲು ವರುಣದೇವನ ಮೊರೆ ಹೋಗಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕಪ್ಪೆ ಮದುವೆ, ಕತ್ತೆಗಳ ಮದುವೆ, ಗೊಂಬೆಗಳ ಮದುವೆ ಹೀಗೆ ವಿಶೇಷ ಮದುವೆಗಳ ಮೂಲಕ ವರುಣದೇವನ ಮೊರೆ ಹೋಗ್ತಾರೆ. (ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ)
ವಿಶೇಷ ಮದುವೆಗೆ ಐದು ದಿನ ತಯ್ಯಾರಿ… ಈ ವಿಶೇಷ ಬೊಂಬೆಗಳ ಮದುವೆಗೆ ಮ್ಯಾಗೇರಿ ಓಣಿಯ ರೈತ ಕುಟುಂಬಗಳು ಐದು ದಿನಗಳ ಸಂಭ್ರಮ. ಐದು ದಿನಗಳ ಕಾಲ ರೈತ ಮಹಿಳೆಯರು ಓಣಿಯ ಪ್ರತಿ ಮನೆ ಮನೆಗೆ ಹೋಗಿ ಮಹಿಳೆಯರು ಗುರ್ಜಿ ಆಟ ಆಡಿದ್ರು. ಈ ವೇಳೆ ಪ್ರತಿಯೊಂದು ಮನೆ ರೈತ ಕುಟುಂಬಗಳು ಗುರ್ಜಿ ಆಟವಾಡುವ ಮಹಿಳೆಯರಿಗೆ ಜೋಳ ದಾನವಾಗಿ ನೀಡ್ತಾರೆ. ಕೊನೆಯ ದಿನವಾದ ಇಂದು ಸಂಪ್ರದಾಯವಾಗಿ ಗಂಡು ಹೆಣ್ಣಿನ ಮದುವೆಯಂತೆ ಗೊಂಬೆಗಳ ಮದುವೆ ಮಾಡಿ ಮಳೆಗಾಗಿ ರೈತ ಸಮೂಹ ಪ್ರಾರ್ಥನೆ ಮಾಡಿದರು.
ಮದುವೆಗೆ ವಧು-ವರನ ಕಡೆಯಿಂದ ಎರಡು ಟೀಂ..
ವಧುವಿನ ಕಡೆಯವರು ನೀಲಪ್ಪಗೌಡ ಪಾಟೀಲ್, ಜಯವ್ವ ಪಾಟೀಲ್, ಯಲ್ಲವ್ವ ಡೊಳ್ಳಿನ, ನೀಲವ್ವ ಕಳಗನವರ, ಬಸವ್ವ ಪಾಟೀಲ್ ಆಗಿದ್ರು. ವರನಕಡೆಯವರಾಗಿ ಮಂಜುನಾಥ್ ಪೂಜಾರ, ಮೈಲಾರಪ್ಪ ಪೂಜಾರ, ಜಯವ್ವ ಪೂಜಾರ, ಲಕ್ಷ್ಮವ್ವ ಪೂಜಾರ, ಸಿದ್ದವ್ವ ಪೂಜಾರ, ರೇಣವ್ವ ಪೂಜಾರ ಆಗಿದ್ರು. ಎಲ್ಲರೂ ಸೇರಿ ಸಡಗರ ಸಂಭ್ರಮದಿಂದ ಬೊಂಬೆಗಳ ಮದುವೆ ಮಾಡಿದ್ರು. ನಾಗಪ್ಪ ಕೊರಿ ಎಂಬವರು ಸೋದರ ಮಾವನಾಗಿ ಹಂದರ ಹಾಲಗಂಭ ತಂದರು.
ಬೀರೇಶ್ವರ ದೇವಸ್ಥಾನದಲ್ಲಿ ನಡೆದ ಮದುವೆ ಸಡಗರದಲ್ಲಿ ಸಂಗ್ಟಿ (ಜೋಳದ ನುಚ್ಚು) ಸಾಂಬಾರ್ ಊಟದ ವ್ಯವಸ್ಥೆ ಮಾಡಿದ್ರು. ಗುರ್ಜಿ ಆಡಲು ಹೋದಾಗಿ ಜನ್ರು ಜೋಳ ನೀಡ್ತಾರೆ. ಆ ಜೋಳದ ಸಂಗ್ಟಿ ಸಾರು ಮಾಡಲಾಗಿತ್ತು. ಬಂದ ಬೀಗರು ಮದುವೆ ಬಳಿಕ ಸಂಗ್ಟಿ ಸಾಂಬರ್ ರುಚಿ ಸವಿದು ಚೆನ್ನಾಗಿ ಮಳೆಯಾಗ್ಲಿ ಅಂತ ಬೇಡಿಕೊಂಡ್ರು.
ಸಾಂಪ್ರದಾಯಕವಾಗಿ ಮದುವೆ ಹೇಗೆ ಆಗುತ್ತದೆ ಹಾಗೆಯೇ ಹಂದರ ಹಾಲಗಂಬ, ಬಾಸಿಂಗ್, ಕಾಲು ಉಂಗುರ, ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಮದುವೆಯಲ್ಲಿ ನಡೆಯುವ ವಿವಿಧ ಪೂಜೆ ಹಾಗೂ ಸಂಪ್ರದಾಯ ಕಾರ್ಯಕ್ರಮ ನೆರವೇರಿಸಿದರು. ವರನ ಕಡೆಯವರು ವಧುವಿನ ಕಡೆಯವರು ಎಲ್ಲರೂ ಸೇರಿಕೊಂಡು ಬಾಂಧವ್ಯದಿಂದ ಮದುವೆ ಕಾರ್ಯಕ್ರಮ ಸಾಂಪ್ರದಾಯಕವಾಗಿ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ರು…