ಸರ್ಕಾರಿ ಶಾಲೆ ನಿರ್ಮಾಣಕ್ಕೆ ಮುಂದಾದ ಗ್ರಾಮಸ್ಥರು: ದೇಣಿಗೆ ಸಂಗ್ರಹಕ್ಕೆ ಅಕ್ಷರ ಜೋಳಿಗೆ ಹಾಕಿದ ಸ್ವಾಮೀಜಿ
ಅಕ್ಷರ ಜೋಳಿಗೆ ಹಾಕಿಕೊಂಡು ಮನೆಮನೆಗೆ ಹೋಗಿ ದೇಣಿಗೆ ಸಂಗ್ರಹಿಸುತ್ತಿರುವವರು ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ.
ಕಲಬುರಗಿ: ರಾಜ್ಯದ ಸುಪ್ರಸಿದ್ದ ಮಠದ ಸ್ವಾಮೀಜಿ, ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಆದರೆ ಇಲ್ಲೋರ್ವ ಸ್ವಾಮೀಜಿಯೊಬ್ಬರು ಜೋಳಿಗೆ ಹಿಡಿದು, ಮನೆ ಮನೆಗೆ ಹೋಗುತ್ತಿದ್ದಾರೆ. ಇತ್ತ ಸ್ವಾಮೀಜಿ (Swamiji) ಮನೆಗೆ ಬರುತ್ತಿದ್ದಂತೆ ಮನೆಯಲ್ಲಿದ್ದವರು ಜೋಳಿಗೆಗೆ ಜನರು ಹಣ ಹಾಕುತ್ತಿದ್ದಾರೆ. ಇನ್ನು ಸ್ವಾಮೀಜಿ ಜೋಳಿಗೆ ಹಾಕಿರೋದು ತಮ್ಮ ಸ್ವಂತ ಕೆಲಸಕ್ಕಾಗಿ ಅಲ್ಲಾ, ಬದಲಾಗಿ ಸರ್ಕಾರಿ ಶಾಲೆಗಾಗಿ. ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿಯಲ್ಲಿ ಇದೀಗ ಅಕ್ಷರ ಜೋಳಿಗೆ ಸದ್ದು ಜೋರಾಗಿ ಮಾಡುತ್ತಿದೆ. ಮೂರೇ ದಿನದಲ್ಲಿ ನಲವತ್ತು ಲಕ್ಷ ರೂಪಾಯಿ ಹಣ ಅಕ್ಷರ ಜೋಳಿಗೆಗೆ ಬಿದ್ದಿದೆ. ಅಕ್ಷರ ಜೋಳಿಗೆ ಹಾಕಿಕೊಂಡು ಮನೆಮನೆಗೆ ಹೋಗಿ ದೇಣಿಗೆ ಸಂಗ್ರಹಿಸುತ್ತಿರುವವರು ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ.
ಕಳೆದ ಕೆಲ ದಿನಗಳಿಂದ ಘತ್ತರಗಿ ಗ್ರಾಮದಲ್ಲಿ ಕಡಕೋಳ ಮಡಿವಾಳಪ್ಪನವರ ಪುರಾಣ ಕಾರ್ಯಕ್ರಮ ನಡೆಯುತ್ತಿದೆ. ರಾತ್ರಿ ಪುರಾಣ ಮಾಡುವ ಸ್ವಾಮೀಜಿ, ಮುಂಜಾನೆ ಗ್ರಾಮದ ಮನೆಮನೆಗೆ ಅಕ್ಷರ ಜೋಳಿಗೆ ಹಾಕಿಕೊಂಡು ಹೋಗುತ್ತಿದ್ದಾರೆ. ಸ್ವಾಮೀಜಿ ಮನೆಗೆ ಬಂದಾಗ, ಮನೆಯಲ್ಲಿದ್ದವರು ತಮ್ಮ ಕೈಲಾದಷ್ಟು ಹಣವನ್ನು ಜೋಳಿಗೆಗೆ ಹಾಕುತ್ತಿದ್ದಾರೆ. ಸಾವಿರದಿಂದ ಲಕ್ಷದವರಗೆ ಹಣವನ್ನು ಅಕ್ಷರ ಜೋಳಿಗೆಗೆ ಗ್ರಾಮದ ಜನರು ಹಾಕುತ್ತಿದ್ದಾರೆ.
ಯಾಕಾಗಿ ಅಕ್ಷರ ಜೋಳಿಗೆ ಕಾರ್ಯಕ್ರಮ:
ಇನ್ನು ಸೊನ್ನ ಮಠದ ಡಾ. ಶಿವಾನಂದ ಸ್ವಾಮೀಜಿ ಅಕ್ಷರ ಜೋಳಿಗೆ ಹಾಕಲು ಕಾರಣ ತಮ್ಮ ಮಠ ನಿರ್ಮಾಣಕ್ಕೆ. ಜೊತೆಗೆ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನ್ನೋದು ವಿಶೇಷ. ಘತ್ತರಗಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಿದೆ. ಸರ್ಕಾರಿ ಶಾಲೆಯಲ್ಲಿ 250ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದರೆ ಸದ್ಯ ಸರ್ಕಾರಿ ಪ್ರೌಢಶಾಲೆ ಇದೆ. ಈ ಹಿಂದೆ ಶಾಲೆ ನಿರ್ಮಾಣ ಮಾಡಿದವರು, ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಸ್ಥಳದಲ್ಲೇ ಶಾಲೆಯನ್ನು ಕಟ್ಟಿದ್ದರು. ಇನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯ ಜಾಗದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡ ತುಂಬಾ ಹಳೆಯದಾಗಿದ್ದು, ಬೀಳುವ ಹಂತಕ್ಕೆ ಬಂದಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜುರಾತಿ ಕೂಡಾ ನೀಡಿದೆ. ಆದರೆ ಮುಜರಾಯಿ ಇಲಾಖೆ ಮಾತ್ರ, ತಮ್ಮ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಿಕ್ಕೆ ಅವಕಾಶ ನೀಡುತ್ತಿಲ್ಲ.
ಮುಜರಾಯಿ ಇಲಾಖೆಯ ಜಾಗದಲ್ಲಿ ಬೇರೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲಾ. ಹೀಗಾಗಿ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹೊಸ ಕಟ್ಟಡ ನಿರ್ಮಾಣ ಮಾಡಲು ಜಾಗವಿಲ್ಲ. ಇರೋ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲಿಕ್ಕೆ ಅವಕಾಶ ಇಲ್ಲದ್ದರಿಂದ ವಿದ್ಯಾರ್ಥಿಗಳು ಪರದಾಡುವಂತ್ತಾಗಿದೆ. ಸರ್ಕಾರಿ ಶಾಲೆಯಿದ್ದರೂ ಮಕ್ಕಳ ಸಂಖ್ಯೆ ಹೆಚ್ಚಿದ್ರು, ವಿದ್ಯಾರ್ಥಿಗಳು ಸೂಕ್ತ ಕಟ್ಟಡವಿಲ್ಲದೇ ಇರೋದರಿಂದ ಪರದಾಡುವಂತಾಗಿತ್ತು. ಹೀಗಾಗಿ ಗ್ರಾಮದ ಜನರು ತಾವೇ ಹಣ ಸಂಗ್ರಹಿಸಿ ಭೂಮಿ ಖರೀದಿ ಮಾಡಿ, ಶಾಲಾ ಕಟ್ಟಡ ನಿರ್ಮಾಣ ಮಾಡಲು ಅಕ್ಷರ ಜೋಳಿಗೆ ಆರಂಭಿಸಿದ್ದಾರೆ.
ಈ ಕುರಿತಾಗಿ ಡಾ. ಶಿವಾನಂದ ಸ್ವಾಮೀಜಿ ಮಾತನಾಡಿದ್ದು, ಗ್ರಾಮದಲ್ಲಿ ಸರ್ಕಾರಿ ಶಾಲೆಯ ನಿರ್ಮಾಣಕ್ಕಾಗಿ ಅಕ್ಷರ ಜೋಳಿಗೆ ಹಿಡದಿದ್ದೇವೆ. ಗ್ರಾಮದ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಮೂರೇ ದಿನದಲ್ಲಿ ನಲವತ್ತು ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ಬಡ ಮಕ್ಕಳೇ ಹೆಚ್ಚಾಗಿ ಹೋಗುವ ಸರ್ಕಾರಿ ಶಾಲೆ ಉಳಿಬೇಕು ಅನ್ನೋ ಉದ್ದೇಶದಿಂದ ಈ ಕೆಲಸ ಆರಂಭಿಸಿದ್ದೇವೆ ಎಂದು ಹೇಳಿದರು.
ಸರ್ಕಾರಿ ಶಾಲೆ ನಿರ್ಮಾಣಕ್ಕೆ ಐದು ಎಕರೆ ಭೂಮಿ ಖರೀದಿ
ಸರ್ಕಾರಿ ಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಭೂಮಿ ಖರೀದಿಸಲು ಅವಕಾಶವಿಲ್ಲದ್ದರಿಂದ, ಗ್ರಾಮದ ಜನರೇ ಇದೀಗ ಭೂಮಿ ಖರೀದಿಗೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣಕ್ಕೆ ಐದು ಎಕರೆ ಭೂಮಿ ಖರೀದಿ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಬೇಕಾದ ಹಣವನ್ನು ಗ್ರಾಮದಲ್ಲಿ ಜನರಿಂದ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ಅದಕ್ಕಾಗಿ ಸ್ವಾಮೀಜಿ ಅಕ್ಷರ ಜೋಳಿಗೆ ಹಿಡಿದು ಮನೆಮನೆಗೆ ಹೋಗಿ ದೇಣಿಗೆ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಸಂಚರಿಸಿರುವ ಸ್ವಾಮೀಜಿ, ಮೂರೇ ದಿನದಲ್ಲಿ ನಲವತ್ತು ಲಕ್ಷ ಹಣವನ್ನು ಸಂಗ್ರಹಿಸಿದ್ದಾರೆ. ಇನ್ನು ಒಂದಿಷ್ಟು ಹಣವನ್ನು ಸಂಗ್ರಹಿಸಿ ಗ್ರಾಮದಲ್ಲಿ ಐದು ಎಕರೆ ಜಮೀನು ಖರೀದಿಸಿ ಸರ್ಕಾರಕ್ಕೆ ನೀಡಿ, ಶಾಲೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಘತ್ತರಗಾ ಗ್ರಾಮದಲ್ಲಿ ಸ್ವಾಮೀಜಿ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಅದರಲ್ಲೂ ಅಕ್ಷರ ಜೋಳಿಗೆಗೆ ಹೆಚ್ಚಿನ ಹಣ ಸಂಗ್ರಹವಾಗುತ್ತಿರುವದು ಶಾಲಾ ಮಕ್ಕಳಲ್ಲಿ ಮಂದಹಾಸ ಮೂಡಿಸಿದೆ. ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮಾಡಬೇಕಾಗಿರೋ ಕೆಲಸವನ್ನು ಇದೀಗ ಗ್ರಾಮದ ಜನರು ಮತ್ತು ಸ್ವಾಮೀಜಿ ಮಾಡುತ್ತಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ ಟಿವಿ9, ಕಲಬುರಗಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.