ಜಾತಿ ಗಣತಿ ವರದಿ: ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು
ಜಾತಿ ಜನಗಣತಿ ವರದಿ ಜಟಾಪಟಿಯ ಜ್ವಾಲೆ ಸರ್ಕಾರದ ಬುಡಕ್ಕೆ ಬಂದು ನಿಂತಿದೆ. 2015ರಲ್ಲಿ ನಡೆಸಲಾಗಿದ್ದ ಜಾತಿ ಜನಗಣತಿಯ ವರದಿ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ವರದಿಯ ಮೂಲ ಪ್ರತಿಯೇ ಲಭ್ಯ ಇಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಇನ್ನೂ ಕೆಲವರು ಈ ವರದಿ ಸರಿ ಇಲ್ಲ ಎಂದು ವಾದಿಸುತ್ತಿದ್ದಾರೆ. ಇನ್ನು ಇದಕ್ಕೆ ಸ್ವತಃ ಕಾಂತರಾಜು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಮ್ಮ ವರದಿಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, (ನವೆಂಬರ್ 23): ರಾಜ್ಯ ರಾಜಕಾರಣದಲ್ಲೀಗ ಕಾಂತರಾಜು ಅವರ ಜಾತಿ ಗಣತಿ ವರದಿ ಭಾರಿ ಸದ್ದು ಮಾಡುತ್ತಿದೆ. ಕೆಲ ಸಮುದಾಯಗಳು ವರದಿ ಬಿಡುಗಡೆಗೆ ಆಗ್ರಹಿಸಿದ್ದರೆ, ಇನ್ನೂ ಕೆಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿತ್ತಿವೆ. ಅದರಲ್ಲೂ ಈ ಜಾತಿ ಗಣತಿ ವರದಿ ಸರಿಯಾಗಿಲ್ಲ. ಎಸಿ ರೂಮನಲ್ಲಿ ಕುಳಿತುಕೊಂಡು ವರದಿ ಸಿದ್ಧಪಡಿಸಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನು ಕೊಟ್ಟ ಜಾತಿಗಣತಿ ವರದಿ ನೈಜವಾಗಿದೆ, ವೈಜ್ಞಾನಿಕವಾಗಿಯೇ ಇದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿಂದು ಮಾಧ್ಯಮಗ ಕೊತೆ ಮಾತನಾಡಿದ ಕಾಂತರಾಜು, ಜಾತಿಗಣತಿ ವರದಿ ನೋಡದೇ ವರದಿ ಅವೈಜ್ಞಾನಿಕ ಎನ್ನುವುದು ಸರಿಯಲ್ಲ. 40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಜಾತಿ, ಲಿಂಗ, ಧರ್ಮ, ಅಸ್ತಿ-ಪಾಸ್ತಿ ಎಲ್ಲವೂ ಸೇರಿ 55 ಪ್ರಶ್ನೆ ಕೇಳಿದ್ದೇವೆ. ಕೂಲಂಕಷವಾಗಿ ಅಂಕಿ ಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದ್ದು, ರಾಜ್ಯ ಸರ್ಕಾರ ವರದಿ ನೋಡಿದ ಬಳಿಕ ಮುಂದಿನ ತೀರ್ಮಾನ ಮಾಡಲಿ ಎಂದರು.
ಒಕ್ಕಲಿಗರು, ಲಿಂಗಾಯತ ಸಮುದಾಯ ವರದಿಗೆ ವಿರೋಧ ಮಾಡುತ್ತಿವೆ. ವರದಿ ನೋಡಿ ಮೇಲೆ ತಪ್ಪು ಇದ್ದರೆ ನಾನು ಒಪ್ಪಿಕೊಳ್ಳುತ್ತೇನೆ, ಜಾತಿಗಣತಿ ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಎನ್ನುವುದು ಸರಿಯಲ್ಲ. ವರದಿಯ ಒಂದು ವಾಲ್ಯೂಮ್ಗೆ ಕಾರ್ಯದರ್ಶಿ ಸಹಿ ಹಾಕಿಲ್ಲ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಇನ್ನು ಜಾತಿ ಗಣತಿ ವರದಿ ಕಾಣೆಯಾಗಿದೆ ಎಂದು ಹರಿದಾಡುತ್ತಿರುವ ಸುದ್ದಿ ಬಗ್ಗೆ ಮಾತನಾಡಿರುವ ಕಾಂತರಾಜು, ಮೂಲ ಪ್ರತಿ ಕಾಣೆಯಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. 2019ರಲ್ಲಿ ನಾನು ವರದಿ ಕೊಟ್ಟಿದ್ದು, ನಾನು ಇದ್ದಾಗ ಮೂಲಪ್ರತಿ ಇತ್ತು. ಇದು ಜಾತಿಗಣತಿ ಅಲ್ಲ, ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಎಂದು ಹೇಳಿದರು.
ಯಾರು ಬೇಕಾದರೂ ಅಭಿಪ್ರಾಯ ಹೇಳಬಹುದು. ರಿಜೆಕ್ಟ್ ಮಾಡಿ ಅಂತ ಹೇಳಬಹುದು. ಆದರೆ ಮೊದಲು ವರದಿ ನೋಡಲಿ ಅಮೇಲೆ ಯಾರು ಏನು ಬೇಕಾದರು ಹೇಳಲಿ. ನೋಡದೇ ವರದಿ ಸರಿ ಇಲ್ಲ ಎನ್ನುವುದು ಸರಿಯಲ್ಲ. ಕುಮಾರಸ್ವಾಮಿ ಅವಧಿಯಲ್ಲಿ ವರದಿ ನೀಡಲು ಅಪಾಯಿಂಟ್ ಮೆಂಟ್ ಕೇಳಿದ್ದೆವು. ಆದ್ರೆ, ಅವರು ನಮಗೆ ಸಮಯ ಕೊಟ್ಟಿರಿಲಿಲ್ಲ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ