ಬೆಳಗಾವಿ: ಕರ್ನಾಟಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೇಯಕಕ್ಕೆ (Anti Conversion Bill) ಕೊನೆಗೂ ವಿಧಾನಸಭೆಯಲ್ಲಿ (Assembly Session) ಅಂಗೀಕಾರ ದೊರೆತಿದೆ. ಇದರಿಂದ ಸದನದಲ್ಲಿ ಕೋಲಾಹಲ ಉಂಟಾದ ಕಾರಣ 10 ನಿಮಿಷ ಕಲಾಪವನ್ನು ಮುಂದೂಡಲಾಯಿತು. ವಿರೋಧ ಪಕ್ಷಗಳ ವಿರೋಧದ ನಡುವೆಯೇ ಮತಾಂತರ ನಿಷೇಧ ಮಸೂದೆಗೆ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕಾರ ದೊರೆತಿದೆ. ಕರ್ನಾಟಕ ಸರ್ಕಾರವು ಮಂಗಳವಾರ (ಡಿ.21) ವಿಧಾನಸಭೆಯಲ್ಲಿ ಮಂಡಿಸಿದ್ದ ಮತಾಂತರ ನಿಷೇಧ ಕಾಯ್ದೆಗೆ ಗುರುವಾರ (ಡಿ.23) ಸದನದ ಅನುಮೋದನೆ ದೊರೆಯಿತು. ಪ್ರತಿಪಕ್ಷಗಳ ತೀವ್ರ ಆಕ್ಷೇಪ, ಗದ್ದಲದ ನಡುವೆಯೂ ವಿಧೇಯಕವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Speaker Vishweshwar Hegde Kageri) ಧ್ವನಿಮತಕ್ಕೆ ಹಾಕಿದರು. ಧ್ವನಿಮತದ ಮೂಲಕವೇ ವಿಧೇಯಕವನ್ನು ಸದನ ಅಂಗೀಕರಿಸಿತು.
ಚರ್ಚೆ ನಡೆಸುವಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದು ಆಡಳಿತ ಪಕ್ಷದ ಸದಸ್ಯರನ್ನು ಕರೆಳಿಸಿತ್ತು. ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ‘ನಾವೆಲ್ಲರೂ ಆರ್ಎಸ್ಎಸ್, ದೇಶಭಕ್ತಿಯ ಸಂಸ್ಕಾರ ಪಡೆದವರು’ ಎಂದು ಘೋಷಿಸಿದರು. ಈಶ್ವರಪ್ಪ ಅವರ ಮಾತಿಗೆ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗದ್ದಲದ ಮಧ್ಯೆಯೂ ಈಶ್ವರಪ್ಪ ಆರ್ಭಟ ಮುಂದುವರಿಸಿದರು. ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ಎದುರು ನಿಂತು ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ಸುದ್ದಿಗೆ ಬಂದರೆ ಚಿಂದಿಚಿಂದಿ’ ಎಂಬ ಸಚಿವ ಈಶ್ವರಪ್ಪ ಮಾತನ್ನು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಖಂಡಿಸಿದರು. ಚರ್ಚೆಗೆ ಉತ್ತರ ಕೊಡುವಂತೆ ಗೃಹಸಚಿವರಿಗೆ ಸ್ಪೀಕರ್ ಸೂಚಿಸಿದರು. ಸದನದಲ್ಲಿ ಭಾರತ್ ಮಾತಾ ಕೀ ಜೈ, ಜೈ ಶ್ರೀ ರಾಂ ಘೋಷಣೆಗಳನ್ನು ಬಿಜೆಪಿ ಸದಸ್ಯರು ಮೊಳಗಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚರ್ಚೆ ಮಾಡಲು ಇನ್ನೇನೂ ಉಳಿದಿಲ್ಲ. ಮುಖ್ಯಮಂತ್ರಿ ಉತ್ತರ ಕೇಳಿ, ವಿಧೇಯಕ ಪಾಸ್ ಮಾಡಿ ಎಂದು ಮಾಜಿ ಸಿಟ್ಟಿನಿಂದ ಮಾತನಾಡಿದರು. ‘ಪ್ರತಿಪಕ್ಷಗಳು ಸಭಾತ್ಯಾಗ ಮಾಡಲೆಂದೇ ಬಾವಿಗೆ ಇಳಿದಿದ್ದಾರೆ. ನೀವು ಯಾಕೆ ಅವರ ಬಗ್ಗೆ ತಲೆ ಕೆಡಿಸಿಕೊಳ್ತೀರಾ ಎಂದು ಸ್ಪೀಕರ್ಗೆ ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹಾಗೂ ಅನುಮೋದನೆ ಕೋರಿಕೆಯ ನಂತರ ವಿಧೇಯಕವನ್ನು ಸ್ಪೀಕರ್ ಮತಕ್ಕೆ ಹಾಕಿದರು. ಗದ್ದಲ, ಕೋಲಾಹಲದ ನಡುವೆಯೇ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರವಾಯಿತು.
ಆರ್ಎಸ್ಎಸ್ ನಿಲುವು ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಾರೂ ಎಂದೂ ಮತಾಂತರ ಆಗಬಾರದು ಎನ್ನುವುದು ಆರ್ಎಸ್ಎಸ್ ನಿಲುವು. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆರ್ಎಸ್ಎಸ್ ನಿಲುವು ಮುಕ್ತವಾಗಿದೆ ಎಂದರು.
ಮತಾಂತರ ನಿಷೇಧ ಕಾಯ್ದೆಯ ಮುಖ್ಯಾಂಶಗಳು:
1) ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.
2) ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡತಕ್ಕದ್ದು
3) ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡತಕ್ಕದ್ದು
4) ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡತಕ್ಕದ್ದು
5) ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು
6) ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸತಕ್ಕದ್ದು
7) ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡತಕ್ಕದ್ದು
8) ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡತಕ್ಕದ್ದು
9) ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ ಸ್ವಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮ ವಹಿಸುವುದು
ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಆರ್ಎಸ್ಎಸ್ನವರ ಕೂಸು; ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ
Karnataka Assembly Session Live: ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
Published On - 5:18 pm, Thu, 23 December 21