ಜಾತಿ ಗಣತಿ ಜಾರಿ ವಿಚಾರ: ವಿರೋಧಿಸುತ್ತಿರುವ ಒಕ್ಕಲಿಗ, ಲಿಂಗಾಯತರಿಗೆ ಸತೀಶ್ ಜಾರಕಿಹೊಳಿ ಭರವಸೆ

ಜಾತಿಗಣತಿ ವರದಿ ಸಲ್ಲಿಕೆಯಾಗಿ ಕ್ಯಾಬಿನೆಟ್​ನಲ್ಲಿ ಚರ್ಚಿಸಬೇಕು. ನಂತರ ಎರಡು ಸದನದಲ್ಲಿ ಪರ-ವಿರೋಧ ಚರ್ಚೆಯಾಗಬೇಕು. ಈ ವೇಳೆ ಜಾತಿಗಣತಿಯಲ್ಲಿ ತಪ್ಪುಗಳಿದ್ದರೇ ಮತ್ತೆ ಸರ್ವೆ ಮಾಡಿಸಲಿ. ಜಾತಿಗಣತಿ ವರದಿ ಕುರಿತು ಸಾರ್ವಜನಿಕವಾಗಿ ಚರ್ಚೆ ಆಗಬೇಕು ಎಂದು ಸತೀಶ್​ ಜಾರಕಿಹೊಳಿ ಹೇಳಿದರು.

ಜಾತಿ ಗಣತಿ ಜಾರಿ ವಿಚಾರ: ವಿರೋಧಿಸುತ್ತಿರುವ ಒಕ್ಕಲಿಗ, ಲಿಂಗಾಯತರಿಗೆ ಸತೀಶ್ ಜಾರಕಿಹೊಳಿ ಭರವಸೆ
ಸಚಿವ ಸತೀಶ್ ಜಾರಕಿಹೊಳಿ
Follow us
ಪ್ರಸನ್ನ ಗಾಂವ್ಕರ್​
| Updated By: ವಿವೇಕ ಬಿರಾದಾರ

Updated on: Nov 06, 2023 | 1:23 PM

ಬೆಂಗಳೂರು ನ.06: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕಾಂತರಾಜ್ ಜಾತಿ ಗಣತಿ ವರದಿ (Kantharaj Caste Census Report) ಭಾರೀ ಸುದ್ದು ಮಾಡುತ್ತಿದೆ. ಜಾತಿ ಗಣತಿ ವರದಿ ಜಾರಿಗೆ ಸಂಬಂಧ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾತನಾಡಿ ಜಾತಿ ಗಣತಿ ವರದಿಯಲ್ಲಿ ಒಳಪಂಗಡಗಳನ್ನು ಬಿಟ್ಟಿದ್ದಾರೆಂಬ ಆತಂಕ ಒಕ್ಕಲಿಗ (Vokkaliga), ಲಿಂಗಾಯತರಿಗೆ (Lingayat) ಇರಬಹುದು. ಈ ಎಲ್ಲಾ ಅಂಶಗಳನ್ನು ಜಾತಿಗಣತಿ ವರದಿಯಲ್ಲಿ ‌ಸೇರಿಸಬಹುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಾತಿಗಣತಿ ವರದಿ ಸಲ್ಲಿಕೆಯಾಗಿ ಕ್ಯಾಬಿನೆಟ್​ನಲ್ಲಿ ಚರ್ಚಿಸಬೇಕು. ನಂತರ ಎರಡು ಸದನದಲ್ಲಿ ಪರ-ವಿರೋಧ ಚರ್ಚೆಯಾಗಬೇಕು. ಈ ವೇಳೆ ಜಾತಿಗಣತಿಯಲ್ಲಿ ತಪ್ಪುಗಳಿದ್ದರೇ ಮತ್ತೆ ಸರ್ವೆ ಮಾಡಿಸಲಿ. ಜಾತಿಗಣತಿ ವರದಿ ಕುರಿತು ಸಾರ್ವಜನಿಕವಾಗಿ ಚರ್ಚೆ ಆಗಬೇಕು ಎಂದರು.

ಏನಿದು ಕಾಂತರಾಜ್​ ಜಾತಿ ಗಣತಿ

2014ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಾದ್ಯಂತ ಎಲ್ಲ ಜಾತಿ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಗೆ ಆದೇಶ ನೀಡಿದ್ದರು. ಆಗ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಹೆಚ್​. ಕಾಂತರಾಜ್​ ಅವರ ನೇತೃತ್ವದಲ್ಲಿ ಜಾತಿ ಗಣತಿ ನಡೆದಿತ್ತು. 2106ರಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು, ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬ ಕಾರಣಕ್ಕೆ ಸಮೀಕ್ಷೆ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ: ಜಾತಿ ಗಣತಿ ವರದಿ: ಅತ್ತ ಹೈಕಮಾಂಡ್, ಇತ್ತ ಸಮುದಾಯ: ಅಡಕತ್ತರಿಯಲ್ಲಿ ಸಿಲುಕಿದ ಡಿಕೆ ಶಿವಕುಮಾರ್

ಜಾತಿ ಗಣತಿ ಉದ್ದೇಶ ಏನು?

1931ರಲ್ಲಿ ನಡೆದಿದ್ದ ಜನಗಣತಿಯ ನಂತರ ಮತ್ತೆ ಜಾತಿ ಗಣತಿ ನಡೆದಿಲ್ಲ. ಇದರಿಂದ ಜಾತಿ/ ಸಮುದಾಯದವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ಸಿಗುತ್ತಿಲ್ಲ. ಈ ಸಮಸ್ಯೆಯಿಂದ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಜನರಿಗೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗಿದೆ. ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ‌ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ