ಬೆಂಗಳೂರು, (ನವೆಂಬರ್ 21): ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಅಭ್ಯರ್ಥಿಗಳಿಗೆ ಎದೆಯಲ್ಲಿ ಡವಡವ ಶುರುವಾಗಿದೆ. ಕೇವಲ ಅಭ್ಯರ್ಥಿಗಳು ಮಾತ್ರವಲ್ಲ ಕಾರ್ಯಕರ್ತರನ್ನೂ ಫಲಿತಾಂಶದ ಕುತೂಹಲ ಹೆಚ್ಚಿಸಿದೆ.ಅದರಲ್ಲೂ ಗೊಂಬೆನಾಡು ಚನ್ನಪಟ್ಟಣದ ಸಾಮ್ರಾಜ್ಯಾಧಿಪತಿ ಯಾರಾಗುತ್ತಾರೆ ಎನ್ನುವುದು ಸಾಕಷ್ಟು ಕುತೂಹಲವನ್ನೇ ಹುಟ್ಟಿಸಿದೆ. ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಮಧ್ಯೆ ಟಫ್ ಫೈಟ್ ನಡೆಯುತ್ತಿದೆ. ಯಾರು ಗೆಲ್ಲುತ್ತಾರೆ ಎಂದು ವಿಶ್ಲೇಷಣೆ ಮಾಡುವುದಕ್ಕೆ ಆಗದಿರುವಷ್ಟು ಜಿದ್ದಾಜಿದ್ದಿ ಏರ್ಪಟ್ಟಿದೆ. ಇದರಿಂದ ಬೆಟ್ಟಿಂಗೆ ಭರಾಟೆ ಜೋರಾಗಿದೆ. ಚನ್ನಪಟ್ಟಣ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಮಂಡ್ಯದಲ್ಲೂ ಚನ್ನಪಟ್ಟಣ ಅಭ್ಯರ್ಥಿಯ ಪರ ಬೆಟ್ಟಿಂಗ್ ನಡೆದಿದೆ. ತಮ್ಮ ಅಭ್ಯರ್ಥಿ ಗೆಲುವು ಖಚಿತವೆಂದು ಕಾರ್ಯಕರ್ತರು ಬೆಟ್ಟಿಂಗ್ ಕಟ್ಟಿದ್ದಾರೆ. ಕಾರ್ಯಕರ್ತರು, ಆತ್ಮೀಯರು ಮತ್ತು ಪರಿಚಯಸ್ಥರ ಮಧ್ಯೆ ಬೆಟ್ಟಿಂಗ್ ನಡೆದಿದೆ. ಅರಂಭದಲ್ಲಿ ಯೋಗೇಶ್ವರ್ ಪರ ಹೆಚ್ಚು ಬೆಟ್ಟಿಂಗ್ ಕಟ್ತಿದ್ದ ಕಾರ್ಯಕರ್ತರು ಇದೀಗ ನಿಖಿಲ್ ಕುಮಾರಸ್ವಾಮಿ ಪರ ಹೆಚ್ಚು ಬಾಜಿ ಕಟ್ತಿದ್ದಾರೆ. ಕೋಟಿ ಕೋಟಿ ಎಂಬಂತೆ ಬೆಟ್ಟಿಂಗ್ ನಡೆದಿದೆ. ಇದಕ್ಕೆ ಕಾರಣವೇ ಫಲಿತಾಂಶಕ್ಕೂ ಮುನ್ನ ಸಿಪಿ.ಯೋಗೇಶ್ವರ್ ಆಡಿದ ಸೋಲಿನ ಮಾತು.
ಹೌದು..ಮೊನ್ನೇ ಬಹಿರಂಗವಾಗಿಯೇ ಸಿ.ಪಿ.ಯೋಗೇಶ್ವರ್ ಆಡಿದ ಸೋಲಿನ ಮಾತಿನಿಂದ ಇದೀಗ ಕಾಂಗ್ರೆಸ್ ಕಾರ್ಯಕರ್ತರು ಬೆಟ್ಟಿಂಗ್ ಕಟ್ಟುವುದಕ್ಕೆ ಹಿಂದೇಟು ಹಾಕ್ತಿದ್ದಾರಂತೆ. ಒನ್ ಸೈಡ್ ಗೆಲುವಿನ ಲೆಕ್ಕಾಚಾರದಲ್ಲಿರೋ ಕಾಂಗ್ರೆಸ್ ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸವೂ ತೋರಿಸುತ್ತಿಲ್ಲ ಎನ್ನಲಾಗಿದೆ.
ಇನ್ನು ಹೈವೋಲ್ಟೇಜ್ ಕದನ ಕಣವಾಗಿರುವ ಶಿಗ್ಗಾಂವಿಯಲ್ಲೂ ಬಾಜಿ ಭರಾಟೆ ಜೋರಾಗಿದೆ. ಅದರಲ್ಲೂ ಈ ಬಾರಿ ಸಂಸದ, ಮಾಜಿ ಸಿಎಂ ಬೊಮ್ಮಾಯಿ ಪುತ್ರ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋದ್ರಿಂದ, ತೀವ್ರ ಕುತೂಹಲ ಮೂಡಿಸಿದೆ. ಶಿಗ್ಗಾಂವಿಯ ಹಳ್ಳಿಯೊಂದರಲ್ಲಿ ಜೋಡೆತ್ತುಗಳನ್ನ ಬಾಜಿ ಕಟ್ಟೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಒಬ್ಬರಿಗೊಬ್ಬರು ಜೋಡೆತ್ತುಗಳನ್ನ ಬಾಜಿ ಕಟ್ಟಿ ನಮ್ಮ ಅಭ್ಯರ್ಥಿಯೇ ಗೆಲ್ಲುವುದು ಎಂದು ಚಾಲೆಂಜ್ ಹಾಕಿದ್ದಾರೆ. ಇನ್ನು ಶಿಗ್ಗಾಂವಿಯಲ್ಲಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ ಎನ್ನುವ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ.
ಎರಡೂ ಕ್ಷೇತ್ರಗಳಿಗೆ ಹೋಲಿಸಿದರೆ ಸಂಡೂರಿನಲ್ಲಿ ಅಷ್ಟೇನು ಬೆಟ್ಟಿಂಗ್ ನಡೆಯುತ್ತಿಲ್ಲ. ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಸಂಡೂರಿನಲ್ಲಿ ಈ ಬಾರಿಯೂ ಕೈವಶವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಮೀಕ್ಷೆಗಳ ಪ್ರಕಾರ ಸಂಡೂರಿನಲ್ಲಿ ಕಾಂಗ್ರೆಸ್, ಚನ್ನಪಟ್ಟಣ ಜೆಡಿಎಸ್ ಹಾಗೂ ಶಿಗ್ಗಾಂವಿ ಬಿಜೆಪಿ ಪಾಲಾಗಲಿದೆ ಎಂದು ತಿಳಿಸಿವೆ. ಅದರಲ್ಲೂ ಹೇಳಿ ಕೇಳಿ ಕಾಂಗ್ರೆಸ್ನ ಭದ್ರಕೋಟೆಯಾಗಿರುವುದರಿಂದ ಬಿಜೆಪಿ ಕಾರ್ಯಕರ್ತರು ಬೆಟ್ಟಿಂಗ್ ಕಟ್ಟುತ್ತಿಲ್ಲ ಎನ್ನಲಾಗಿದೆ. ಆದ್ರೆ, ಬಿಜೆಪಿ ನಾಯಕರು ಗೆಲುವಿನ ಆಶಾಭಾವನೆ ಹೊಂದಿದ್ದಾರೆ. ಆಡಳಿತ ವಿರೋಧಿ ಅಲೆ ಇದ್ದಿದ್ದರಿಂದ ಈ ಬಾರಿ ಮತದಾರ ಹೊಸ ಬದಲಾವಣೆ ಬಯಸಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾನೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ